ಮಾ.18ಕ್ಕೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಮಾಜಿ ಸಿಎಂ ಯಡಿಯೂರಪ್ಪ

Update: 2019-03-14 12:56 GMT

ಚಿಕ್ಕಮಗಳೂರು, ಮಾ.14: ಲೋಕಸಭೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ವಿವಿಧ ಪಕ್ಷಗಳ ವರಿಷ್ಠರ ಟೆಂಪಲ್ ರನ್ ಆರಂಭವಾಗಿದ್ದು, ಇತ್ತೀಚೆಗೆ ಮಾಜಿ ಪ್ರಧಾನಿ ದೇವೇಗೌಡ, ಸಿಎಂ ಕುಮಾರಸ್ವಾಮಿ ಜಿಲ್ಲೆಯ ಶೃಂಗೇರಿ ದೇವಾಲಯಕ್ಕೆ ಭೇಟಿ ನೀಡಿದ್ದ ಬೆನ್ನಲ್ಲೆ ಗುರುವಾರ ಬೆಳಗ್ಗೆ ಮಾಜಿ ಸಿಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಶೃಂಗೇರಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. 

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸಕ್ತ ದೇಶಾದ್ಯಂತ ಮೋದಿ ಅಲೆ ಕಳೆದ ಬಾರಿಗಿಂತಲೂ ಹೆಚ್ಚಾಗಿದ್ದು, ಎಲ್ಲ ಸರ್ವೇ ವರದಿಗಳೂ ಮೋದಿ ದೇಶದ ಮುಂದಿನ ಪ್ರಧಾನಿ ಎಂದು ವರದಿ ನೀಡಿವೆ. ಮೋದಿ ಅಲೆಯಿಂದಾಗಿ ಕಳೆದ ಬಾರಿಗಿಂತ ಈ ಭಾರಿ ಬಿಜೆಪಿಯ ಮತಗಳಿಕೆ ಪ್ರಮಾಣ ಶೇ.10ರಿಂದ 12 ಹೆಚ್ಚಾಗಲಿದೆ. ಬಿಜೆಪಿ ಪಕ್ಷ ಲೋಕಸಭೆ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಮಾ.17ರಂದು ಪಕ್ಷದ ಕೋರ್ ಕಮಿಟಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಅಭ್ಯರ್ಥಿಗಳ ಪಟ್ಟಿ ಅಂತಿಮ ಗೊಳಿಸಲಾಗುವುದು. ಮಾ.18ರಂದು ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದ ಅವರು, ಈ ಬಾರಿ ರಾಜ್ಯದಲ್ಲಿ 22 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಮಂಡ್ಯ ಕ್ಷೇತ್ರದ ಬಗ್ಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಮಂಡ್ಯ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ನಟಿ ಸುಮಲತಾ ಅವರ ಸ್ಪರ್ಧೆಯ ನಿರ್ಧಾರ ಗಮನಿಸಿ ಬಿಜೆಪಿ ನಿರ್ಧಾರಕ್ಕೆ ಬರಲಿದೆ ಎಂದ ಅವರು, ನಟ ಅಂಬರೀಶ್ ನಿಧನಕ್ಕೂ ಮೊದಲು ಸಿಎಂ ಕುಮಾರಸ್ವಾಮಿಗೆ ಅಂಬಿ ಬಗ್ಗೆ ಅಪಾರ ಪ್ರೀತಿ, ಅಭಿಮಾನವಿತ್ತು. ಆದರೆ ಅವರ ನಿಧನದ ಬಳಿಕ ಮಂಡ್ಯಕ್ಕೆ ಅಂಬರೀಶ್ ಕೊಡುಗೆ ಏನೆಂದು ಪ್ರಶ್ನಿಸುತ್ತಿರುವುದು ಮುಖ್ಯಮಂತ್ರಿಗೆ ಶೋಭೆ ತರುವಂತದ್ದಲ್ಲ ಎಂದರು. 

ಇದೇ ವೇಳೆ ಮೈತ್ರಿ ಸರಕಾರದ ಬಗ್ಗೆ ಕಿಡಿಕಾರಿದ ಬಿಎಸ್‍ವೈ, ಲೋಕಸಭೆ ಚುನಾವಣೆ ಸಂಬಂಧ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಎರಡೂ ಪಕ್ಷಗಳ ಮುಖಂಡರದ್ದೇ ಹೊರತು ಕಾರ್ಯಕರ್ತರ ಮೈತ್ರಿಯಲ್ಲ ಎಂದ ಅವರು, ಸಮ್ಮಿಶ್ರ ಸರಕಾರದ ಮುಖಂಡರು ಎಲ್ಲೇ ಹೋದರು ಕಚ್ಚಾಟ, ಬಡಿದಾಟದಲ್ಲೇ ನಿರತರಾಗಿದ್ದಾರೆ. ಅವರೊಳಗೆ ಮುಸುಕಿನ ಗುದ್ದಾಟ ನಡೆಯುತ್ತಿದೆ ಎಂದು ಟೀಕಿಸಿದರು.

ಮಾಜಿ ಪ್ರಧಾನಿ ದೇವೇಗೌಡ ಅವರ ಕಣ್ಣೀರಿನ ಬಗ್ಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಮೊಮ್ಮಗನಿಗೆ ಟಿಕೆಟ್ ಕೊಟ್ಟು ಮನೆಮಂದಿಯೆಲ್ಲಾ ಕಣ್ಣೀರು ಹಾಕುತ್ತಿದ್ದಾರೆ. ಇಂತಹ ಕಣ್ಣೀರಿಗೆ ಅರ್ಥವೇ ಇಲ್ಲ. ಇದು ಜನರನ್ನು ಮರುಳು ಮಾಡುವ ಷಡ್ಯಂತ್ರವಾಗಿದ್ದು, ಜನತೆ ದಡ್ಡರಲ್ಲ ಎಂದ ಅವರು, ಷಡ್ಯಂತ್ರ ಮಾಡುವವರಿಗೆ ಜನತೆ ಚುನಾವಣೆಯಲ್ಲಿ ಬುದ್ಧಿ ಕಲಿಸಲಿದ್ದಾರೆಂದರು.

ಯಡಿಯೂರಪ್ಪ ಜತೆಯಲ್ಲಿ ಈ ವೇಳೆ ಮಾಜಿ ಶಾಸಕ ಜೀವರಾಜ್, ಸಂಸದೆ ಶೋಭಾ ಕರಂದ್ಲಾಜೆ, ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಸೇರಿದಂತೆ ಮಲೆನಾಡು ಭಾಗದ ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಕಾಂಗ್ರೆಸ್ ಪಲಾಯನ ಮಾಡಿದೆ
ಮಾಜಿ ಪ್ರಧಾನಿ ಇಂದಿರಾಗಾಂಧಿಗೆ ರಾಜಕೀಯವಾಗಿ ಪುನರ್ಜನ್ಮ ನೀಡಿದ್ದು ಚಿಕ್ಕಮಗಳೂರು ಕ್ಷೇತ್ರವಾಗಿದೆ. ಆದರೆ ಪ್ರಸಕ್ತ ಈ ಕ್ಷೇತ್ರದಲ್ಲಿ ಕಾಂಗ್ರೆಸ್‍ಗೆ ನೆಲೆ ಇಲ್ಲದಂತಾಗಿದೆ. ಇಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿಗಳೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಸೋಲುವ ಭೀತಿ ಎದುರಾಗಿದ್ದು, ಈ ಕಾರಣಕ್ಕೆ ಕಾಂಗ್ರೆಸ್ ವರಿಷ್ಠರು ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಟ್ಟು ಪಲಾಯನ ಮಾಡಿದ್ದಾರೆ.
- ಶೋಭಾ ಕರಂದ್ಲಾಜೆ, ಸಂಸದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News