ಒಲಿಂಪಿಕ್ಸ್‌ನತ್ತ ದೀಪಾ ಕರ್ಮಾಕರ್ ಚಿತ್ತ ಬಾಕು, ದೋಹಾದಲ್ಲಿ ಉತ್ತಮ ಪ್ರದರ್ಶನದ ತವಕ

Update: 2019-03-14 03:34 GMT

ಹೊಸದಿಲ್ಲಿ, ಮಾ.13: ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆಯುವತ್ತ ಚಿತ್ತ ಹರಿಸಿರುವ ಭಾರತದ ಖ್ಯಾತ ಜಿಮ್ನಾಸ್ಟಿಕ್ ತಾರೆ ದೀಪಾ ಕರ್ಮಾಕರ್ ಗುರುವಾರದಿಂದ ಬೆನ್ನು ಬೆನ್ನಿಗೆ ಆರಂಭವಾಗಲಿರುವ ಬಾಕು ಹಾಗೂ ದೋಹಾ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ ವಿಶ್ವಕಪ್ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ.

2018ರ ನವಂಬರ್‌ನಲ್ಲಿ ಜರ್ಮನಿಯ ಕಾಟ್‌ಬಸ್‌ನಲ್ಲಿ ನಡೆದ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ ವಿಶ್ವಕಪ್‌ನ ವಾಲ್ಟ್ ವಿಭಾದಲ್ಲಿ ಕಂಚಿನ ಪದಕ ಜಯಿಸಿದ್ದ ದೀಪಾ , ಒಲಿಂಪಿಕ್‌ಗೆ ತಾನು ಕಠಿಣ ಸ್ಪರ್ಧಿ ಎಂಬ ಸಂದೇಶ ರವಾನಿಸಿದ್ದಾರೆ.

ಕಾಟ್‌ಬಸ್‌ನಲ್ಲಿ ಮೂರನೇ ಸ್ಥಾನ ಪಡೆಯಲು ಯಶಸ್ವಿಯಾದ ಬಳಿಕ ದೀಪಾ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವುದನ್ನು ಜೀವಂತವಾಗಿರಿಸಿದ್ದಾರೆ. ಮೆಲ್ಬೋರ್ನ್‌ನಲ್ಲಿ (ಫೆ.21-24) ನಡೆದ ವಿಶ್ವಕಪ್ ಸ್ಪರ್ಧೆಯನ್ನು ತಪ್ಪಿಸಿಕೊಂಡಿದ್ದ ಅವರು ಬಾಕು (ಮಾ.14-17) ಹಾಗೂ ದೋಹಾ (ಮಾ.20-23) ವಿಶ್ವಕಪ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ.

‘‘ಈಗ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ವಿಶ್ವಕಪ್ ಸೇರಿದಂತೆ ಹಲವು ಮಾರ್ಗಗಳಿವೆ. 2020ರ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಸಾಧ್ಯವಿರುವ ನನ್ನ ಎಲ್ಲ ಅವಕಾಶಗಳನ್ನು ಸೂಕ್ತವಾಗಿ ಬಳಸಿಕೊಳ್ಳುವೆ. ಕಳೆದ ವರ್ಷ ಜರ್ಮನಿಯಲ್ಲಿ ಪದಕ ಗೆದ್ದಿರುವುದರಿಂದ ನನ್ನ ಆತ್ಮವಿಶ್ವಾಸ ಇನ್ನಷ್ಟು ಹೆಚ್ಚಿದೆ’’ ಎಂದು ಜಿಮ್ನಾಸ್ಟ್ ದೀಪಾ ಹೇಳುತ್ತಾರೆ.

ಮುಂಬರುವ ಎರಡು ವಿಶ್ವಕಪ್ ಪಂದ್ಯಾವಳಿಗಳು 2020ರ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಇರುವ 8 ಸ್ಪರ್ಧೆಗಳ ಭಾಗಗ ಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News