ಮಹಿಳೆಯರ ಸಮಸ್ಯೆ ಪರಿಹಾರಕ್ಕೆ ಪೊಲೀಸರು ಸಹಕರಿಸುತ್ತಿಲ್ಲ: ಮೋಹಿನಿ ಸಿದ್ದೇಗೌಡ ಆರೋಪ

Update: 2019-03-13 17:36 GMT

ಚಿಕ್ಕಮಗಳೂರು, ಮಾ.13: ನೊಂದ ಮಹಿಳೆಯರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕಸ್ತೂರಿ ಬಾ ಸದನ ಮಹಿಳಾ ಸಾಂತ್ವಾನ ಕೇಂದ್ರ ಅವಿರತವಾಗಿ ಶ್ರಮಿಸುತ್ತಿದೆ. ಆದರೆ ಇದಕ್ಕೆ ಪೊಲೀಸ್ ಇಲಾಖೆಯಲ್ಲಿನ ಕೆಲ ಅಧಿಕಾರಿಗಳು ಸಹಕಾರ ನೀಡುತ್ತಿಲ್ಲ ಎಂದು ಸದನದ ಅಧ್ಯಕ್ಷೆ ಮೋಹಿನಿ ಸಿದ್ದೇಗೌಡ ದೂರಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಸ್ತೂರಿ ಬಾ ಸದನ ಕಳೆದ ಅನೇಕ ವರ್ಷಗಳಿಂದ ಮಹಿಳಾ ದೌರ್ಜನ್ಯದ ವಿರುದ್ಧ ಕಾನೂನು ಹೋರಾಟ ಮಾಡುತ್ತಿದೆ. ಈ ನಿಟ್ಟಿನಲ್ಲಿ ಸಾಕಷ್ಟು ಪ್ರಕರಣಗಳಲ್ಲಿ ನೊಂದ ಮಹಿಳೆಯರಿಗೆ ನ್ಯಾಯ ಒದಗಿಸುವಲ್ಲಿ ಸಫಲವಾಗಿದೆ. ಮಹಿಳಾ ದೌರ್ಜನ್ಯ, ಅತ್ಯಾಚಾರ, ಕೌಟುಂಬಿಕ ಕಲಹ, ವರದಕ್ಷಿಣೆ ಕಿರುಕುಳ ಮತ್ತಿತರ ಪ್ರಕರಣಗಳಲ್ಲಿ ಕಸ್ತೂರಿ ಸದನಕ್ಕೆ ಬರುವ ಪ್ರಕರಣಗಳಲ್ಲಿ ನೊಂದವರಿಗೆ ನ್ಯಾಯ ಒದಗಿಸಲು ಪೊಲೀಸ್ ಇಲಾಖೆಯ ಸಹಕಾರ ಅತ್ಯಗತ್ಯವಾಗಿದೆ. ಸದ್ಯ ಪೊಲೀಸ್ ವರಿಷ್ಠಾಧಿಕಾರಿಗಲಾಗಿರುವ ಹರೀಶ್ ಪಾಂಡೆ ಅವರು ನಮ್ಮ ಹೋರಾಟಕ್ಕೆ ಸಹಕಾರ ನೀಡುತ್ತಿದ್ದಾರೆ. 

ಆದರೆ ಕೆಲ ಪೊಲೀಸ್ ಠಾಣೆಗಳ ಎಸೈ, ಪಿಎಸೈಗಳು ನೊಂದ ಮಹಿಳೆಯರು ನೀಡುವ ದೂರುಗಳನ್ನು ದಾಖಲಿಸಲು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದರಿಂದ ಕೆಲ ಪ್ರಕರಣಗಳಲ್ಲಿ ನೊಂದ ಮಹಿಳೆಯರಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಆದರೆ ಎಲ್ಲ ಪ್ರಕರಣಗಳನ್ನು ಅವರ ಬಳಿಯೇ ಕೊಂಡೊಯ್ಯುವುದು ತರವಲ್ಲ. ಆದ್ದರಿಂದ ಪೊಲೀಸ್ ಠಾಣೆಗಳಲ್ಲೇ ಪ್ರಕರಣಗಳನ್ನು ಇತ್ಯರ್ಥ ಪಡಿಸಲು, ದೂರು ದಾಖಲಿಸಲು ಸಂಸ್ಥೆ ಪ್ರಯತ್ನ ನಡೆಸುತ್ತಿದೆ. ಆದರೆ ಕೆಲ ಪೊಲೀಸ್ ಠಾಣಾಧಿಕಾರಿಗಳು ಮಹಿಳೆಯರು ನ್ಯಾಯ ಕೇಳಿ ಹೋದಾಗ ಉಡಾಫೆ ಉತ್ತರ ನೀಡುತ್ತಿದ್ದಾರೆಂದು ಅವರು ಆರೋಪಿಸಿದರು.

ಕಸ್ತೂರಿ ಬಾ ಮಹಿಳಾ ಸಾಂತ್ವಾನ ಕೇಂದ್ರಕ್ಕೆ 2018 ರಿಂದ 2019 ರ ಅವಧಿಯಲ್ಲಿ 73 ಪ್ರಕರಣಗಳು ನೋಂದಣಿಯಾಗಿದೆ. 62 ಪ್ರಕರಣಗಳು ಇತ್ಯರ್ಥ ಕಂಡಿದ್ದು, 11 ಪ್ರಕರಣಗಳು ಬಾಕಿ ಉಳಿದಿವೆ. ಈ ಪೈಕಿ 56 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಗಿದ್ದು, 6 ಪ್ರಕರಣಗಳನ್ನು ನ್ಯಾಯಾಲಯದ ಮೂಲಕ ಇತ್ಯರ್ಥ ಪಡಿಸಲಾಗಿದೆ ಎಂದರು. 

ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಮಹಿಳೆಯ ಪತಿಯ ಅನೈತಿಕ ಸಂಬಂಧದ ದೂರುಗಳು ಹೆಚ್ಚು ಬರುತ್ತಿವೆ. ಇಂತಹ ಪ್ರಕರಣಗಳಿಗೆ ಪೊಲೀಸ್ ಠಾಣೆಗಳಿಗೆ ಹೋದಾಗ ಅನೈತಿಕ ಸಂಬಂಧದ ಬಗ್ಗೆ ಸುಪ್ರೀಂ ಕೋರ್ಟ್ ಆದೇಶವಿದೆ ಎಂದು ಸಬೂಬು ಹೇಳಿ ಪ್ರಕರಣವನ್ನು ಕೈಬಿಡಲಾಗುತ್ತಿದೆ. ಇಂತಹ ಪ್ರಕರಣಗಳಲ್ಲಿ ಕೊನೆ ಪಕ್ಷ ಹೆಂಡತಿಗೆ ಪತಿ ನೀಡಿದ ಕಿರುಕುಳದ ಮೇಲಾದರೂ ದೂರು ದಾಖಲಿಸಬಹುದು. ಆದರೆ ಪೊಲೀಸರು ಅದನ್ನೂ ಮಾಡುತ್ತಿಲ್ಲ ಎಂದ ಅವರು, ಮಹಿಳೆಯರು ನೀಡುವ ದೂರಿನ ಮೇರೆಗೆ ಆರೋಪಿಗಳನ್ನು ವಿಚಾರಿಸಲು ಮೂರು ಪತ್ರಗಳನ್ನು ಬರೆದರೂ ಬರುವುದಿಲ್ಲ. ಆಗ ಪೊಲೀಸರ ಮೂಲಕ ಕರೆಸಲು ಪ್ರಯತ್ನಿಸುತ್ತೇವೆ. ಈ ಹಿಂದೆ ಕೆಲ ಪ್ರಕರಣಗಳಲ್ಲಿ ಪೊಲೀಸರು ಆರೋಪಿಗಳನ್ನು ಕರೆಸಿ ವಿಚಾರಣೆಗೊಳಪಡಿಸುತ್ತಿದ್ದರು. ಆದರೆ ಸದ್ಯ ಕಾರ್ಯನಿರ್ವಹಿಸುತ್ತಿರುವ ಠಾಣಾಧಿಕಾರಿಗಳು ಆರೋಪಿಗಳನ್ನು ಕರೆಸಲು ಸಾಧ್ಯವಿಲ್ಲ ಎಂದು ಉಡಾಪೆ ಉತ್ತರ ನೀಡುತ್ತಿದ್ದಾರೆ. ಇದರಿಂದಾಗಿ ಇಂತಹ ಪ್ರಕರಣಗಳಲ್ಲಿ ನೊಂದ ಮಹಿಳೆಯರಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಹಿಳಾ ಸಾಂತ್ವಾನ ಕೇಂದ್ರದ ಸದಸ್ಯೆಯರಾದ ಸಾವಿತ್ರಿ, ಪಾರ್ವತಿ, ಗೀತಾ ಮತ್ತಿತರರು ಉಪಸ್ಥಿತರಿದ್ದರು.

ಮಹಿಳಾ ಸಾಂತ್ವಾನಕ್ಕೆ ವರದಕ್ಷಿಣೆ ಕಿರುಕುಳ ಪ್ರಕರಣಗಳು ಇತ್ತೀಚೆಗೆ ಬರುತ್ತಿಲ್ಲ. ಆದರೆ ಹಿರಿಯ ನಾಗರಿಕರ ಸಮಸ್ಯೆಗಳು ಹೆಚ್ಚು ಬರುತ್ತಿವೆ. ಮಕ್ಕಳು ತಮ್ಮ ಪೋಷಕರಿಗೆ ವಯಸ್ಸಾದ ಮೇಲೆ ಆಸ್ತಿಗಾಗಿ ಕಿರುಕುಳ ನೀಡುವುದು ಹೆಚ್ಚಾಗುತ್ತಿದೆ. ಮಹಿಳಾ ಸಾಂತ್ವಾನ ಕೇಂದ್ರ ಹಿರಿಯ ನಾಗರಿಕರಿಂದ ಬರುವ ಬಹುತೇಕ ಪ್ರಕರಣಗಳನ್ನು ರಾಜಿ ಸಂಧಾನ, ಕಾನೂನು ಹೋರಾಟದ ಮೂಲಕ ಬಗೆಹರಿಸಿದೆ.
- ಮೋಹಿನಿ ಸಿದ್ದೇಗೌಡ, ಅಧ್ಯಕ್ಷೆ ಕಸ್ತೂರಿ ಬಾ ಮಹಿಳಾ ಸಾಂತ್ವಾನ ಕೇಂದ್ರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News