ಶಾಂತಿಯುತ ಚುನಾವಣೆಗೆ ಎಲ್ಲರ ಸಹಕಾರ ಅಗತ್ಯ: ಚಿಕ್ಕಮಗಳೂರು ಡಿಸಿ ಗೌತಮ್

Update: 2019-03-12 18:44 GMT

ಚಿಕ್ಕಮಗಳೂರು, ಮಾ.12: ಲೋಕಸಭಾ ಸಾರ್ವತ್ರಿಕ ಚುನಾವಣೆ-2019ನ್ನು ಶಾಂತಿಯುತ ಹಾಗೂ ಮುಕ್ತವಾಗಿ ನಡೆಸಲು ಎಲ್ಲರೂ ಸಹಕಾರ  ನೀಡಬೇಕು ಮತ್ತು ಚುನಾವಣಾ ಮಾದರಿ ನೀತಿ ಸಂಹಿತೆಯ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿರುವ ಎಲ್ಲಾ ಮತಗಟ್ಟೆಗಳಲ್ಲಿ ಮತದಾರರ ಅನುಕೂಲಕ್ಕಾಗಿ ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಸಂಪರ್ಕ ಇತ್ಯಾದಿ ಸೌಲಭ್ಯಗಳನ್ನು ಕಲ್ಪಿಸಲಾಗುವುದಲ್ಲದೆ, ವಿಕಲಚೇತನರು, ವಯೋವೃದ್ಧರು, ಮಹಿಳೆಯರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಮತಗಟ್ಟೆಗಳನ್ನು ಸಿದ್ಧಪಡಿಸಲಾಗುವುದು ಎಂದರು.

ಮಾರ್ಚ್ 10 ರಂದು ಸಂಜೆ 5 ಗಂಟೆಗೆ ಚುನಾವಣಾ ಘೋಷಣೆಯಾದ 24 ಗಂಟೆಗಳೊಳಗೆ ಹೆದ್ದಾರಿ ಫಲಕಗಳಲ್ಲಿ ಹಾಗೂ ಗೋಡೆ ಬರಹಗಳು ಸೇರಿದಂತೆ ಅಳವಡಿಸಲಾಗಿದ್ದ ರಾಜಕೀಯ ಪಕ್ಷಗಳ ಹಾಗೂ ಸರ್ಕಾರದ ಸಾಧನೆಗಳ ಕುರಿತಾದ ಬ್ಯಾನರ್ ಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದ ಅವರು, ರಾಜಕೀಯ ಪಕ್ಷಗಳು ಯಾವುದೇ ಜಾಹೀರಾತು ಪ್ರಕಟಿಸಬೇಕಾದರೂ ಆಯಾ ಸ್ಥಳೀಯ ಆಡಳಿತದಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ವ್ಯಾಪ್ತಿಗೆ ಒಳಪಡುವ ಕ್ಷೇತ್ರವಾರು ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದರು.

ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷದವರು ಸಭೆ, ರ್ಯಾಲಿ ವಾಹನಗಳಿಗೆ ತಾತ್ಕಾಲಿಕ ಕಾರ್ಯಕ್ರಮಗಳಿಗೆ, ಪಕ್ಷದ ಕಚೇರಿಗೆ, ಧ್ವನಿವರ್ಧಕಗಳಿಗೆ ಪರವಾನಿಗೆ ಕೋರಿ ಸುವಿಧಾ ಅಡಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದ ಅವರು, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದೂರು ನಿರ್ವಹಣಾ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಯಾವುದೇ ರೀತಿಯ ಸಾರ್ವಜನಿಕರು ಚುನಾವಣೆಗೆ ಸಂಬಂಧಿಸಿದ ದೂರು ಮಾಹಿತಿಗಳನ್ನು 1950 ಸಹಾಯವಾಣಿಗೆ ಕರೆ ಮಾಡಬಹುದಾಗಿದೆ. ಇದುವರೆಗೆ ಒಟ್ಟು 105  ದೂರವಾಣಿ ಕರೆಗಳು ಬಂದಿದ್ದು, ಸದರಿ ಕರೆಗಳು ಮಾಹಿತಿಗೆ ಸಂಬಂಧಿಸಿದ್ದಾಗಿದ್ದವು ಎಂದರು

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ್ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.

ಕ್ಷೇತ್ರವಾರು ಸಹಾಯಕ ಚುನಾವಣಾಧಿಕಾರಿಗಳು:

123 ಶೃಂಗೇರಿ ವಿಧಾನಸಭಾ ಕ್ಷೇತ್ರಕ್ಕೆ ನಾಗರಾಜ್, ಯೋಜನಾ ನಿರ್ದೇಶಕರು, ಜಿಲ್ಲಾ ಗ್ರಾಮೀಣಾಭಿವೃದ್ಧಿ, ಜಿಪಂ, ಚಿಕ್ಕಮಗಳೂರು ಮೊ.ಸಂ: 9480860002

124 ಮೂಡಿಗೆರೆ ವಿಧಾನಸಭಾ ಕ್ಷೇತ್ರ ಶಿವಕುಮಾರ್ ಉಪವಿಭಾಗಾಧಿಕಾರಿಗಳು, ಚಿಕ್ಕಮಗಳೂರು, ಮೊ.ಸಂ:9448357490

125 ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ವಿ.ಎಸ್.ಹಿರೇಮಠ್ ಉಪಕಾರ್ಯದರ್ಶಿ-1 (ಆಡಳಿತ) ಜಿಪಂ ಚಿಕ್ಕಮಗಳೂರು. ಮೊ.ಸಂ:9480860001

126 ತರೀಕೆರೆ ವಿಧಾನಸಭಾ ಕ್ಷೇತ್ರ, ಬಿ.ಆರ್.ರೂಪಾ, ಉಪವಿಭಾಗಾಧಿಕಾರಿಗಳು, ತರೀಕೆರೆ ಉಪವಿಭಾಗ ಮೊ.ಸಂ: 9448263897

127 ಕಡೂರು, ಮಂಗಲ್ ದಾಸ್, ಮುಖ್ಯ ಯೋಜನಾಧಿಕಾರಿಗಳು, ಜಿಪಂ ಚಿಕ್ಕಮಗಳೂರು, ಮೊ.ಸಂ: 7406844691

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News