ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಇನ್ನಿಲ್ಲ

Update: 2019-03-14 14:15 GMT

ಬೆಂಗಳೂರು, ಮಾ. 14: ಉಸಿರಾಟ, ಮೂತ್ರಪಿಂಡ ಸಮಸ್ಯೆಯಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಕೂಡಲಸಂಗಮದ ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ (74) ಅವರು ಚಿಕಿತ್ಸೆ ಫಲಿಸದೆ ಗುರುವಾರ ಸಂಜೆ 4:45ರ ಸುಮಾರಿಗೆ ಲಿಂಗೈಕ್ಯರಾಗಿದ್ದಾರೆ.

ಅಪಾರ ಸಂಖ್ಯೆಯ ಮಠದ ಭಕ್ತರು, ಬಂಧು-ಮಿತ್ರರು ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ. ಆಸ್ಪತ್ರೆಯಿಂದ ಸಂಜೆ 7ಗಂಟೆಯ ಸುಮಾರಿಗೆ ರಾಜಾಜಿನಗರದ ಬಸವ ಮಂಟಪದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗುವುದು. ಬಸವ ಮಂಟಪದಲ್ಲಿ ರಾತ್ರಿ ಭಜನೆ-ಪ್ರಾರ್ಥನೆ ನಡೆಸಲಾಗುವುದು.

ನಾಳೆ(ಮಾ.15) ಬೆಳಗ್ಗೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮಕ್ಕೆ ಪಾರ್ಥಿವ ಶರೀರವನ್ನು ಕೊಂಡ್ಯೊಯ್ದು ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗುವುದು. ಕೂಡಲಸಂಗಮದಲ್ಲಿ ಮಾ.16ರ ಶನಿವಾರ ಬೆಳಗ್ಗೆ ಲಿಂಗಾಯತ ಧರ್ಮದ ಸಂಪ್ರದಾಯದಂತೆ ಮಾತಾಜಿ ಅಂತ್ಯಸಂಸ್ಕಾರ ನಡೆಸಲಾಗುವುದು ಎಂದು ಬಸವಧರ್ಮ ಮಠದ ಕಿರಿಯ ಸ್ವಾಮೀಜಿಗಳು ತಿಳಿಸಿದ್ದಾರೆ.

ಪ್ರಥಮ ಮಹಿಳಾ ಜಗದ್ಗುರು: ಕೂಡಲಸಂಗಮದ ಗುರು ಲಿಂಗಾನಂದರಿಂದ ಪ್ರಭಾವಿತರಾಗಿ, ಅತ್ಯಂತ ಕಿರಿಯ ವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸಿ, ಪ್ರಥಮ ಮಹಿಳಾ ಜಗದ್ಗುರುಗಳು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಮಾತೆ ಮಹಾದೇವಿ, ಸಾಹಿತಿ ಹಾಗೂ ಉತ್ತಮ ವಾಗ್ಮಿಗಳಾಗಿದ್ದರು. 1946ರ ಮಾರ್ಚ್ 13ರಂದು ಚಿತ್ರದುರ್ಗ ಜಿಲ್ಲೆಯ ಸಾಸಲಹಟ್ಟಿಯಲ್ಲಿ ಡಾ.ಬಸಪ್ಪ ಮತ್ತು ಗಂಗಮ್ಮ ದಂಪತಿಯ ಪುತ್ರಿಯಾಗಿ ಜನಿಸಿದ ಅವರು, ಬಿಎಸ್ಸಿ, ಎಂಎ ಪದವಿ ಪಡೆದಿದ್ದರು. ಬಸವ ಧರ್ಮ ಪ್ರಚಾರಕ್ಕಾಗಿ ಅವರು ತಮ್ಮನ್ನು ತಾವು ಅರ್ಪಿಸಿಕೊಂಡಿದ್ದರು.

ಲಿಂಗಾನಂದಸ್ವಾಮಿಗಳ ಪ್ರವಚನದಿಂದ ಪ್ರಭಾವಿತರಾದ ರತ್ನ(ಮಾತಾಜಿ) ತಮ್ಮನ್ನು ತಾವು ಧರ್ಮಕ್ಕೆ ಅರ್ಪಿಸಿಕೊಳ್ಳುವ ಉದ್ದೇಶದಿಂದ 19 ಆಗಸ್ಟ್ 1965ರಂದು ಧರ್ಮ ಪ್ರಚಾರಕ್ಕೆ ಮುಂದಿನ ಜೀವನವನ್ನು ಅರ್ಪಿಸಿ, 1965ರ ಆಗಸ್ಟ್ 21 ರಂದು ಇಷ್ಟಲಿಂಗ ದಿಕ್ಷೆಯನ್ನು ಪಡೆದರು.

2002ರಲ್ಲಿ ಬಸವ ಕಲ್ಯಾಣದಲ್ಲಿ ಅಲ್ಲಮಪ್ರಭು ಶೂನ್ಯಪೀಠವನ್ನು ಸ್ಥಾಪಿಸಿ 12ನೆ ಶತಮಾನದ ಶೂನ್ಯಪೀಠ ಪರಂಪರೆಯನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಅಲ್ಲದೆ, ಬೀದರ್‌ನ ಬಸವ ಕಲ್ಯಾಣದಲ್ಲಿ 108 ಅಡಿ ವಿಶ್ವಗುರು ಬಸವಣ್ಣನವರ ಮೂರ್ತಿ ಸ್ಥಾಪಿಸಿದ್ದಾರೆ. 2007ರಲ್ಲಿ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಅಳತ್ ಗ್ರಾಮದಲ್ಲಿರುವ ಅಲ್ಲಮ ಗಿರಿಯಲ್ಲಿ ಅಲ್ಲಮಪ್ರಭು ಯೋಗಪೀಠವನ್ನು ಸ್ಥಾಪಿಸಿದ್ದಾರೆ. 2006ರಲ್ಲಿ ರಾಷ್ಟ್ರದ ರಾಜಧಾನಿ ಹೊಸದಿಲ್ಲಿಯಲ್ಲಿ ಬಸವ ಧರ್ಮ ಪೀಠದ ಶಾಖೆಯನ್ನು ತೆರೆದು ಬಸವ ಮಂಟಪವನ್ನು ಸ್ಥಾಪಿಸಿದ್ಧಾರೆ.

ಕೂಡಲಸಂಗಮ ಹಾಗೂ ಬಸವ ಕಲ್ಯಾಣದಲ್ಲಿ ಶರಣ ಧರ್ಮ ಪ್ರಚಾರಕ್ಕಾಗಿ ಪ್ರತಿವರ್ಷವೂ ‘ಶರಣ ಸಮ್ಮೇಳನ’ ಆಯೋಜಿಸುವ ಮೂಲಕ ಭಕ್ತರಿಂದ ಮಾತಾಜಿ ಎಂದು ಕರೆಸಿಕೊಳ್ಳುತ್ತಿದ್ದ ಮಾತೆ ಮಹಾದೇವಿ ಅವರು, ಐದು ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

ಪ್ರತ್ಯೇಕ ಧರ್ಮ ಹೋರಾಟಕ್ಕೆ ನೇತೃತ್ವ: ‘ಲಿಂಗಾಯತ ಪ್ರತ್ಯೇಕ ಧರ್ಮ’ದ ಕೂಗೆದ್ದ ಸಂದರ್ಭದಲ್ಲಿ ಅದರ ನೇತೃತ್ವ ವಹಿಸಿದ್ದು ಮಾತೆ ಮಹಾದೇವಿಯವರು. ಲಿಂಗಾಯತ ಪ್ರತ್ಯೇಕ ಧರ್ಮದ ಸ್ಥಾನಮಾನ ಪಡೆಯುವವರೆಗೂ ಹೋರಾಟ ನಡೆಸುವುದಾಗಿ ಮಾತೆ ಮಹಾದೇವಿ ಘೋಷಿಸಿದ್ದರು.

ಮಾತೆ ಮಹಾದೇವಿ ಲಿಂಗೈಕ್ಯರಾದ ಸುದ್ದಿ ತಿಳಿದ ಕೂಡಲೇ ಆಸ್ಪತ್ರೆಗೆ ಗೃಹ ಸಚಿವ ಎಂ.ಬಿ.ಪಾಟೀಲ್, ವೀರಶೈವ ಮಹಾಸಭಾದ ರಾಷ್ಟ್ರೀಯಾಧ್ಯಕ್ಷ ಶಾಮನೂರು ಶಿವಶಂಕರಪ್ಪ ಸೇರಿದಂತೆ ಹಲವು ಮುಖಂಡರು ಭೇಟಿ ನೀಡಿ ಮಾತಾಜಿಯವರ ಅಂತಿಮ ದರ್ಶನ ಪಡೆದರು.

ಗಣ್ಯರ ಸಂತಾಪ: ಮಾತೆ ಮಹಾದೇವಿ ಅವರು ಲಿಂಗೈಕ್ಯರಾಗಿದ್ದು ದೊಡ್ಡ ಚಿಂತಕಿ, ಸಾಹಿತಿಯೂ ಆಗಿದ್ದ ಮಾತಾಜಿ, ಬಸವ ತತ್ವಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದರು. ಸಮಾಜದ ಶಾಂತಿ-ಸೌಹಾರ್ದತೆಗೆ ಬಸವ ಧರ್ಮದ ಮೂಲ ತತ್ವ. ಮಾತೆ ಮಹಾದೇವಿ ಅವರ ಜೀವನ ಚರಿತ್ರೆ ಎಲ್ಲರಿಗೂ ಪ್ರೇರಣೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಂತಾಪ ವ್ಯಕ್ತಪಡಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News