ಶೋಭಾ ಕರಂದ್ಲಾಜೆಯನ್ನು ಬದಲಾಯಿಸಲು ವರಿಷ್ಠರಿಗೆ ಮನವಿ: ಬಿಜೆಪಿ ಮುಖಂಡ ರಾಜ್‍ ಶೇಖರ್

Update: 2019-03-14 15:48 GMT

ಚಿಕ್ಕಮಗಳೂರು, ಮಾ.14: ಬಿಜೆಪಿ ಪಕ್ಷದ ನಾಯಕಿ ಶೋಭಾ ಕರಂದ್ಲಾಜೆ ಅವರು ಈ ಹಿಂದೆ ಸಂಸದೆಯಾಗಿ ಆಯ್ಕೆಗೊಂಡ ಬಳಿಕ ಜಿಲ್ಲೆಯ ಕಾರ್ಯಕರ್ತರ ಕೈಗೆ ಸಿಗದೇ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣಲ್ಲಿ ತೊಡಗಿಸಿಕೊಂಡಿದ್ದರು. ಐದು ವರ್ಷಗಳ ಅವಧಿಯಲ್ಲಿ ನಗರಸಭೆಗೆ ಅವರು ನೀಡಿದ ಕೊಡುಗೆ ಶೂನ್ಯ. ನಗರಸಭೆಯಲ್ಲಿ ಅವರ ಕಚೇರಿ ಇದ್ದರೂ ಅಲ್ಲಿ ಒಂದೇ ಒಂದು ಸಭೆ ನಡೆಸಲಿಲ್ಲ. ಅವರ ಗೆಲುವಿಗೆ ಶ್ರಮಿಸಿದವರ ಕೈಗೂ ಅವರು ಸಿಗಲಿಲ್ಲ. ಈ ಕಾರಣಕ್ಕೆ ಈ ಬಾರಿ ಕಾರ್ಯಕರ್ತರು ಅಭ್ಯರ್ಥಿ ಬದಲಾವಣೆ ಬಯಸುತ್ತಿದ್ದು, ಇದನ್ನು ಪಕ್ಷದ ವರಿಷ್ಠರ ಗಮನಕ್ಕೂ ತರಲಾಗಿದೆ. ಕಾರ್ಯಕರ್ತರ ಕೈಗೆ ಸಿಗುವಂತವರಿಗೆ ಟಿಕೆಟ್ ನೀಡಿ ಎಂಬುದು ನಮ್ಮ ಬೇಡಿಕೆಯಾಗಿದೆ ಎಂದು ನಗರಸಭೆ ಸದಸ್ಯ ಬಿಜೆಪಿ ಮುಖಂಡ ರಾಜ್‍ಶೇಖರ್ ತಿಳಿಸಿದ್ದಾರೆ.

ಗುರುವಾರ ನಗರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿ ವೇಳೆ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರ ಪಕ್ಷವಾಗಿದ್ದು, ಕಾರ್ಯಕರ್ತರ ಅಭಿಪ್ರಾಯಕ್ಕೆ ಪಕ್ಷದ ವರಿಷ್ಠರು ಮನ್ನಣೆ ನೀಡಲೇಬೇಕು. ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಈ ಬಾರಿ ಬದಲಾಯಿಸಿ ಸ್ಥಳೀಯ ಮುಖಂಡರಿಗೆ ಟಿಕೆಟ್ ನೀಡುವಂತೆ ಎರಡೂ ಜಿಲ್ಲೆಗಳಲ್ಲಿ ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಯನ್ನು ಬದಲಾಯಿಸಿ ಎಂಬ ಮನವಿಯನ್ನು ವರಿಷ್ಠರಿಗೆ ತಲುಪಿಸಿದ್ದೇವೆ ಎಂದರು.

ಶೋಭಾ ಕರಂದ್ಲಾಜೆ ಅವರಂತೆ ಜಯಪ್ರಕಾಶ್ ಹೆಗ್ಡೆ ಅವರೂ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ, ಬಿಜೆಪಿ ಪಕ್ಷದ ಮುಖಂಡರೂ ಆಗಿದ್ದಾರೆ. ಟಿಕೆಟ್ ಸಿಗಬಹುದೆಂಬ ನಿರೀಕ್ಷೆಯಲ್ಲಿ ಅವರು ಇತ್ತೀಚೆಗೆ ನಗರಸಭೆ ಅಧ್ಯಕ್ಷೆ ಮನೆಯಲ್ಲಿ ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಿರುವುದು ನಿಜ. ಈ ಸಭೆಯಲ್ಲಿ ಶೋಭಾ ಕರಂದ್ಲಾಜೆ ಅಥವಾ ಜಯಪ್ರಕಾಶ್ ಹೆಗ್ಡೆ ಪೈಕಿ ಯಾರಿಗೆ ಟಿಕೆಟ್ ಸಿಕ್ಕರೂ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕೆಂಬ ತೀರ್ಮಾನಕ್ಕೆ ಬರಲಾಗಿದೆ ಎಂದರು.

ಜಿಲ್ಲಾ ಬಿಜೆಪಿಯಲ್ಲಿ ಯಾವುದೇ ಗುಂಪುಗಾರಿಕೆಯೂ ಇಲ್ಲ. ಪಕ್ಷದ ಮುಖಂಡರು, ಕಾರ್ಯಕರ್ತರು ಪಕ್ಷ ವಿರೋಧಿ ಚಟುವಟಿಕೆಯನ್ನೂ ನಡೆಸಿಲ್ಲ. ಸ್ಥಳೀಯ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂಬ ಅಭಿಪ್ರಾಯಕ್ಕೆ ಪೂರಕವಾಗಿ ಈ ಸಭೆ ನಡೆದಿದೆಯಷ್ಟೆ. ಶೋಭಾ ಕರಂದ್ಲಾಜೆ ಅವರು ಕಾರ್ಯಕರ್ತರ ಅಭಿಪ್ರಾಯ ಕೇಳುವ ಸಲುವಾಗಿ ಪಕ್ಷದ ಕಚೇರಿಯಲ್ಲಿ ಸಭೆ ನಡೆಸುವುದು ಸೂಕ್ತ ಎಂದರು.

ಶೋಭಾ ಕರಂದ್ಲಾಜೆ ಅವರನ್ನು ಸಂಸದೆಯನ್ನಾಗಿ ಮಾಡಿರುವುದು ಸ್ಥಳೀಯ ಮುಖಂಡರು, ಕಾರ್ಯಕರ್ತರಾಗಿದ್ದಾರೆ. ಆದರೆ ಗೆದ್ದ ಬಳಿಕ ಅವರ ರಾಜಕಾರಣ ರಾಜ್ಯ ಹಾಗೂ ರಾಷ್ಟ್ರ ಮಟ್ಟಕ್ಕೆ ಮಾತ್ರ ಸೀಮಿತವಾಗಿತ್ತು. ಜಿಲ್ಲೆಯಲ್ಲಿನ ಸಮಸ್ಯೆಗಳು, ಅನುದಾನ ತರುವ ನಿಟ್ಟಿನಲ್ಲಿ ಅವರು ನಮ್ಮ ನಿರೀಕ್ಷೆಯಂತೆ ಕಾರ್ಯನಿರ್ವಹಿಸಲಿಲ್ಲ. ಪ್ರಸಕ್ತ ಚುನಾವಣೆಯ ಎದುರಾಗಿರುವ ಸಂದರ್ಭ ನಮ್ಮ ಬಳಿ ಬಂದಿದ್ದಾರೆ. ಈಗ ನಾವು ಅವರನ್ನು ಪ್ರಶ್ನಿಸುತ್ತಿದ್ದೇವೆ. ಅವರು ಕಾರ್ಯಕರ್ತರ ಅಭಿಪ್ರಾಯವನ್ನೂ ಕೇಳಬೇಕು ಎಂದ ಅವರು, ಅಭ್ಯರ್ಥಿ ಬದಲಾವಣೆಗಾಗಿ ವರಿಷ್ಠರ ಬಳಿ ಮನವಿ ಮಾಡಿದ್ದೇವೆ. ವರಿಷ್ಠರ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ. ಶೋಭಾ ಇಲ್ಲವೇ ಹೆಗ್ಡೆ ಪೈಕಿ ಯಾರಿಗೆ ಟಿಕೆಟ್ ನೀಡಿದರೂ ಪಕ್ಷದ ಅಭ್ಯರ್ಥಿಯನ್ನು ಹೆಚ್ಚು ಮತಗಳಿಂದ ಗೆಲ್ಲಿಸುವುದು ನಮ್ಮ ಮೊದಲ ಆದ್ಯತೆಯಾಗಿರುತ್ತದೆ. ಈ ಸಂಬಂಧ ವರಿಷ್ಠರು ಯಾವ ತೀರ್ಮಾನ ತಳೆದರೂ ಅದಕ್ಕೆ ಬದ್ಧವಾಗಿರುತ್ತೇವೆ ಎಂದರು.

ಈ ವೇಳೆ ನಗರಸಭೆ ಅಧ್ಯಕ್ಷೆ ಶಿಲ್ಪಾ ರಾಜ್‍ಶೇಖರ್, ಅಫ್ಸರ್ ಅಹ್ಮದ್, ರವಿ, ಮುತ್ತಪ್ಪ ಉಪಸ್ಥಿತರಿದ್ದರು.

ಶೋಭಾ ಕರಂದ್ಲಾಜೆ ಸಂಸದೆಯಾದ ಬಳಿಕ ಸಾಕಷ್ಟು ನಿರೀಕ್ಷೆ ಹೊಂದಿದ್ದೆವು. ಆದರೆ ಅವರು ರಾಷ್ಟ್ರ ರಾಜಕಾರಣಕ್ಕೆ ಸೀಮಿತರಾದರು. ಕಾರ್ಯಕರ್ತರ ಸಮಸ್ಯೆಗಳಿಗೆ ಸ್ಪಂದಿಸಲಿಲ್ಲ. ನಗರಸಭೆ ವ್ಯಾಪ್ತಿಯ ವಾರ್ಡ್‍ಗಳಿಗೆ ಅನುದಾನವನ್ನೂ ತರಲಿಲ್ಲ. ನಗರಸಭೆಯಲ್ಲಿ ಅವರ ಕಚೇರಿ ಇದ್ದರೂ ಅಲ್ಲಿ ಸದಸ್ಯರೊಂದಿಗೆ ಯಾವ ಸಭೆಯನ್ನೂ ನಡೆಸಲಿಲ್ಲ. ಅವರ ಗೆಲುವಿಗೆ ಶ್ರಮಿಸಿದವರಿಗೂ ಮನ್ನಣೆ ನೀಡಿಲ್ಲ. ಕಾರ್ಯಕರ್ತರ ಕೈಗೆ ಸಿಗದಂತಹ ಅಭ್ಯರ್ಥಿ ಕ್ಷೇತ್ರಕ್ಕೆ ಬೇಡ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿರುವುದರಿಂದ ಅಭ್ಯರ್ಥಿ ಬದಲಾವಣೆಗೆ ವರಿಷ್ಠರನ್ನು ಒತ್ತಾಯಿಸಿದ್ದೇವೆ. ಅನಿವಾರ್ಯವಾಗಿ ಪಕ್ಷ ಅವರಿಗೇ ಟಿಕೆಟ್ ನೀಡಲು ತೀರ್ಮಾನಿಸಿದರೆ ಪಕ್ಷದ ಗೆಲುವಿಗಾಗಿ ಶ್ರಮಿಸುತ್ತೇವೆ.

- ದೇವರಾಜ್ ಶೆಟ್ಟಿ, ಬಿಜೆಪಿ ಮುಖಂಡ, ನಗರಸಭೆ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News