ಪತ್ರಕರ್ತನ ಪ್ರಶ್ನೆಗೆ ಉತ್ತರಿಸಲಾಗದೆ ಪತ್ರಿಕಾಗೋಷ್ಠಿಯಿಂದ ಹೊರ ನಡೆದ ಸಂಸದ ಪ್ರತಾಪ್ ಸಿಂಹ !

Update: 2019-03-14 05:59 GMT

ಮೈಸೂರು, ಮಾ. 14: ಸಂವಿಧಾನದ ವಿರುದ್ಧ ಬಿಜೆಪಿ ಮತ್ತು ಸಂಘ ಪರಿವಾರ ಹೇಳಿಕೆ ನೀಡುತ್ತಿದೆ ಎಂದು ಪರ್ತಕರ್ತನೋರ್ವನ ಪ್ರಶ್ನೆಗೆ ಉತ್ತರಿಸಲಾಗದೆ ಸಂಸದ ಪ್ರತಾಪ್ ಸಿಂಹ ಪತ್ರಿಕಾಗೋಷ್ಠಿಯಿಂದ ಹೊರ ನಡೆದ ಘಟನೆ ನಡೆಯಿತು.

ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿ ಕರೆದಿದ್ದ ಪ್ರತಾಪ್ ಸಿಂಹ ಸಾಮಾಜಿಕ ಜಾಲತಾಣದಲ್ಲಿ ಚುನಾವಣಾ ಪ್ರಚಾರ ಕೈಗೊಂಡರೆ ಅಡ್ಮಿನ್ ಗೆ ಜೈಲು ಎಂಬುದೆಲ್ಲ ಸುಳ್ಳು, ಭಾರತ ಸಂವಿಧಾನದ ಆರ್ಟಿಕಲ್ 19(1) ಎ ಮೂಲಕ ರಾಷ್ಟ್ರದ ನಾಗರೀಕರಿಗೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೂಲಭೂತ ಹಕ್ಕಾಗಿ ನೀಡಿರುತ್ತದೆ ಎಂದು ಹೇಳಿದರು.

ಇದೇ ವಿಚಾರವಾಗಿ ಒಂದು ಕಡೆ ಸಂವಿಧಾನ ಅಡಿಯಲ್ಲಿ ಎನ್ನುತ್ತೀರಿ ಮತ್ತೊಂದೆಡೆ ನಿಮ್ಮ ಪಕ್ಷದ ಸಚಿವರುಗಳು ಮತ್ತು ಮುಖಂಡರುಗಳು ಸಂವಿಧಾನ ಬದಲಾಯಿಸಬೇಕು ಎನ್ನುತ್ತಾರಲ್ಲ ಎಂದು ಪತ್ರಕರ್ತನೋರ್ವನ ಪ್ರಶ್ನೆಗೆ ಕೋಪಗೊಂಡ ಪ್ರತಾಪ್ ಸಿಂಹ ಈಗಾಗಲೇ ಕೇಂದ್ರ ಸಚಿವ ಅನಂತ್ ಕುಮಾರ್ ಸಂಸತ್ ನಲ್ಲಿ ಕ್ಷಮೆ ಕೋರಿದ್ದಾರೆ. ಆದರೂ ಪದೆ ಪದೇ ಈ ವಿಚಾರ ಎತ್ತುವುದು ಸರಿಯಲ್ಲ, ಈತರಹ ಮನಸ್ಥಿತಿ ಇರುವವರನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದರು.

ನಂತರ ಸಂವಿಧಾನದ ವಿಚಾರಕ್ಕೆ ಸಂಬಂಧಪಟ್ಟ ವಿಷಯವನ್ನು ಪತ್ರಕರ್ತ ಕೇಳಿದ್ದಕ್ಕೆ ಉತ್ತರಿಸಲಾಗದೆ ನಿಮ್ಮ ಪ್ರಶ್ನೆಗೆ ಉತ್ತರಿಸಲು ಸಾಧ್ಯವಿಲ್ಲ ಬೇರೆ ಏನಾದರು ಕೇಳಿ ಎಂದು ಪ್ರತಾಪ್ ಸಿಂಹ ಹೇಳಿದರು.

ಸಂಸತ್ ನಲ್ಲಿ ಅಂಬೇಡ್ಕರ್ ಫೋಟೊ ಹಾಕಲು ಮೋದಿ ಬರಬೇಕಾಯಿತು, ಪಂಚಪೀಠಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಅಳವಡಿಸಲು ಬಿಜೆಪಿ ಬರಬೇಕಾಯಿತು. ಅಂಬೇಡ್ಕರ್ ಬಗ್ಗೆ ಹೆಚ್ಚು ಗೌರವ ಇಟ್ಟುಕೊಂಡಿರುವವರು ನಾವೆ ಎಂದರು.

ಇತ್ತೀಚೆಗೆ ನಿಮ್ಮ ಸಂಘ ಪರಿವಾರದ ಮುಖಂಡರೊಬ್ಬರು ಸಂವಿಧಾನದಿಂದ ದೇಶ ಮುನ್ನಡೆಸಲು ಸಾಧ್ಯವಿಲ್ಲ, ಹಿಂದೂ ಸಂಸ್ಕೃತಿ ಕಾಪಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ನೀವು ಸಂವಿಧಾನದ ಬಗ್ಗೆ ಮಾತನಾಡುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಲಾಗದ ಸಂಸದ ಪ್ರತಾಪ್ ಸಿಂಹ ತಕ್ಷಣ ಪತ್ರಿಕಾಗೋಷ್ಠಿಯಿಂದ ಎದ್ದು ಹೊರನಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News