ಪೊಲ್ಲಾಚಿ ಸರಣಿ ಲೈಂಗಿಕ ದೌರ್ಜನ್ಯ ಮತ್ತು ಬ್ಲಾಕ್‌ಮೇಲ್ ಪ್ರಕರಣ ಸಿಬಿಐಗೆ ಹಸ್ತಾಂತರ

Update: 2019-03-14 14:41 GMT

ಚೆನ್ನೈ,ಮಾ.14: ತಮಿಳುನಾಡು ಸರಕಾರವು ಪೊಲ್ಲಾಚಿ ಸರಣಿ ಲೈಂಗಿಕ ದೌರ್ಜನ್ಯ ಮತ್ತು ಬ್ಲಾಕ್‌ಮೇಲ್ ಪ್ರಕರಣವನ್ನು ಗುರುವಾರ ಸಿಬಿಐಗೆ ವರ್ಗಾವಣೆಗೊಳಿಸಿದೆ.

ನಾಲ್ವರ ತಂಡವೊಂದು 2013ರಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ನೂರಾರು ಮಹಿಳೆಯರ ಸ್ನೇಹ ಬೆಳೆಸಿಕೊಂಡು ಬಳಿಕ ಅವರ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪಗಳಿಗೆ ಈ ಪ್ರಕರಣವು ಸಂಬಂಧಿಸಿದೆ. ಕೆಲವು ಪ್ರಕರಣಗಳಲ್ಲಿ ಈ ದುಷ್ಕರ್ಮಿಗಳು ಸಂತ್ರಸ್ತ ಮಹಿಳೆಯರ ವೀಡಿಯೊಗಳನ್ನು ಚಿತ್ರೀಕರಿಸಿ ಅವರನ್ನು ಬ್ಲಾಕ್‌ಮೇಲ್ ಮಾಡಲು ಬಳಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್.ಸತೀಶ್, ಎನ್.ಶಬರಿರಾಜನ್, ಟಿ.ವಸಂತಕುಮಾರ ಮತ್ತು ಕೆ.ತಿರುನಾವುಕ್ಕರಸು ಎನ್ನುವವರನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲ್ಲಾಚಿಯ 19ರ ಹರೆಯದ ಕಾಲೇಜು ವಿದ್ಯಾರ್ಥಿನಿಯೋರ್ವಳು ಫೆ.25ರಂದು ಆರೋಪಿಗಳ ವಿರುದ್ಧ ಲೈಂಗಿಕ ದೌರ್ಜನ್ಯದ ದೂರು ಸಲ್ಲಿಸುವುದರೊಂದಿಗೆ ಈ ಜಾಲವು ಬೆಳಕಿಗೆ ಬಂದಿತ್ತು.

ತಮಿಳುನಾಡು ಸರಕಾರವು ಬುಧವಾರ ದಿಲ್ಲಿ ವಿಶೇಷ ಪೊಲೀಸ್ ಸಂಸ್ಥೆ ಕಾಯ್ದೆ,1946ರ ಕಲಂ 6ನ್ನು ಜಾರಿಗೊಳಿಸಿದ್ದು,ಇದು ಸಿಬಿಐ ರಾಜ್ಯಾದ್ಯಂತ ಕಾರ್ಯ ನಿರ್ವಹಿಸಲು ಅವಕಾಶವನ್ನು ನೀಡುತ್ತದೆ.

ತಮಿಳುನಾಡು ಡಿಜಿಪಿ ಟಿ.ಕೆ.ರಾಜೇಂದ್ರನ್ ಅವರ ಪ್ರಸ್ತಾವದ ಮೇರೆಗೆ ಸರಕಾರವು ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿದೆ.

ತನ್ಮಧ್ಯೆ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿ ತಮಿಳುನಾಡು ಸರಕಾರವು ಹೊರಡಿಸಿರುವ ಅಧಿಸೂಚನೆಯಲ್ಲಿ ದೂರು ಸಲ್ಲಿಸಿರುವ ವಿದ್ಯಾರ್ಥಿನಿ,ಆಕೆಯ ಕಾಲೇಜು ಮತ್ತು ಸಹೋದರನ ಹೆಸರುಗಳನ್ನು ಬಹಿರಂಗಗೊಳಿಸಿದ್ದು,ಇದು ಸರ್ವೋಚ್ಚ ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗಿದೆ.

ಬುಧವಾರ ರಾಜ್ಯದ ವಿವಿಧೆಡೆಗಳಲ್ಲಿ ವಿದ್ಯಾರ್ಥಿಗಳು,ವಕೀಲರು ಮತ್ತು ಮಹಿಳಾ ಸಂಘಟನೆಗಳ ಸದಸ್ಯೆಯರು ಪ್ರತಿಭಟನೆ ನಡೆಸಿ ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News