ಮಹಿಳಾ ವಿಮೋಚನೆಯ ಆಶಯಗಳು ಸಾಕಾರವಾಗಲಿ

Update: 2019-03-12 18:31 GMT

ವರ್ಗ, ಜಾತಿ, ಜನಾಂಗೀಯ, ಪ್ರಾಂತೀಯ ಹೀಗೆ ಎಲ್ಲಾ ರೀತಿಯ ಅಸಮಾನತೆಗಳು, ಭೇದ ಮನೋಭಾವಗಳು, ತಾತ್ಸಾರಗಳು ನಿರ್ದಿಷ್ಟವಾಗಿ ಸಮಾಜದ ಬಹುಸಂಖ್ಯಾತ ತಳ ಸಮುದಾಯಗಳ ಮಹಿಳೆಯರ ಮೇಲೆ, ಆಯಾ ಸಮುದಾಯಗಳ ಪುರುಷರಿಗಿಂತ ಹೆಚ್ಚು ತೀವ್ರವಾಗಿ ಬಾಧಿಸುತ್ತದೆ. ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಇವೆಲ್ಲಾ ಬಹುತೇಕ ಬಾರಿ ಪುರುಷರಿಗಿಂತ ಹಲವು ಪಟ್ಟು ಹೆಚ್ಚು ಮಹಿಳೆಯರನ್ನು ಬಾಧಿಸುವುದು ಮಾಮೂಲಿ ವಿಚಾರವಾಗಿದೆ. ಆದರೆ ಈ ವಿಚಾರವನ್ನು ಅಂಗೀಕರಿಸಿ ಅದನ್ನು ತಮ್ಮ ಸಾಮಾಜಿಕ ಹಾಗೂ ವೈಯಕ್ತಿಕ ಆಚರಣೆಗಳಲ್ಲಿ ಸರಿಪಡಿಸಲು ಶ್ರಮಿಸುವ ಮನಸ್ಸುಗಳು ಬಹಳ ಕಡಿಮೆಯೆಂದೇ ಹೇಳಬೇಕು.


ಮೊನ್ನೆ ಮಾರ್ಚ್ 8ರಂದು ಮತ್ತೊಂದು ಮಹಿಳಾ ದಿನಾಚರಣೆ ಕಳೆದು ಹೋಯಿತು. 21ನೇ ಶತಮಾನ ಮುಗಿಯುವ ಹಂತವನ್ನು ನಾವೆಲ್ಲರೂ ಹಾದು ಹೋಗುತ್ತಿದ್ದೇವೆ. ಆದರೆ ಲಿಂಗ ಸಮಾನತೆಯ ವಿಚಾರದಲ್ಲಿ ಆಧುನಿಕವೆನ್ನುವ, ನಾಗರಿಕವೆಂದು ಹೇಳಿಕೊಳ್ಳುವ ಈ ಸಮಾಜದಲ್ಲೂ ಬಹಳ ಹಿಂದೆ ಬಿದ್ದಿರುವುದು ಎದ್ದು ಕಾಣುವ ವಿಚಾರ. ಯಾರೋ ಕೆಲವೇ ಕೆಲವು ವಿದ್ಯಾವಂತ ಮಹಿಳೆಯರು ಕೆಲವು ಕ್ಷೇತ್ರಗಳಲ್ಲಿ ಗಣನೀಯವಾದ ಮಾಡಿರುವ ಸಾಧನೆಗಳು ಮಾತ್ರ ಹೆಗ್ಗಳಿಕೆಗಳಾಗಿ ಬಳಕೆಯಾಗುತ್ತಾ ಬರುತ್ತಿವೆ ಅಷ್ಟೇ. ವಾಸ್ತವವಾಗಿ ಈ ಭೂಮಿಯ ಅರ್ಧ ಜನಸಂಖ್ಯೆಯಾಗಿರುವ ಮಹಿಳಾ ಸಮೂಹದ ಶೇ. 98ರಷ್ಟು ಜನರು ಆಸ್ತಿಹೀನರೆಂಬ ವಾಸ್ತವವನ್ನು ನಾವು ಗಮನಿಸಬೇಕು. ಜಾಗತಿಕವಾಗಿ ಆಸ್ತಿಯೆನ್ನುವುದು ಇಂದು ಕೆಲವೇ ಕೆಲವು ಕಾರ್ಪೊರೇಟ್‌ಗಳ ಕೈಯೊಳಗೆ ಸಂಗ್ರಹಿಸಲ್ಪಡುತ್ತಿರುವ ಕ್ರೂರ ಪರಿಣಾಮವು ಮಹಿಳಾ ಸಮೂಹವನ್ನು ಹೆಚ್ಚು ಭಾದಿಸುತ್ತಿದೆ. ಜಾಗತಿಕವಾಗಿ ಆರ್ಥಿಕ ಅಸಮಾನತೆ ತಾಂಡವವಾಡುತ್ತಿರುವ ಸಂದರ್ಭ ಇದಾಗಿದೆ. ಮುಂದುವರಿದ ರಾಷ್ಟ್ರಗಳೆಂದು ಕರೆಸಿಕೊಂಡಿರುವ ಅಮೆರಿಕ, ಯೂರೋಪಿನ ರಾಷ್ಟ್ರಗಳಲ್ಲಿ ಮಹಿಳೆಯರಿಗೆ ಮೊದಲಿದ್ದ ಅವಕಾಶಗಳೂ ಕೂಡ ಇಂದು ಇಲ್ಲವಾಗಿವೆ. ಹಾಗಂತ ಅಲ್ಲೆಲ್ಲಾ ಮೊದಲು ಮಹಿಳಾ ಸಮಾನತೆ ಇತ್ತು ಎಂದು ಇದರ ಅರ್ಥವಲ್ಲ. ಮಹಿಳೆಯರಿಗೆ ಸಾಪೇಕ್ಷವಾಗಿ ಇತರ ರಾಷ್ಟ್ರಗಳಿಗಿಂತ ಸ್ವಲ್ಪಹೆಚ್ಚಿನ ಅವಕಾಶಗಳು ಅಲ್ಲಿದ್ದವು ಎನ್ನಬಹುದು ಅಷ್ಟೆ. ಆದರೆ ಈಗ ಜಾಗತಿಕ ಆರ್ಥಿಕ ಕುಸಿತದ ಕಾರಣ ಹಾಗೂ ಸಂಪತ್ತಿನ ಹಂಚಿಕೆಯಲ್ಲಿ ಅಗಾಧ ಅಂತರವೇರ್ಪಟ್ಟಿರುವುದರಿಂದ ಮೊದಲಿನ ಅವಕಾಶಗಳು ಮಹಿಳೆಯರಿಗೆ ಇಲ್ಲವಾಗಿವೆ. ಭಾರತದಂತಹ ತೃತೀಯ ಜಗತ್ತಿನ ರಾಷ್ಟ್ರಗಳ ಮಹಿಳೆಯರ ಸ್ಥಿತಿ ಇನ್ನಷ್ಟು ದಾರುಣವಾದುದು. ಇಲ್ಲಿ ಹಳೆಯ ವೈದಿಕಶಾಹಿ ಊಳಿಗಮಾನ್ಯ ಚಿಂತನೆಗಳು ಮೇಲುಗೈಯಲ್ಲಿರುವುದರಿಂದಾಗಿ ಮಹಿಳೆಯರ ಸ್ಥಿತಿ ಬಿಸಿ ಬಾಣಲೆಯಲ್ಲೇ ಇರಬೇಕಾದಂತಹ ಸ್ಥಿತಿಯಾಗಿದೆ.

ವರ್ಗ, ಜಾತಿ, ಜನಾಂಗೀಯ, ಪ್ರಾಂತೀಯ ಹೀಗೆ ಎಲ್ಲಾ ರೀತಿಯ ಅಸಮಾನತೆಗಳು, ಭೇದ ಮನೋಭಾವಗಳು, ತಾತ್ಸಾರಗಳು ನಿರ್ದಿಷ್ಟವಾಗಿ ಸಮಾಜದ ಬಹುಸಂಖ್ಯಾತ ತಳ ಸಮುದಾಯಗಳ ಮಹಿಳೆಯರ ಮೇಲೆ, ಆಯಾ ಸಮುದಾಯಗಳ ಪುರುಷರಿಗಿಂತ ಹೆಚ್ಚು ತೀವ್ರವಾಗಿ ಬಾಧಿಸುತ್ತದೆ. ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಇವೆಲ್ಲಾ ಬಹುತೇಕ ಬಾರಿ ಪುರುಷರಿಗಿಂತ ಹಲವು ಪಟ್ಟು ಹೆಚ್ಚು ಮಹಿಳೆಯರನ್ನು ಬಾಧಿಸುವುದು ಮಾಮೂಲಿ ವಿಚಾರವಾಗಿದೆ. ಆದರೆ ಈ ವಿಚಾರವನ್ನು ಅಂಗೀಕರಿಸಿ ಅದನ್ನು ತಮ್ಮ ಸಾಮಾಜಿಕ ಹಾಗೂ ವೈಯಕ್ತಿಕ ಆಚರಣೆಗಳಲ್ಲಿ ಸರಿಪಡಿಸಲು ಶ್ರಮಿಸುವ ಮನಸ್ಸುಗಳು ಬಹಳ ಕಡಿಮೆಯೆಂದೇ ಹೇಳಬೇಕು. ನಮ್ಮ ದೇಶದ ವೈದಿಕಶಾಹಿಯು ಊಳಿಗಮಾನ್ಯ ಚಿಂತನೆ ಹಾಗೂ ಆಚರಣೆಗಳಲ್ಲಿ ಮುಳುಗಿಹೋಗುತ್ತಿವೆ. ಅದೇ ವೇಳೆಯಲ್ಲಿ ಜಾಗತಿಕ ಕಾರ್ಪೊರೇಟ್ ಮಾರ್ಕೆಟಿಂಗ್ ಕುತಂತ್ರಗಳಲ್ಲಿ ಕರಗಿ ಹೋಗುತ್ತಾ ಬಹಳ ಅತಂತ್ರ ಸ್ಥಿತಿಯಲ್ಲಿ ಸಿಲುಕಿರುವ ಜನಸಮುದಾಯಗಳು ತಮ್ಮ ಇಂತಹ ದುಸ್ಥಿತಿಗಳಿಗೆ ಇರುವ ಕಾರಣಗಳನ್ನು ಅರ್ಥಮಾಡಿಕೊಳ್ಳಲು ವಿಫಲರಾಗುತ್ತಿವೆೆ.

ಅಷ್ಟೇ ಅಲ್ಲದೆ ಅಂತಹ ಕಾರಣಗಳು ಜನಸಾಮಾನ್ಯರಿಗೆ ತಿಳಿಯದಂತೆ ಮಾಡುವ ಹತ್ತು ಹಲವು ಆಮಿಷಗಳು, ಪ್ರಲೋಭನೆಗಳು, ರೋಚಕತೆಗಳು, ಸೋಗಲಾಡಿತನಗಳು, ಒಣ ಹುಸಿ ಪ್ರತಿಷ್ಠೆಗಳನ್ನು ಜಾಗತಿಕ ಕಾರ್ಪೊರೇಟ್ ಹಾಗೂ ಸ್ಥಳೀಯ ವೈದಿಕ ಹಾಗೂ ಬ್ರಾಹ್ಮಣಶಾಹಿ ಊಳಿಗಮಾನ್ಯ ವ್ಯವಸ್ಥೆ ಪ್ರಾಯೋಜನೆ ಮಾಡುತ್ತಾ ಮತ, ಧರ್ಮ, ದೇವರು, ಭಕ್ತಿ, ಶ್ರೇಷ್ಠತೆ, ಪ್ರತಿಷ್ಠೆಗಳ ಹೆಸರಿನಲ್ಲಿ ಜನಸಮುದಾಯಗಳನ್ನು ಮುಳುಗಿಸಿಡಲು ಪ್ರಯತ್ನಿಸುತ್ತಾ ಬರುತ್ತಿದೆ. ಕಾರ್ಪೊರೇಟ್‌ಗಳು ತಮ್ಮ ಉತ್ಪಾದಿತ ವಸ್ತುಗಳಿಗೆ ಬೇಡಿಕೆ ಹೆಚ್ಚಿಸಲು ಅನುಭೋಗಿ ಸಂಸ್ಕೃತಿಯನ್ನು ಜನರ ನೈಜ ಸಂಸ್ಕೃತಿಗಳ ಬದಲಿಗೆ ಬಿಂಬಿಸಿ ಸ್ಥಾಪಿಸಲು ನಿರಂತರವಾಗಿ ಪ್ರಯತ್ನಿಸುತ್ತಾ ಬರುತ್ತಿವೆ. ಹಳೆಯ ಊಳಿಗಮಾನ್ಯ ವೈದಿಕ ವ್ಯವಸ್ಥೆಯಲ್ಲಿ ಬ್ರಾಹ್ಮಣ್ಯದ ಶ್ರೇಷ್ಠತೆಯನ್ನು ಹತ್ತು ಹಲವು ರೀತಿಗಳಲ್ಲಿ ಪ್ರತಿಪಾದಿಸುತ್ತಾ ಅದನ್ನೇ ಸಂಸ್ಕೃತಿಯೆಂದು ಸಮಾಜದ ಎಲ್ಲಾ ಜನಸಮುದಾಯಗಳನ್ನು ನಂಬಿಸಿಡಲು ನಿರಂತರ ಪ್ರಯತ್ನ ಮಾಡುತ್ತಾ ಬಂದಿದೆ. ಜಾಗತಿಕ ಕಾರ್ಪೊರೇಟ್ ಪ್ರಾಯೋಜಿತ ಅನುಭೋಗಿ ಸಂಸ್ಕೃತಿ ಹುಸಿ ಸೌಂದರ್ಯ ಪ್ರಜ್ಞೆ, ನಾಟಕೀಯತೆ, ಬಟ್ಟೆ, ಆಭರಣ, ಪ್ರಸಾಧನಗಳು, ಕಾರು, ಬಂಗಲೆ, ಅದ್ದೂರಿತನಗಳ ಪ್ರದರ್ಶನ, ಬೇರೆಯವರಿಗೆ ಪ್ರದರ್ಶಿಸುವ ಸಲುವಾಗಿಯೇ ಜನರ ಬದುಕುಗಳಿರಬೇಕು ಎನ್ನುವಂತೆ ಮಾಡಿಟ್ಟು ಜನರೆಲ್ಲರೂ ಅದಕ್ಕಾಗಿಯೇ ತಮ್ಮ ಜೀವಮಾನವನ್ನು ಮುಡಿಪಿಡುವಂತೆ ಮಾಡುತ್ತಾ ಬಂದಿದ್ದಾರೆ. ಸಮಾಜದ ಮದ್ಯಮ ವರ್ಗ ಈ ಜಾಲದೊಳಗೆ ಸುಲಭವಾಗಿ ಬೀಳುವ ವರ್ಗವಾಗಿದೆ.

ಈ ಎಲ್ಲವೂ ಪುರುಷರಿಗಿಂತ ಮಹಿಳೆಯರನ್ನು ಗುರಿಮಾಡುವಂತಹವುಗಳೇ ಆಗಿವೆ. ವೈದಿಕಶಾಹಿ ಆಚರಣೆಗಳು ಮತ್ತು ಮೌಲ್ಯಗಳು ಮಹಿಳೆಯರನ್ನು ನಾಲ್ಕು ಗೋಡೆಯೊಳಗೆ ಊಳಿಗಮಾನ್ಯ ರಾಜರು, ಸಾಮಂತರು, ಪಾಳೆಗಾರರ, ಪುರೋಹಿತರುಗಳ ತೃಪ್ತಿ ಹಾಗೂ ಸೇವೆಗೆಂದೇ ನಿಯೋಜಿಸುವವರಾಗಿದ್ದರೆ, ಪುರುಷನ ಅಧೀನದಲ್ಲೇ ಎರಡನೇ ದರ್ಜೆಯ, ಹಲವು ಸಾರಿ ನಿಕೃಷ್ಟವಾಗಿ ಬದುಕು ಸಾಗಿಸುವಂತೆ ಮಾಡಿದೆ. ಇದು ಗ್ರಾಮೀಣ ಪ್ರದೇಶದಲ್ಲಿ ಮೇಲುಗೈಯಲ್ಲಿದೆ. ಕಾರ್ಪೊರೇಟ್ ಅನುಭೋಗಿ ಸಂಸ್ಕೃತಿ ಮಹಿಳೆಯರನ್ನು ಮಾರುಕಟ್ಟೆಯ ರೋಚಕ ಹಾಗೂ ಪ್ರಚೋದಕ ಸರಕನ್ನಾಗಿಸಿ ಸೂಪರ್ ಡೂಪರ್ ಲಾಭವನ್ನು ಕೊಳ್ಳೆಹೊಡೆಯುವ ಸಾಧನವನ್ನಾಗಿಸಿದೆ. ಇದು ನಿರ್ದಿಷ್ಟವಾಗಿ ನಗರ ಕೇಂದ್ರಿತ ಮಧ್ಯಮ ವರ್ಗ ಸಾಮಾನ್ಯವಾಗಿ ಮಧ್ಯಮ ಹಾಗೂ ಶ್ರೀಮಂತ ವರ್ಗಗಳನ್ನು ಸೆಳೆದಿಟ್ಟಿದೆ. ಅದಕ್ಕಾಗಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಾಹಿತ್ಯ, ಕಲೆ, ಮಾಧ್ಯಮ, ಸಿನೆಮಾ, ನಂಬಿಕೆ, ಧರ್ಮ, ಶಾಸ್ತ್ರಗಳು, ಆಚಾರ, ಜಾನಪದ, ಪರಂಪರೆಗಳು ಸೇರಿದಂತೆ ಜನಸಾಮಾನ್ಯರನ್ನು ಪ್ರಭಾವಿಸಿ ಹಿಡಿದಿಡಬಹುದಾದ ಎಲ್ಲವನ್ನೂ ಪರಿಣಾಮಕಾರಿಯಾಗಿ ಬಳಸುತ್ತಿವೆ.

 ಈ ಎಲ್ಲದರ ಭೀಕರ ಪರಿಣಾಮಗಳು ಮಹಿಳೆಯರನ್ನು ಮಾರಕವಾಗಿ ಗುರಿ ಮಾಡುತ್ತಿವೆ. ಅವರು ಪ್ರತಿ ಕ್ಷಣವೂ ಅಭದ್ರತೆ ಹಾಗೂ ಭಯಗಳಿಂದ ಸದಾ ಯಾರದಾದರೂ ಆಶ್ರಯದೊಳಗೆ ಸಿಲುಕಿರುವಂತೆ ಮಾಡಿದೆ. ಮುಕ್ತವಾಗಿ ಸಾಮಾನ್ಯ ಜೀವನವನ್ನು ನಡೆಸಲಾಗದ, ತಮ್ಮ ಬದುಕನ್ನು ತಾವೇ ನಿರ್ವಹಿಸಲಾಗದ, ಅಷ್ಟೇ ಏಕೆ ರಸ್ತೆ ಬೀದಿಗಳಲ್ಲಿ ಸಹಜವಾಗಿ ನಿರ್ಭೀತಿಯಿಂದ ತಿರುಗಾಡಲಾಗದ ಸ್ಥಿತಿಗಳಿಗೆ ದೂಡಿಟ್ಟಿದೆ. ನಿರಂತರವಾಗಿ ಪ್ರತಿ ಕ್ಷಣವೂ ಮಾನಸಿಕ ಹಾಗೂ ದೈಹಿಕ ಅತ್ಯಾಚಾರಗಳಿಗೆ ಇಲ್ಲವೇ ತುಚ್ಛವಾದ ತಾತ್ಸಾರಗಳಿಗೆ ಈಡಾಗಬೇಕಾದ ಪರಿಸ್ಥಿತಿಯಲ್ಲಿಟ್ಟಿದೆ. ಇದರಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾದ ಹತ್ತು ಹಲವು ರೂಪಗಳಿವೆ. ಆಳುವ ಶಕ್ತಿಗಳಿಗೆ ಸೇವೆ ಸಲ್ಲಿಸುವ ಪುರುಷಾಧಿಪತ್ಯದಡಿ ಮಹಿಳಾ ಸಮೂಹವನ್ನು ಸಿಲುಕಿಸಿಟ್ಟು ನಂತರ ಮಹಿಳೆಯರ ಮೇಲೆ ಹುಸಿ ಕಾಳಜಿ, ಹುಸಿ ಗೌರವ ತೋರುವ ಸೋಗಲಾಡಿ ಪದ್ಧತಿಗಳೇ ಬಹಳ ದೊಡ್ಡ ಗುಣಗಳೆಂಬಂತೆ ಪ್ರಾಯೋಜನೆ ಮಾಡಲಾಗುತ್ತಿದೆ. ವರ್ಷಕ್ಕೊಮ್ಮೆ ಆಚರಿಸುವ ಮಾರ್ಚ್ 8 ರ ಮಹಿಳಾ ದಿನಾಚರಣೆಗಳಲ್ಲಿ ಇಂತಹ ತಿರುಳೇ ಇಲ್ಲದ ಹುಸಿ ಮೌಲ್ಯಗಳೇ ವಿಜೃಂಭಿಸುವಂತೆ ನೋಡಿಕೊಳ್ಳಲಾಗುತ್ತಿದೆ.

ಸಾಮಾಜಿಕ ಉತ್ಪಾದನೆಯಲ್ಲಿ ಮಹಿಳಾ ಸಮೂಹದ ಪಾತ್ರ ಶೇ. 50, ಕೆಲವು ಸಂದರ್ಭಗಳಲ್ಲಿ ಅದಕ್ಕಿಂತಲೂ ಹೆಚ್ಚು ಇದ್ದರೂ ಸಂಬಳ, ಗೌರವ ಧನ, ಕೂಲಿಗಳು ಯಾವಾಗಲೂ ಪುರುಷರಿಗಿಂತ ಕಡಿಮೆಯಾಗಿರುತ್ತದೆ. ಅಲ್ಲದೆ ಆಸ್ತಿಯ ಒಡೆತನ ಹಾಗೂ ರಾಜಕೀಯ ಅಧಿಕಾರಗಳಲ್ಲಿ ಸಮಾನ ಅವಕಾಶವನ್ನು ಮಹಿಳೆಯರು ಸ್ಥಾಪಿಸಿಕೊಳ್ಳಲಾಗದಂತೆ ಬಹಳ ವ್ಯವಸ್ಥಿತವಾಗಿ ನೋಡಿಕೊಳ್ಳುತ್ತಾ ಬರಲಾಗುತ್ತಿದೆ. ನಮ್ಮ ಸಂಸತ್ತಿನಲ್ಲಿ ಶೇ. 33ರಷ್ಟು ರಾಜಕೀಯ ಪ್ರಾತಿನಿಧ್ಯವನ್ನು ಮಹಿಳೆಯರಿಗೆ ನೀಡಲು ಹತ್ತಾರು ವರ್ಷಗಳಿಂದ ಸರ್ಕಸ್ ಮಾಡುತ್ತಾ ಬೂಟಾಟಿಕೆಗಳನ್ನು ತೋರಿಸುತ್ತಾ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳೂ ಕಾಲ ಹರಣ ಮಾಡುತ್ತಾ ಬರುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಅವೇ ಪಕ್ಷದ ಸರಕಾರಗಳು ನಂತರ ಮಹಿಳೆಯರ ಮಧ್ಯೆ ಗಟ್ಟಿ ಧ್ವನಿಗಳಲ್ಲಿ ಮಾತನಾಡುವ ಕೆಲವು ಮಹಿಳೆಯರನ್ನು ಸನ್ಮಾನ, ಪ್ರಶಸ್ತಿಗಳು, ಕುಲಪತಿ, ಮಹಿಳಾ ವಿಭಾಗದ ಮುಖ್ಯಸ್ಥೆ, ಇತರ ರಾಜಕೀಯೇತರ ಸ್ಥಾನಮಾನಗಳನ್ನು ನೀಡುತ್ತಾ ಅವರ ಧ್ವನಿಗಳು ತಮ್ಮ ಪರವಾಗಿರುವಂತೆ ನೋಡಿಕೊಳ್ಳುತ್ತಿವೆ.

ಹಲವು ಮರ್ಜಿಗಳಿಗೆ ಒಳಗಾಗುವ ಅಂತಹವರ ಗಟ್ಟಿ ಧ್ವನಿಗಳು ಬಳಿಕ ಮಹಿಳೆಯರ ಪರ ಕ್ಷೀಣವಾಗುತ್ತಾ ಆಳುವವರ ಪರ ಸಮರ್ಥನೆಗಳಿಗೆ ವಾಕ್ಚಾತುರ್ಯಪೂರ್ಣವಾಗಿ ಗಟ್ಟಿಯಾಗುತ್ತಾ ಹೋಗುತ್ತಿವೆ. ಇದಕ್ಕೆ ಸಾಕಷ್ಟು ನಿದರ್ಶನಗಳು ನಮ್ಮ ಮುಂದಿವೆ. ಇನ್ನು ಮಧ್ಯಮ ವರ್ಗವನ್ನು ಪ್ರತಿನಿಧಿಸುವ ಮಹಿಳಾ ಧ್ವನಿಗಳು ಇಡೀ ಮಹಿಳಾ ಸಮೂಹವನ್ನು ತಮ್ಮ ಜೊತೆಯಲ್ಲಿಟ್ಟು ಗ್ರಹಿಸಿ ನೋಡುವ ಪರಿಪಾಠ ಕಡಿಮೆ. ಕೇವಲ ಸಾಹಿತಿಗಳು, ಕಲಾವಿದರು, ನಟಿಯರು, ಉನ್ನತ ಮಹಿಳಾ ಉದ್ಯೋಗಿಗಳ ಪರವಾಗಿ ದ್ವನಿಯೆತ್ತುತ್ತಾ ಮಹಿಳಾ ಸಮೂಹವೆಂದರೆ ಇವರು ಮಾತ್ರವೆಂಬಂತೆ ಪರಿಭಾವಿಸಿ ಮಾತನಾಡುವುದೇ ಜಾಸ್ತಿ. ರೈತಾಪಿ ಹಾಗೂ ಕೂಲಿ ಕಾರ್ಮಿಕ ಮಹಿಳೆಯರ ಮೇಲಿನ ದೌರ್ಜನ್ಯಗಳು ಹಾಗೂ ಸಮಸ್ಯೆಗಳ ಬಗ್ಗೆ ಗಮನಿಸಲು ಹೋಗುವುದು ಕಡಿಮೆ. ಗಮನಿಸಿದರೂ ಅದು ಹೆಚ್ಚಾಗಿ ವಿಚಾರಸಂಕಿರಣ, ಸಂಶೋಧನೆ, ಪ್ರಬಂಧಗಳಿಗೆ ಮಾತ್ರ ಸೀಮಿತವಾಗಿರುವುದೇ ಜಾಸ್ತಿ. ಸಮಾಜದ ತಳ ವರ್ಗಗಳ ಮಹಿಳೆಯರ ಬಗ್ಗೆ ಇವರ ಕಾಳಜಿಯುತ ಗಮನ ಇರುವುದಿಲ್ಲ. ಇದ್ದರೂ ಹೋಲಿಕೆಯಲ್ಲಿ ಕಡಿಮೆಯಾಗಿರುವ ಸಂದರ್ಭಗಳೇ ಅಧಿಕ.
ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಲ್ಲಿ ಪ್ರಭುತ್ವ ನಡೆಸುವ ದೌರ್ಜನ್ಯಗಳ ಬಗ್ಗೆ ಗಮನ ಹರಿಸಿ ಮಾತನಾಡುವವರು ಬಹಳ ಕಡಿಮೆಯೆಂದೇ ಹೇಳಬೇಕು. ಬಹುತೇಕ ಸಂಘಟನೆಗಳು ಮಹಿಳೆಯರ ಮೇಲಿನ ದೌರ್ಜನ್ಯಗಳ ಕುರಿತು ದನಿಯೆತ್ತುವಾಗ ಪ್ರಭುತ್ವದ ಪಾತ್ರಗಳ ಕುರಿತು ಜಾಣ ಮರೆವು ಪ್ರದರ್ಶಿಸುತ್ತವೆ. ಇಲ್ಲವೇ ಕೆಲವೇ ಪ್ರಚಾರ ಪಡೆಯುವ ಘಟನೆಗಳಿಗೆ ಮಾತ್ರ ಸ್ಪಂದಿಸುವಂತೆ ಜಾಣತನದ ನಡೆಗಳನ್ನು ಅನುಸರಿಸುತ್ತವೆೆ.

ಈಶಾನ್ಯ ಭಾರತ, ಕಾಶ್ಮೀರ, ಹಾಗೆಯೇ ಮಧ್ಯ ಭಾರತ ಸೇರಿದಂತೆ ದೇಶದ ಹಲವೆಡೆಗಳಲ್ಲಿ ಪ್ರಭುತ್ವ ತನ್ನ ಸಶಸ್ತ್ರ ಪಡೆಗಳ ಮೂಲಕ ಹತ್ತು ಹಲವು ನೆಪಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ, ಕೊಲೆಗಳನ್ನು ಮಾಡುತ್ತಿರುವ ಬಗ್ಗೆ ಮಾತನಾಡುವ ಮಹಿಳಾ ದನಿಗಳು ಬಹಳ ಕಡಿಮೆ. ಇರೋಮ್ ಶರ್ಮಿಳಾ, ಸೋನಿ ಸುರಿ, ಶೋಮಾ ಸೇನ್, ಸುಧಾ ಭಾರದ್ವಾಜ್‌ರಂತಹ ಕೆಲವು ಮಹಿಳಾ ದನಿಗಳು ಮಾತ್ರ ಮಾತನಾಡುತ್ತಾರೆ. ಇವರನ್ನೇ ‘ನಗರ ನಕ್ಸಲರು’ ಎಂದು ಪ್ರಭುತ್ವ ಆರೋಪಿಸುತ್ತಿದೆ. ಈಗಾಗಲೇ ಈ ಆರೋಪದಡಿ ಕೆಲವರನ್ನು ಬಂಧಿಸಿ ಕಾರಾಗೃಹದಲ್ಲಿಟ್ಟಿದೆ. ಪುರುಷರೇ ಮಹಿಳೆಯರ ಶತ್ರುಗಳು ಎನ್ನುವಂತೆ ಮಾತನಾಡುವ ಹಲವು ಸ್ತ್ರೀವಾದಿ ಸಂಘಟನೆಗಳು ಅಸ್ತಿತ್ವದಲ್ಲಿವೆ. ಹಲವು ಸಂಘಟನೆಗಳು ಕಾರ್ಪೊರೇಟ್ ಸ್ತ್ರೀವಾದಿಗಳ ದೊಡ್ಡ ಗುಂಪುಗಳು ಕೆಲಸ ಮಾಡುತ್ತಿವೆ. ಅನೇಕ ಸರಕಾರೇತರ ಸಂಸ್ಥೆಗಳು ಇದರಲ್ಲಿವೆ. ಪುರುಷಾಧಿಪತ್ಯವನ್ನು ಅದಕ್ಕೆ ಕಾರಣವಾಗಿರುವ ಆಳುವ ವ್ಯವಸ್ಥೆಯನ್ನು ಇವರು ಪ್ರಶ್ನಿಸಲು ಹೋಗುವುದೇ ಇಲ್ಲ. ಆಸ್ತಿ ಮೇಲಿನ ಸಮಾನ ಹಕ್ಕು ಹಾಗೂ ಹಂಚಿಕೆಗಾಗಿ ಕೆಲಸ ಮಾಡದೇ ಕೇವಲ ಭಾವನಾತ್ಮಕಗೊಳಿಸಿ ಮಾತೆ, ತಾಯಿ, ದೇವತೆ, ತ್ಯಾಗಮೂರ್ತಿ ಎಂದೆಲ್ಲಾ ಉಬ್ಬಿಸಿ ಹೇಳುತ್ತಾ ಮಹಿಳಾ ಹೊರಾಟದ ದಿಕ್ಕು ತಪ್ಪಿಸುತ್ತಿರುತ್ತಾರೆ. ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ವ್ಯವಸ್ಥೆಯೊಂದಿಗೆ ಹೋಲಿಸಿ ಗ್ರಹಿಸದೆ ವ್ಯಕ್ತಿಗತ ನೆಲೆಗಳಲ್ಲಿ ಮಾತ್ರ ಗ್ರಹಿಸುತ್ತಾ ಇಡೀ ಪುರುಷ ಸಮೂಹವೇ ಮಹಿಳಾ ಅಸಮಾನತೆಗೆ ಪ್ರಮುಖ ಕಾರಣವೆಂದು ಬೆಟ್ಟು ಮಾಡುತ್ತಾರೆ.

ಪುರುಷರು ಮಹಿಳೆಯರು ಒಗ್ಗೂಡಿ ಹೋರಾಡಿ ಮಹಿಳಾ ಸಮಾನತೆಯೂ ಸೇರಿದಂತೆ ಸಮಾನತೆಗಾಗಿ ಕೆಲಸ ಮಾಡುವುದು ಅತ್ಯಗತ್ಯವಿರುವಾಗ ಇವರು ಅವರನ್ನೇ ಒಡೆದು ಬದ್ಧ ವೈರಿಗಳಾಗಿ ನಿಲ್ಲಿಸುತ್ತಿದ್ದಾರೆ. ಮಹಿಳಾ ವಿಮೋಚನೆ ಹಾಗೂ ಸಮಾನತೆಯ ವಿಚಾರ ಪುರುಷರಿಗೂ ಸಂಬಂಧಿಸಿದ ವಿಚಾರವೆನ್ನುವ ಗ್ರಹಿಕೆಯೊಂದಿಗೆ ಇವರು ಕಾರ್ಯ ನಿರ್ವಹಿಸುವುದಿಲ್ಲ. ಇಂತಹವರು ಸಾರಾಂಶದಲ್ಲಿ ಮಹಿಳಾ ವಿರೋಧಿಯಾಗಿಯೇ ಕಾರ್ಯ ನಿರ್ವಹಿಸುವವರು ಎನ್ನುವುದನ್ನು ಗ್ರಹಿಸದೆ ಹೋದರೆ ಇವರು ಪ್ರತಿಪಾದಿಸುವ ಮಹಿಳಾ ವಿಮೋಚನೆ, ಮಹಿಳಾ ಸಮಾನತೆ ಎನ್ನುವುದೆಲ್ಲ ಮರೀಚಿಕೆಯಾಗಿ ಮಾತ್ರ ಕಾಣಲಾರಂಭಿಸುತ್ತದೆ. ಮಹಿಳಾ ಅಸಮಾನತೆಗೆ ಪ್ರಮುಖ ಕಾರಣವಾಗಿರುವ ಆಳುವ ವ್ಯವಸ್ಥೆಯನ್ನು ಪ್ರಶ್ನಿಸದೆ ಮಾಡುವ ಯಾವುದೇ ಮಹಿಳಾಪರವೆನ್ನುವ ಹೋರಾಟಗಳು ವಾಸ್ತವದಲ್ಲಿ ಮಹಿಳಾಪರವಾಗಿರದೆ ಆಳುವ ವ್ಯವಸ್ಥೆಯ ಪರವೇ ಆಗಿರುತ್ತದೆ ಎನ್ನುವುದನ್ನು ಮಹಿಳಾ ಸಮಾನತೆಯ ಬಗ್ಗೆ ಗಂಭೀರವಾಗಿ ಚಿಂತಿಸಿ ಕಾರ್ಯ ನಿರ್ವಹಿಸುವವರು ಅರ್ಥಮಾಡಿಕೊಳ್ಳಬೇಕಾದ ಅಗತ್ಯವಿದೆ. ಮಹಿಳಾ ದಿನಾಚರಣೆಯ ಹಿಂದಿನ ಅಮೂಲ್ಯ ತ್ಯಾಗಪೂರಿತ ಹೋರಾಟಗಳ ಹಿನ್ನೆಲೆಯಲ್ಲಿ ಗ್ರಹಿಸಿದಾಗ ಮಾತ್ರ ಮಹಿಳಾ ವಿಮೋಚನೆಯ ಸರಿಯಾದ ಅರ್ಥವನ್ನು ಗ್ರಹಿಸಲು ಸಾಧ್ಯ. ಇದು ಕೇವಲ ಮಹಿಳೆಯರ ಕರ್ತವ್ಯ ಮಾತ್ರವಲ್ಲ ಸಮಾನತೆ ಬಯಸುವ ಪುರುಷರದೂ ಕೂಡ.


 ಮಿಂಚಂಚೆ: nandakumarnandana67gmail.com

Writer - ನಂದಕುಮಾರ್ ಕೆ. ಎನ್.

contributor

Editor - ನಂದಕುಮಾರ್ ಕೆ. ಎನ್.

contributor

Similar News