ಏಳು ವರ್ಷದ ಬಾಲಕನಲ್ಲಿ ವೆಸ್ಟ್ ನೈಲ್ ವೈರಸ್ ಪತ್ತೆ: ಕೇರಳಕ್ಕೆ ತಂಡ ಕಳುಹಿಸಿದ ಕೇಂದ್ರ

Update: 2019-03-14 14:04 GMT

ಹೊಸದಿಲ್ಲಿ,ಮಾ.14: ಕೇರಳದ ಮಲಪ್ಪುರಂ ಜಿಲ್ಲೆಯ ಏಳು ವರ್ಷದ ಬಾಲಕನಲ್ಲಿ ವೆಸ್ಟ್ ನೈಲ್ ವೈರಾಣು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಪರಿಶೀಲನೆ ನಡೆಸಲು ಕೇಂದ್ರ ಸರಕಾರ ರಾಜ್ಯಕ್ಕೆ ಪ್ರತಿನಿಧಿಗಳ ತಂಡವನ್ನು ರವಾನಿಸಿದೆ. ಉತ್ತರ ಅಮೆರಿಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುವ ವೆಸ್ಟ್ ನೈಲ್ ವೈರಾಣು ಕಾಯಿಲೆಯು ಸೊಳ್ಳೆಯಿಂದ ಮಾನವನಿಗೆ ಹರಡುತ್ತಿದೆ. ರೋಗಬಾಧಿತ ವ್ಯಕ್ತಿಯು ಜ್ವರ, ತಲೆನೋವು, ಮೈಕೈನೋವು, ತಲೆಸುತ್ತು, ವಾಂತಿ ಹಾಗೂ ಕೆಲವೊಮ್ಮೆ ಚರ್ಮ ತುರಿಕೆ ಮತ್ತು ದೇಹಗಳ ನರಗಳ ಊದುವಿಕೆಯಿಂದ ಬಳಲುತ್ತಾನೆ.

ಸದ್ಯ ಕೇರಳದ ರೋಗಪೀಡಿತ ಬಾಲಕನನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರ ಸರಕಾರ ಈ ಬಗ್ಗೆ ಅತ್ಯಂತ ಸೂಕ್ಷ್ಮವಾಗಿ ಎಲ್ಲವನ್ನೂ ಪರಿಶೀಲಿಸುತ್ತಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಈ ಕಾಯಿಲೆಯ ಹರಡುವಿಕೆಯನ್ನು ತಡೆಯಲು ಕೇರಳ ಸರಕಾರಕ್ಕೆ ಅಗತ್ಯವಿರುವ ಎಲ್ಲ ಬೆಂಬಲವನ್ನು ನೀಡುವುದಾಗಿ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ತಿಳಿಸಿದ್ದಾರೆ. ರಾಜ್ಯಕ್ಕೆ ಈಗಾಗಲೇ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ನಾಲ್ವರು ಸದಸ್ಯರನ್ನು ಕಳುಹಿಸಲಾಗಿದೆ. ಈ ತಂಡವು ಕಾಯಿಲೆಯನ್ನು ತಡೆಗಟ್ಟುವಲ್ಲಿ ರಾಜ್ಯ ಆರೋಗ್ಯ ಪ್ರಾಧಿಕಾರಕ್ಕೆ ನೆರವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News