ಸಿದ್ದರಾಮಯ್ಯ ಪ್ರಭಾವದಿಂದ ಮೈಸೂರು ಕ್ಷೇತ್ರ ಕೈ ತಪ್ಪಿದೆ: ಸಚಿವ ಸಾ.ರಾ.ಮಹೇಶ್

Update: 2019-03-14 15:24 GMT

ಬೆಂಗಳೂರು, ಮಾ.14: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಕ್ಷೇತ್ರಗಳ ಹಂಚಿಕೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಪಾಲಾಗಿರುವುದಕ್ಕೆ ಬೇಸರವಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಭಾವದಿಂದಾಗಿ ಈ ಕ್ಷೇತ್ರ ನಮ್ಮ ಕೈ ತಪ್ಪಿದೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ತಿಳಿಸಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ತನ್ನ ಪ್ರಾಬಲ್ಯವನ್ನು ಮೆರೆದಿತ್ತು. ಆದರೆ, ಸಿದ್ದರಾಮಯ್ಯ ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಸಬೇಕೆಂದು ಹಠ ಹಿಡಿದಿದ್ದಾರೆ ಎಂದರು.

ಕಾಂಗ್ರೆಸ್ ಹೈಕಮಾಂಡ್ ಮೇಲೆ ಸಿದ್ದರಾಮಯ್ಯ ಪ್ರಭಾವ ಬೀರಿ ಮೈಸೂರು ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಮೈಸೂರು ಬಿಟ್ಟು ಕೊಟ್ಟು, ತುಮಕೂರು ಲೋಕಸಭಾ ಕ್ಷೇತ್ರವನ್ನು ಪಡೆದಿದ್ದೇವೆ ಎಂದು ಸಾ.ರಾ.ಮಹೇಶ್ ತಿಳಿಸಿದರು.

ರಾಜಕೀಯ ವ್ಯವಸ್ಥೆಯಲ್ಲಿ ಕೆಲವೊಮ್ಮೆ ಕೊಡು-ಕೊಳ್ಳುವಿಕೆ ಪರಿಸ್ಥಿತಿ ಎದುರಾಗುತ್ತದೆ. ಮೈಸೂರು ಜಿಲ್ಲೆಯಲ್ಲಿ ನಮ್ಮ ಶಕ್ತಿ ಹೆಚ್ಚಿದ್ದರೂ ಕ್ಷೇತ್ರವನ್ನು ಕಳೆದುಕೊಂಡಿರುವುದು ನಿಜಕ್ಕೂ ನೋವುಂಟು ಮಾಡಿದೆ. ಪಕ್ಷದ ವರಿಷ್ಠರು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧರಾಗಿ ನಾವು ಮುಂದುವರೆಯುತ್ತೇವೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News