ನಿಮ್ಮ ಸನ್ಯಾಸ ನಮಗೆ ಅಪ್ರಸ್ತುತ, ಮೊದಲು ಸಾಲವನ್ನು ತೀರಿಸಿ

Update: 2019-03-14 16:53 GMT

ಹೊಸದಿಲ್ಲಿ,ಮಾ.14: ಜಪಾನಿನ ದಾಯ್ಚಿ ಸಾಂಕ್ಯೊ ಕಂಪನಿಗೆ 3,500 ಕೋ.ರೂ.ಗಳ ಸಾಲವನ್ನು ಪಾವತಿಸಲು ನಿಮ್ಮ ಯೋಜನೆಯ ವಿವರಗಳನ್ನು ಮಾ.28ರೊಳಗೆ ನ್ಯಾಯಾಲಯಕ್ಕೆ ಸಲ್ಲಿಸಿ ಎಂದು ಸರ್ವೋಚ್ಚ ನ್ಯಾಯಾಲಯವು ಗುರುವಾರ ಫೋರ್ಟಿಸ್ ಹೆಲ್ತ್‌ಕೇರ್‌ನ ಮಾಜಿ ಪ್ರವರ್ತಕರಾದ ಮಲ್ವಿಂದರ್ ಸಿಂಗ್ ಮತ್ತು ಶಿವಿಂದರ್ ಸಿಂಗ್ ಅವರಿಗೆ ತಾಕೀತು ಮಾಡಿದೆ.

ರ್ಯಾನ್‌ಬಾಕ್ಸಿ ಲ್ಯಾಬರೇಟರಿಸ್‌ನ ಉತ್ತರಾಧಿಕಾರಿಗಳಾಗಿದ್ದ ಸಿಂಗ್ ಸೋದರರು ಈಗ ಪರಸ್ಪರರಿಂದ ದೂರವಾಗಿದ್ದಾರೆ. ಮಾಹಿತಿಯನ್ನು ಮುಚ್ಚಿಟ್ಟು ರ್ಯಾನ್‌ಬಾಕ್ಸಿಯನ್ನು ಖರೀದಿಸಲು ದಾಯ್ಚಿಗೆ ಆಮಿಷವೊಡ್ಡಿದ್ದ ತಪ್ಪಿತಸ್ಥರಾಗಿದ್ದಾರೆ ಎಂದು ಸಿಂಗಾಪುರ ನ್ಯಾಯಾಧಿಕರಣವೊಂದು ತೀರ್ಪು ನೀಡಿದ ಬಳಿಕ ಈ ಸೋದರರು ದಾಯ್ಚಿಗೆ ಸುಮಾರು 3,500 ಕೋ.ರೂ.ಗಳನ್ನು ಪಾವತಿಸಬೇಕಿದೆ. ಅಂತಿಮವಾಗಿ ಸನ್ ಫಾರ್ಮಾಸ್ಯುಟಿಕಲ್ಸ್ ದಾಯ್ಚಿಯಿಂದ 3.2 ಬಿ.ಡಾ.ಗೆ ರ್ಯಾನ್‌ಬಾಕ್ಸಿಯನ್ನು ಖರೀದಿಸಿತ್ತು.

ಮಲ್ವಿಂದರ್ ಸಿಂಗ್ ಸಾಲವನ್ನು ತೀರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ದಾಯ್ಚಿ ಪರ ವಕೀಲ ಎಫ್.ಎಸ್.ನರಿಮನ್ ತಿಳಿಸಿದರು. ಆದರೆ ತಾನು ‘ಸನ್ಯಾಸಿಯಾಗಲು ಲೌಕಿಕ ಜಗತ್ತನ್ನು ತೊರೆದಿದ್ದೇನೆ’ಎಂದು ಶಿವಿಂದರ್ ಸಿಂಗ್ ಹೇಳಿದರು.

ನೀವು ಸನ್ಯಾಸಿಯಾಗುವುದು ನ್ಯಾಯಾಲಯಕ್ಕೆ ಅಪ್ರಸ್ತುತ. ಅದೇನಿದ್ದರೂ ಸಾಲವನ್ನು ಮೊದಲು ತೀರಿಸಿ ಬಳಿಕ ಸನ್ಯಾಸದ ಮಾತನಾಡಿ ಎಂದು ಮು.ನ್ಯಾ.ರಂಜನ್ ಗೊಗೊಯಿ ನೇತೃತ್ವದ ಪೀಠವು ಕುಟುಕಿತು.

ತನ್ನ ಕಕ್ಷಿದಾರರು ಡಿಸೆಂಬರ್,2017ರಲ್ಲಿ ಲೌಕಿಕ ಜಗತ್ತಿಗೆ ಮರಳಿದ್ದಾರೆ ಎಂದು ಶಿವಿಂದರ್ ಪರ ವಕೀಲ ಪಿ.ಎಸ್.ಪಟವಾಲಿಯಾ ಹೇಳಿದಾಗ, ಇದು ಒಳ್ಳೆಯದು,ನೀವು ಲೌಕಿಕ ಜಗತ್ತಿಗೆ ಮರಳಿದ್ದೀರಿ ಎಂದು ನಿಮ್ಮ ವಕೀಲರು ಹೇಳಿದ್ದಾರೆ. ಈಗ ಹಣದ ಬಗ್ಗೆ ಯೋಚಿಸುವುದನ್ನು ಆರಂಭಿಸಿ ಎಂದು ಗೊಗೊಯಿ ಹೇಳಿದರು.

ನೀವು ಔಷಧ ಉದ್ಯಮದಲ್ಲಿ ಮುಂಚೂಣಿಯಲ್ಲಿದ್ದಿರಿ ಮತ್ತು ನೀವು ನ್ಯಾಯಾಲಯಕ್ಕೆ ಹಾಜರಾಗುವುದು ಒಳ್ಳೆಯದಾಗಿ ಕಾಣುವುದಿಲ್ಲ. ನೀವು ನ್ಯಾಯಾಲಯಕ್ಕೆ ಹಾಜರಾಗಿದ್ದು ಇದೇ ಕೊನೆಯಾಗಲಿ ಎಂದು ಪೀಠವು ಹೇಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News