ಹೆಚ್ಚಿದ ತಾಪಮಾನದಿಂದ ಜನತೆಗೆ 'ಹೀಟ್ ಸ್ಟ್ರೋಕ್' ಕಾಯಿಲೆ ಭೀತಿ

Update: 2019-03-12 16:53 GMT

ಬೆಂಗಳೂರು, ಮಾ.12: ಹೆಚ್ಚಿರುವ ತಾಪಮಾನ, ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಾಗುವ ಸಂಭವವಿದ್ದು, ಜನರು ‘ಹೀಟ್ ಸ್ಟ್ರೋಕ್’ ಎಂಬ ಕಾಯಿಲೆಗೆ ಒಳಗಾಗುವ ಸಾಧ್ಯತೆಗಳಿದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ.

ಮಾರ್ಚ್‌ನಿಂದ ಆರಂಭವಾಗಬೇಕಿದ್ದ ಬೇಸಿಗೆ ಫೆಬ್ರವರಿಯಿಂದಲೇ ಆರಂಭಗೊಂಡಿತ್ತು. ಇದೀಗ ಎಲ್ಲಡೆ 35 ರಿಂದ 40 ರಷ್ಟು ತಾಪಮಾನ ದಾಖಲಾಗುತ್ತಿದೆ. ಈ ಪರಿಯ ಬಿಸಿಲಿನಿಂದಾಗಿ ಈಗಾಗಲೇ ಹಲವು ಆಸ್ಪತ್ರೆಗಳಲ್ಲಿ ತಲೆನೋವು, ತಲೆ ಸುತ್ತುವಿಕೆ ಸೇರಿದಂತೆ ಹೀಟ್ ಸ್ಟ್ರೋಕ್ ಖಾಯಿಲೆಗೆ ಸಂಬಂಧಿಸಿದಂತೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದುದರಿಂದಾಗಿ ಆರೋಗ್ಯದ ಕುರಿತು ಜಾಗೃತಿ ವಹಿಸುವಂತೆ ವೈದ್ಯರು ತಿಳಿಸಿದ್ದಾರೆ.

ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಕಾಂಕ್ರೀಟೀಕರಣದ ಪ್ರಭಾವದಿಂದಾಗಿ ಪರಿಸರದ ಮೇಲೆ ಗಮನ ಹರಿಸುವುದನ್ನು ಮರೆತಿದ್ದೇವೆ. ಹೀಗಾಗಿ, ಬಿಸಿಲಿನ ಪ್ರಮಾಣ ಅಧಿಕವಾಗಿ ಒಣಹವೆ ಕಂಡುಬಂದಿದೆ. ಹೆಚ್ಚಿನ ವಾಹನಗಳು, ಕಾರ್ಖಾನೆಗಳಿಂದಾಗಿ ವಾಯುಮಾಲಿನ್ಯ ಪ್ರಮಾಣವೂ ಅಧಿಕವಾಗಿದೆ. ಅತಿಯಾದ ಬಿಸಿಲಿನಿಂದ ಬೆವರು ಇಳಿಯುತ್ತಿದೆ. ನಿರ್ಜಲೀಕರಣ ಉಂಟಾಗಿ ಈಗಾಗಲೇ ತಲೆನೋವು, ತಲೆ ತಿರುಗುವಿಕೆಯಂತಹ ಪ್ರಕರಣಗಳು ವರದಿಯಾಗುತ್ತಿದ್ದು, ಜನರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾದ ತುರ್ತು ಅಗತ್ಯವಿದೆ ಎಂದು ಬೆಂಗಳೂರಿನ ಆಸ್ಪತ್ರೆಯ ಹಿರಿಯ ತಜ್ಞರೊಬ್ಬರು ಹೇಳಿದ್ದಾರೆ.

ಸನ್ ಸ್ಟ್ರೋಕ್ ಎಂದರೇನು?: ಪರಿಸರದಲ್ಲಿ ತಾಪಮಾನ ಅಧಿಕವಾದಾಗ ಈ ಹೀಟ್‌ಸ್ಟ್ರೋಕ್(ಸನ್ ಸ್ಟ್ರೋಕ್) ಎಂಬ ಖಾಯಿಲೆ ಬರುತ್ತದೆ. ತಾಪಮಾನದ ಹೆಚ್ಚಳದಿಂದ ಮನುಷ್ಯನ ದೇಹದಲ್ಲಿ ಉಷ್ಣತೆ 104 ಕ್ಕಿಂತ ಅಧಿಕವಾದಾಗ, ಉಷ್ಣತೆ ಕಡಿಮೆ ಮಾಡುವ ಮಿದುಳಿನ ಅಂಶ ನಿಯಂತ್ರಣ ತಪ್ಪಿದ ಸಂದರ್ಭದಲ್ಲಿ ಈ ಖಾಯಿಲೆಗೆ ಗುರಿಯಾಗಬೇಕಾಗುತ್ತದೆ. ಇದರಿಂದ ಸಾವು ಸಂಭವಿಸುವ ಸಾಧ್ಯತೆಯೂ ಇದೆ ಎಂದು ವೈದ್ಯರು ಹೇಳುತ್ತಾರೆ.

ಚಿಕ್ಕ ಮಕ್ಕಳು, 60 ವರ್ಷ ಮೇಲ್ಪಟ್ಟ ವದ್ಧರು, ರೋಗಿಗಳು, ದೀರ್ಘಕಾಲ ಔಷಧ ಸೇವಿಸುತ್ತಿರುವವರು, ಮಧುಮೇಹ, ಅಧಿಕ ರಕ್ತದ ಒತ್ತಡ, ಮೈಗ್ರೆನ್ ಇರುವವರು ಹಾಗೂ ಹೆಚ್ಚು ಕಾಲ ಬಿಸಿಲಿನಲ್ಲಿ ಹಾಗೂ ಕಾರ್ಖಾನೆಗಳಲ್ಲಿ ಶಾಖದ ಸ್ಥಳಗಳಲ್ಲಿ ಕೆಲಸ ಮಾಡುವವರು ಹೆಚ್ಚು ಎಚ್ಚರ ವಹಿಸುವ ಅಗತ್ಯವಿದೆ.

ಲಕ್ಷಣಗಳು: ತಲೆ ನೋವು, ತಲೆ ತಿರುಗುವಿಕೆ, ತಲೆ ಬಿಸಿಯಾಗುವುದು, ಒಣಗಿದ ಚರ್ಮ, ಹೆಚ್ಚಿದ ದೇಹದ ಉಷ್ಣತೆ, ವಾಕರಿಕೆ, ವಾಂತಿ, ನಿರ್ಜಲೀಕರಣ, ಸ್ನಾಯು ಸೆಳೆತ, ಬೆವರು ಬರದಿರುವುದು ಇದರ ಲಕ್ಷಣಗಳಾಗಿವೆ. ಇದು ಗಂಭೀರವಾದರೆ ಪ್ರಜ್ಞೆ ತಪ್ಪುತ್ತಾರೆ ಅಥವಾ ಏಕಾಏಕಿ ಕೋಮಾ ಸ್ಥಿತಿಗೆ ತಲಪುತ್ತಾರೆ ಎಂದು ವೈದ್ಯರು ಎಚ್ಚರಿಸಿದ್ದಾರೆ.

ಏನು ಮಾಡಬೇಕು: ಈ ಖಾಯಿಲೆಯ ಲಕ್ಷಣಗಳು ಕಂಡು ಬಂದಲ್ಲಿ ರೋಗಿಯನ್ನು ಕೂಡಲೇ ನೆರಳಿನಲ್ಲಿ ಅಥವಾ ತಂಪಾದ ಸ್ಥಳದಲ್ಲಿ ಕೂರಿಸಬೇಕು. ನೀರು ಕುಡಿಸಿ ಉಪಚರಿಸಬೇಕು. ತೀವ್ರ ತಲೆನೋವು, ತಲೆ ಸುತ್ತು, ತಲೆ ಬಿಸಿಯಾಗಿದ್ದರೆ ಒದ್ದೆ ಬಟ್ಟೆಯಿಂದ ಮುಖ, ಮೈಯನ್ನು ಒರೆಸಬೇಕು. ತಲೆಯ ಮೇಲೆ ತಣ್ಣಿರು ಬಟ್ಟೆ ಹಾಕಬೇಕು.

ಎಚ್ಚರಿಕೆ ಕ್ರಮಗಳು:

*ಹೆಚ್ಚು ನೀರು (ಕುದಿಸಿ ಆರಿಸಿದ ನೀರು) ಸೇವಿಸಬೇಕು.

*ಗಂಜಿ, ಮಜ್ಜಿಗೆ, ಎಳನೀರು, ನಿಂಬೆ ರಸದಂತಹ ತಂಪು ಪಾನೀಯ ಸೇವನೆ

*ಹೊರಗಿನ ಆಹಾರ ಮತ್ತು ಪಾನೀಯಗಳಿಂದ ದೂರವಿರಬೇಕು.

*ಮದ್ಯಪಾನ, ಧೂಮಪಾನ ಸೇವನೆ ಒಳ್ಳೆಯದಲ್ಲ.

*ಮನೆಯಲ್ಲೆ ತಯಾರಿಸಿದ ಆಹಾರ ಸೇವನೆ

*ಮಾಂಸ, ಮಸಾಲೆ ಪದಾರ್ಥಗಳ ಮಿತ ಬಳಕೆ

*ಉರಿ ಬಿಸಿಲಿನಲ್ಲಿ ಹೊರಗಿನ ಓಡಾಟ ಕಡಿಮೆ ಮಾಡಬೇಕು.

*ಬೆಚ್ಚಗಿನ ಅಥವಾ ತಣ್ಣೀರಿನಿಂದ ಸ್ನಾನ ಮಾಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News