ಮೋದಿ ಆಡಳಿತ ವಿಶ್ವಕ್ಕೆ ಮಾದರಿಯಾಗುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ

Update: 2019-03-14 17:27 GMT

ಶೃಂಗೇರಿ, ಮಾ.14: ಮುಂದುವರಿದ ರಾಷ್ಟ್ರಗಳ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದ್ದ ಭಾರತವು ಪ್ರಸ್ತುತ 5ನೇ ಸ್ಥಾನಕ್ಕೆ ಬಂದಿದೆ. ಅಮೇರಿಕಾ, ಜಪಾನ್, ರಷ್ಯಾ, ಫ್ರಾನ್ಸ್ ಮುಂತಾದ ದೇಶಗಳು ಭಾರತದ ಆರ್ಥಿಕ ಪ್ರಗತಿಯನ್ನು ಕೊಂಡಾಡಿದ್ದಾರೆ. ಕೃಷಿಕರ ಅಭಿವೃದ್ಧಿಗಾಗಿ ದೇಶದ ಹನ್ನರೆಡುವರೇ ಕೋಟಿ ಕೃಷಿಕರಿಗೆ 75 ಸಾವಿರ ಕೋಟಿ ರೂ. ಮೀಸಲಾಗಿರಿಸಲಾಗಿದೆ. ಸಾಮಾನ್ಯ ಜನರ ಆರೋಗ್ಯ ರಕ್ಷಣೆಗಾಗಿ 50ಕೋಟಿ ರೂ. ಮೀಸಲಿರಿಸುವ ಮೂಲಕ ಮೋದಿ ಆಡಳಿತ ಜಗತ್ತಿಗೆ ಮಾದರಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

ಪಟ್ಟಣದ ರೈತಭವನದಲ್ಲಿ ಗುರುವಾರ ಆಯೋಜಿಸಲಾಗಿದ್ದ ಬಿಜೆಪಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶ ಎಲ್ಲೆಡೆ ಮೋದಿ ಆಲೆ ಇದೆ. ಕಳೆದ ಬಾರಿಗಿಂತ ಶೇ.10ರಿಂದ12ರಷ್ಟು ಜಾಸ್ತಿ ಮತಗಳಿಕೆಯನ್ನು ಬಿಜೆಪಿ ಪಕ್ಷ ಪಡೆಯುತ್ತದೆ. ಮೋದಿ ಅವರು ದೇಶದ ಘನತೆಯನ್ನು ವಿಶ್ವದಲ್ಲಿ ಉನ್ನತ ಸ್ಥಾನಕ್ಕೆ ಕೊಂಡು ಹೋಗಿದ್ದಾರೆ ಎಂದ ಅವರು, ಲೋಕಸಭೆಯಲ್ಲಿ ಬಿಜೆಪಿ ಈ ಬಾರಿ 300ಕ್ಕೂ ಹೆಚ್ಚು ಸ್ಥಾನ ಗಳಿಸಲಿದೆ. ಮೋದಿಗೆ ರಾಜ್ಯದಲ್ಲೂ ಅನುಕೂಲಕರವಾದ ವಾತಾವರಣವಿದ್ದು ರಾಜ್ಯದಲ್ಲಿ 22 ಸ್ಥಾನಗಳನ್ನು ನಾವು ನೀಡುವಲ್ಲಿ ಕಾರ್ಯಕರ್ತರ ಜೊತೆ ಹಗಲು ರಾತ್ರಿ ದುಡಿಯುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ ವಿಧಾನಸಭೆಯ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನ ಪಡೆದರೂ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವ ಅನಿವಾರ್ಯತೆ ಉಂಟಾಗಿದೆ. 37 ಸ್ಥಾನ ಗಳಿಸಿದ ಜೆಡಿಎಸ್ ಅಧಿಕಾರ ನಡೆಸುತ್ತಿದೆ. ಯಾವುದೇ ಅಭಿವೃದ್ಧಿ ಕಾರ್ಯದ ಬಗ್ಗೆ ಸಿಎಂ ಕುಮಾರಸ್ವಾಮಿಗೆ ಆಸಕ್ತಿ ಇಲ್ಲ, ರೈತರ ಸಾಲಮನ್ನಾವನ್ನು 24 ಗಂಟೆಯಲ್ಲಿ ಮಾಡುತ್ತೇವೆ ಎಂದ ಜೆಡಿಎಸ್ ಕುಟುಂಬ ರಾಜಕಾರಣಕ್ಕೆ ಮಾತ್ರ ಸೀಮಿತವಾಗಿದೆ ಎಂದರು.

ರಾಜ್ಯಬರಗಾಲಕ್ಕೆ ತುತ್ತಾದರೂ ನೀರಾವರಿ ಯೋಜನೆಗೆ ತಿಲಾಂಜಲಿ ನೀಡಿದೆ. ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರವಿದ್ದಾಗ ಹಗರಣಗಳ ಸರಮಾಲೆಯಲ್ಲಿ ಮುಳುಗಿತ್ತು. 2ಜಿ, 4ಜಿ, ಕಲ್ಲಿದ್ದಲು ಮುಂತಾದ ಹಗರಣದಿಂದ ದೇಶದ 130ಕೋಟಿ ಜನರಿಗೆ ವಂಚಿಸಿದೆ ಹಾಗೂ ದೇಶದ ಆರ್ಥಿಕತೆಯನ್ನು ಹಾಳುಮಾಡಿದೆ. ಮೋದಿ ಸರಕಾರದ ಸಂಸದರು ಯಾವುದೇ ಭ್ರಷ್ಟಚಾರ ಮಾಡಿಲ್ಲ ಎಂದರು. 

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ದೇಶದ ರಕ್ಷಣಾ ಸಮಿತಿಯ ಸದಸ್ಯೆಯಾಗಿ ದೇಶದ ಗಡಿಯಲ್ಲಿ ಸೈನಿಕರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಮೋದಿ ಸರಕಾರವು ಸೈನಿಕರ ಹಿತರಕ್ಷಣೆಗಾಗಿ 1 ಲಕ್ಷ ಕೋಟಿ ಹಣವನ್ನು ವಿನಿಯೋಗಿಸಲಾಗಿದೆ. ಸೈನಿಕರ ಅತಿ ಅಗತ್ಯವಾದ ನೈಟ್ ವಿಷನ್ ಗ್ಲಾಸ್ ವಿತರಿಸಿದ ಸರಕಾರ ನಮ್ಮದು. 5 ಲಕ್ಷ ಗ್ರಾಮಗಳನ್ನು ಸ್ವಚ್ಛಗ್ರಾ ಮವನ್ನಾಗಿಸಿದ್ದೇವೆ. ಜಿಲ್ಲೆಯ ಮೆಣಸಿನ ಹಾಡ್ಯದ 124 ಮನೆಗಳಿಗೆ ದೀನದಯಾಳ್ ವಿದ್ಯುತ್ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಉಡುಪಿಯಲ್ಲಿ ಪಾಸ್‍ಪೋರ್ಟ್ ಕಚೇರಿ ಹಾಗೂ ಸತಿ ಸೆಂಟರ್ ಪ್ರಾರಂಭಿಸಲಾಗುವುದು. ಜಿ.ಟಿ.ಡಿ.ಸಿಯನ್ನು ಉಡುಪಿಯಲ್ಲಿ ಪ್ರಾರಂಭಿಸಲಾಗುವುದು. ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸುವ ಯೋಜನೆ ಇದೆ ಎಂದರು.

ಚಿಕ್ಕಮಗಳೂರಿನಲ್ಲಿ ಕಾಳುಮೆಣಸಿನ ಮಾರುಕಟ್ಟೆಯ ಅಭಿವೃದ್ಧಿಗಾಗಿ ಸ್ಪೈಸ್‍ಪಾರ್ಕ್ ನಿರ್ಮಿಸಲಾಗುವುದು. ಬೇಲೂರು-ಚಿಕ್ಕಮಗಳೂರು-ಶೃಂಗೇರಿ-ಮಂಗಳೂರಿಗೆ ರೈಲ್ವೆ ಮಾರ್ಗ ಸ್ಥಾಪಿಸಲು ಈಗಾಗಲೇ ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಿ ಆಧ್ಯಾದೇಶ ಮಾಡಿಸಿದ್ದೇನೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೋದಿಯ ವಿರುದ್ಧ ಮಹಾಘಟ್‍ ಬಂಧನ್, ಪಾಕಿಸ್ತಾನ ಮತ್ತು ಚೀನಾ ಸೇರಿಕೊಂಡಿದೆ ಎಂದ ಅವರು, ಕ್ಷೇತ್ರದ ರಸ್ತೆ ಅಭಿವೃದ್ಧಿಗಾಗಿ ಕೇಂದ್ರ ಸರಕಾರದ ಸಿ.ಆರ್.ಎಫ್ ನಿಧಿಯಡಿಯಲ್ಲಿ ಅನುದಾನ ನೀಡಿದೆ. ಆದರೆ ಇಲ್ಲಿನ ಶಾಸಕರು ಅದನ್ನು ತಾವು ತಂದ ಅನುದಾನ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಸಂಸದರನ್ನು ನಿರ್ಲಕ್ಷಿಸಿ ಶಂಕುಸ್ಥಾಪನೆ ಮಾಡುತ್ತಿದ್ದಾರೆ. ರಾಜಕೀಯದಲ್ಲಿ ದ್ವೇಷರಾಜಕಾರಣ ಸಲ್ಲದು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಡಿ.ಎನ್.ಜೀವರಾಜ್ ಮಾತನಾಡಿ, ಇಂದಿರಾಗಾಂಧಿ ಅವರಿಗೆ ರಾಜಕೀಯ ಮರುಹುಟ್ಟು ನೀಡಿದ ಚಿಕ್ಕಮಗಳೂರನ್ನು ಕಾಂಗ್ರೆಸ್ ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಡುತ್ತಿರುವುದು ಕಾಂಗ್ರೆಸ್ ಪಕ್ಷದ ಆಧಃಪತನಕ್ಕೆ ಉತ್ತಮ ಉದಾರಹಣೆಯಾಗಿದೆ ಎಂದರು.

ವೇದಿಕೆಯಲ್ಲಿ ತಾ.ಪಂ ಅಧ್ಯಕ್ಷೆ ಜಯಶೀಲ ಚಂದ್ರಶೇಖರ್, ತಾಲೂಕು ಬಿಜೆಪಿ ಅಧ್ಯಕ್ಷ ಎಚ್.ಎಸ್.ನಟೇಶ್, ಜಿ.ಪಂ ಸದಸ್ಯ ಬಿ.ಶಿವಶಂಕರ್, ಜಿ.ಪಂ ಮಾಜಿ ಉಪಾಧ್ಯಕ್ಷ ಶೆಟ್ಟಿಗದ್ದೆ ರಾಮಸ್ವಾಮಿ, ಎನ್.ಆರ್.ಪುರ ತಾ.ಪಂ ಅಧ್ಯಕ್ಷೆ ಜಯಶೀಲ ಮೋಹನ್, ಜಿಲ್ಲಾ ಯುವಮೋರ್ಚಾದ ಅಧ್ಯಕ್ಷ ಪುಣ್ಯಪಾಲ್, ಜಿಲ್ಲಾ ರೈತಮೋರ್ಚಾದ ಕಾರ್ಯದರ್ಶಿ ದಿನೇಶ್ ಹೊಸೂರ್, ಬಿಜೆಪಿ ಮುಖಂಡ ಶ್ರೀಧರ್ ರಾವ್, ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಗುರುವಾರ ಶೃಂಗೇರಿ ಶ್ರೀಮಠದ ಶಾರದೆ ಹಾಗೂ ಉಭಯ ಶ್ರೀಗಳನ್ನು ಭೇಟಿ ನೀಡಿ ಆಶೀರ್ವಾದ ಪಡೆದರು. ಬೆಳಗ್ಗೆ ಸುಮಾರು 9.30ಕ್ಕೆ ಶ್ರೀಮಠಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಎಚ್.ಎಸ್.ನಡೇಶ್, ಪ್ರಧಾನಕಾರ್ಯದರ್ಶಿ ಚೇತನ್ ಹೆಗಡೆ, ಮೆ.ನಾ.ರಮೇಶ್, ನೂತನ್‍ ಕುಮಾರ್, ತಾ.ಪಂ.ಅಧ್ಯಕ್ಷ ಜಯಶೀಲ ಚಂದ್ರಶೇಖರ್, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರವೀಣ್, ಸದಸ್ಯರಾದ ರಾಮಕೃಷ್ಣ, ತಾಲೂಕು ರೈತಮೋರ್ಚಾದ ಅಧ್ಯಕ್ಷ ಹೆಬ್ಬಿಗೆ ಕೃಷಮೂರ್ತಿ ಮುಂತಾದವರು ಸ್ವಾಗತಿಸಿದರು. ಮೊದಲು ನರಸಿಂಹವನದ ಗುರುನಿವಾಸಕ್ಕೆ ತೆರಳಿ ಯತಿವರ್ಯರಾದ ಶ್ರೀಭಾರತೀತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರಬಾರತೀ ಅವರನ್ನು ಭೇಟಿ ಮಾಡಿದ ಬಳಿಕ ಶ್ರೀ ಶಾರದಾಂಬೆ, ತೋರಣಗಣಪತಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News