ಮಾತೆ ಮಹಾದೇವಿ ನಾಡಿನ ಅನರ್ಘ್ಯ ರತ್ನ: ಡಾ.ತೋಂಟದ ಸಿದ್ಧರಾಮ ಶ್ರೀ ಕಂಬನಿ

Update: 2019-03-14 17:22 GMT

ಬೆಳಗಾವಿ, ಮಾ. 14: ಬಸವಾದಿ ಶರಣರ ತತ್ವ ಪ್ರಸಾರ ಕಾಯಕವನ್ನು ಬದುಕಿನುದ್ದಕ್ಕೂ ಮಾಡಿಕೊಂಡು ಬಂದಿದ್ದ ಜಗದ್ಗುರು ಮಾತೆ ಮಹಾದೇವಿಯವರು ನಮ್ಮ ನಾಡಿನ ಅನರ್ಘ್ಯ ರತ್ನವೆನಿಸಿದ್ದರು ಎಂದು ನಾಗನೂರು ರುದ್ರಾಕ್ಷಿಮಠದ ಡಾ. ತೋಂಟದ ಸಿದ್ಧರಾಮ ಸ್ವಾಮಿ ಕಂಬನಿ ಮಿಡಿದಿದ್ದಾರೆ.

ಲಿಂಗಾನಂದ ಮಹಾಸ್ವಾಮಿ ಮಾರ್ಗದರ್ಶನದಲ್ಲಿ ಬಸವ ಧರ್ಮ ಪೀಠವನ್ನು ಸ್ಥಾಪಿಸಿ, ಆ ಪೀಠವನ್ನೇರಿದ ಮೊದಲ ಮಹಿಳಾ ಜಗದ್ಗುರು ಎಂಬ ಅಭಿದಾನಕ್ಕೆ ಪಾತ್ರರಾಗಿದ್ದರು. ಬಸವಾದಿ ಶರಣರನ್ನು ಕುರಿತು ಉತ್ಕೃಷ್ಠ ಸಾಹಿತ್ಯ ರಚನೆ ಮಾಡಿದ್ದ ಮಾತಾಜಿ ಅವರು, ಲಿಂಗೈಕ್ಯರಾದುದು ನಮ್ಮ ನಾಡು ಹಾಗೂ ಧರ್ಮಕ್ಕೆ ತುಂಬಲಾಗದ ಹಾನಿಯನ್ನುಂಟು ಮಾಡಿದೆ ಎಂದು ಅವರು ಸ್ಮರಿಸಿದ್ದಾರೆ.

ಜಗದ್ಗುರು ಮಾತೆ ಮಹಾದೇವಿ ಅವರು ಕೂಡಲ ಸಂಗಮ, ಬಸವ ಕಲ್ಯಾಣ, ಅಲ್ಲಮಗಿರಿ, ಬೆಂಗಳೂರು, ಧಾರವಾಡಗಳಲ್ಲಿ ಬಸವಧರ್ಮಪೀಠದ ಶಾಖೆಗಳನ್ನು ಸ್ಥಾಪಿಸಿದ್ದು, ಅವು ಇಂದೂ ನಾಡಿನ ಧಾರ್ಮಿಕ ಕೇಂದ್ರಗಳಲ್ಲಿ ಪರಿಗಣಿಸಲ್ಪಟ್ಟಿವೆ. ಇದರ ಹಿಂದೆ ಮಾತಾಜಿ ಅವರ ಪರಿಶ್ರಮವಿರುವುದನ್ನು ಮರೆಯಲಾಗದು. ಮಾತಾಜಿ ಅವರು ಶ್ರೇಷ್ಠ ವಚನಕಾರರಾಗಿದ್ದರು. ತಮ್ಮ ಪ್ರವಚನಗಳಲ್ಲಿ ಬಸವಾದಿ ಶಿವಶರಣರ ವಚನ ಸಾತ್ಯದ ಸಾರಸರ್ವಸ್ವವನ್ನೇ ಶ್ರೋತೃಗಳಿಗೆ ಉಣಬಡಿಸುತ್ತಿದ್ದರು. ಇತ್ತೀಚೆಗೆ ನಡೆದ ಲಿಂಗಾಯತ ಸ್ವತಂತ್ರಧರ್ಮ ಮಾನ್ಯತೆಯನ್ನು ಪಡೆಯುವ ಹೋರಾಟದಲ್ಲಿ ಅವರು ಅಗ್ರಗಣ್ಯರಾಗಿದ್ದರು. ಮಾತಾಜಿ ಅವರ ಅಗಲಿಕೆಗೆ ಶ್ರೀಗಳು ಸಂಪಾತ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News