ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪ ಹೊರಿಸಿ ಯುವಕನಿಗೆ ಸಂಘಪರಿವಾರದಿಂದ ಹಲ್ಲೆ: ಆರೋಪ

Update: 2019-03-14 14:02 GMT

ಚಿಕ್ಕಮಗಳೂರು, ಮಾ.14: ಪ್ರವಾಸಕ್ಕೆ ಬಂದಿದ್ದ ಯುವಕ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾನೆಂಬ ಆರೋಪ ಹೊರಿಸಿ ಸಂಘಪರಿವಾರದ ಕಾರ್ಯಕರ್ತರು ಆತನ ಮೇಲೆ ಹಲ್ಲೆ ನಡೆಸಿದ ಘಟನೆ ನಗರ ಸಮೀಪದ ಕೈಮರ ಗ್ರಾಮದಲ್ಲಿ ನಡೆದಿದೆ ಎನ್ನಲಾಗಿದೆ.

ಚಿತ್ರದುರ್ಗ ನಗರದ ನಿವಾಸಿ ಯೂನುಸ್ ಸುಮಾರು 40 ಯುವಕರೊಂದಿಗೆ ಚಾರ್ಸಿ ಬಸ್‍ನಲ್ಲಿ ಗುರುವಾರ ಮುಂಜಾನೆ ಚಿಕ್ಕಮಗಳೂರಿನ ಬಾಬಾ ಬುಡನ್‍ಗಿರಿಗೆ ಪ್ರವಾಸಕ್ಕೆ ಬಂದಿದ್ದ ಎನ್ನಲಾಗಿದ್ದು, ಬಸ್ ನಗರ ಸಮೀಪದ ಕೈಮರ ಗ್ರಾಮಕ್ಕೆ ಆಗಮಿಸಿದಾಗ ಗಿರಿಗೆ ತೆರಳಲು ಬಸ್‍ ಗೆ ಚೆಕ್‍ಪೋಸ್ಟ್ ಸಿಬ್ಬಂದಿ ಅವಕಾಶ ನಿರಾಕರಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಸಂಘಪರಿವಾರ ಕಾರ್ಯಕರ್ತರು ಯುವಕನಿಗೆ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾನೆ ಎಂದು ಆರೋಪಿಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಇದೇ ವೇಳೆ ಹಲ್ಲೆ ತಡೆಯಲು ಮುಂದಾದ ಅಲ್ಲಿನ ಹೊಟೇಲ್ ಮಾಲಕರೋರ್ವರಿಗೂ ಗುಂಪು ಹಲ್ಲೆ ಮಾಡಿದೆ ಎಂದು ತಿಳಿದು ಬಂದಿದ್ದು, ಈ ವೇಳೆ ಬಸ್‍ಗೆ ಕಾಯುತ್ತಿದ್ದ ಯುವಕರು ಪ್ರವಾಸಕ್ಕೆ ಬಂದಿದ್ದ ವಿಷಯ ತಿಳಿಸಿದರೂ ಕೂಡಾ ಗುಂಪು ಚಿಕ್ಕಮಗಳೂರು ಗ್ರಾಮಾಂತರ ಠಾಣೆಗೆ ಯುವಕನ ವಿರುದ್ಧ ದೂರು ಕೊಡಿಸಿದ್ದಾರೆನ್ನಲಾಗಿದೆ. 

ಸ್ಥಳಕ್ಕೆ ಬಂದ ಪೊಲೀಸರು ಯುವಕರನ್ನು ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆಗೊಳಪಡಿಸಿದ್ದಾರೆ. ದೂರಿನ ಮೇರೆಗೆ ಪೊಲೀಸರು ಯುವಕನ ವಿರುದ್ಧ 153(ಎ), 504, 506 ಐಪಿಸಿ ಸೆಕ್ಸನ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News