ಐಸಿಸಿ ಟೆಸ್ಟ್ ರ್ಯಾಂಕಿಂಗ್: ವ್ಯಾಗ್ನರ್‌ಗೆ ಜೀವನಶ್ರೇಷ್ಠ

Update: 2019-03-14 03:39 GMT

ದುಬೈ, ಮಾ.13: ಬಾಂಗ್ಲಾದೇಶ ತಂಡದ ವಿರುದ್ಧ ಇತ್ತೀಚೆಗೆ ಟೆಸ್ಟ್ ಸರಣಿಯನ್ನು ಜಯಿಸಿರುವ ನ್ಯೂಝಿಲೆಂಡ್ ತಂಡದ ಆಟಗಾರರು ನೂತನ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಏರಿಕೆ ಕಂಡಿದ್ದಾರೆ. ರಾಸ್ ಟೇಲರ್, ಹೆನ್ರಿ ನಿಕೊಲ್ಸ್ ಹಾಗೂ ನೀಲ್ ವ್ಯಾಗ್ನರ್ ಅವರ ರ್ಯಾಂಕಿಂಗ್‌ನಲ್ಲಿ ಗಮನಾರ್ಹ ಏರಿಕೆಯಾಗಿದೆ.

ವೆಲ್ಲಿಂಗ್ಟನ್ ಟೆಸ್ಟ್‌ನ ಎರಡೂ ಇನಿಂಗ್ಸ್ ಸೇರಿ ಬಾಂಗ್ಲಾದ 9 ವಿಕೆಟ್ ಉರುಳಿಸಿದ ವೇಗಿ ವ್ಯಾಗ್ನರ್ ಜೀವನಶ್ರೇಷ್ಠ 5ನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ. ಒಟ್ಟು 6 ಸ್ಥಾನ ಏರಿಕೆ ಕಂಡಿರುವ ಅವರು 800 ಅಂಕಗಳ ಗಡಿ ದಾಟಿದ್ದಾರೆ. ರಿಚರ್ಡ್ ಹ್ಯಾಡ್ಲಿ ಹಾಗೂ ಟ್ರೆಂಟ್ ಬೌಲ್ಟ್ ನಂತರ 800 ಅಂಕಗಳ ಗಡಿ ದಾಟಿದ ಕಿವೀಸ್‌ನ ಮೂರನೇ ಬೌಲರ್ ಎಂಬ ಹೆಗ್ಗಳಿಕೆ ಅವರದಾಗಿದೆ.

ತಂಡದ ಇನ್ನೋರ್ವ ವೇಗಿ ಟಿಮ್ ಸೌಥಿ 2014ರಲ್ಲಿ 799 ಅಂಕ ಗಳಿಸುವ ಮೂಲಕ 800ರ ಗಡಿಗೆ ಸಮೀಪಿಸಿದ ಆಟಗಾರನಾಗಿದ್ದಾರೆ. ರ್ಯಾಂಕಿಂಗ್‌ನಲ್ಲಿ ನ್ಯೂಝಿಲೆಂಡ್ ಬೌಲರ್‌ಗಳ ಪೈಕಿ ವ್ಯಾಗ್ನರ್ ಅಗ್ರಸ್ಥಾನದಲ್ಲಿದ್ದರೆ, ಬೌಲ್ಟ್ 7ನೇ ಸ್ಥಾನದ ಮೂಲಕ ಅವರನ್ನು ಹಿಂಬಾಲಿಸಿದ್ದಾರೆ. ದಾಂಡಿಗರ ರ್ಯಾಂಕಿಂಗ್‌ನಲ್ಲಿ ರಾಸ್ ಟೇಲರ್ (13), ನಿಕೊಲ್ಸ್ (5) ಹಾಗೂ ಕಿವೀಸ್ ನಾಯಕ ವಿಲಿಯಮ್ಸನ್(2) ಭಾರೀ ಏರಿಕೆ ಕಂಡಿದ್ದಾರೆ. ದಾಂಡಿಗರ ಪಟ್ಟಿಯನ್ನು ಭಾರತದ ವಿರಾಟ್ ಕೊಹ್ಲಿ ಮುನ್ನಡೆಸುತ್ತಿದ್ದಾರೆ.

ಬಾಂಗ್ಲಾದ ಬೌಲರ್ ಹಾಗೂ ದಾಂಡಿಗರು ರ್ಯಾಂಕಿಂಗ್‌ನಲ್ಲಿ ಅಲ್ಪ ಏರಿಕೆಯನ್ನು ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News