ಬಿಜೆಪಿ ಸಂಖ್ಯಾಬಲ ಇಳಿಸಲು ಮೈತ್ರಿ ಅಭ್ಯರ್ಥಿಗಳ ಪರ ರಾಜ್ಯಾದ್ಯಂತ ಪ್ರಚಾರ: ಮಾಜಿ ಪ್ರಧಾನಿ ದೇವೇಗೌಡ

Update: 2019-03-14 17:54 GMT

ಮಂಡ್ಯ, ಮಾ.14: ರಾಜ್ಯದಲ್ಲಿ ಬಿಜೆಪಿ ಸಂಖ್ಯಾಬಲವನ್ನು 16 ರಿಂದ ನಾಲ್ಕಕ್ಕೆ ಇಳಿಸುವ ಗುರಿ ಸಾಧನೆಗಾಗಿ ರಾಜ್ಯಾದ್ಯಂತ ಮೈತ್ರಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುವುದಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಘೋಷಿಸಿದ್ದಾರೆ.

ಸಿಲ್ವರ್ ಜ್ಯೂಬಿಲಿ ಪಾರ್ಕಿನಲ್ಲಿ ಗುರುವಾರ ಆಯೋಜಿಸಿದ್ದ ಮಂಡ್ಯ ಅಭ್ಯರ್ಥಿ ಸ್ಪರ್ಧೆ ಘೋಷಣೆ ಸಂಬಂಧ ಏರ್ಪಡಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ಕೆಲವರ ಸುಳ್ಳು, ಅಹಂಕಾರದಿಂದ ಸಂಕಷ್ಟದಲ್ಲಿರುವ ರಾಷ್ಟ್ರದ ಪರಿಸ್ಥಿತಿಯನ್ನು ತಿಳಿಗೊಳಿಸಲು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಬೆಂಬಲಿಸಬೇಕೆಂದು ಮನವಿ ಮಾಡಿದರು.

ದೇಶವನ್ನು ಕಾಂಗ್ರೆಸ್ ಮುಕ್ತಗೊಳಿಸುವ ಮಾತನ್ನು ಪದೇ ಪದೇ ಹೇಳುತ್ತಿದ್ದಾರೆ. ಯಾರನ್ನು, ಯಾರೂ ಮುಕ್ತಗೊಳಿಸಲು ಸಾಧ್ಯವಿಲ್ಲವೆಂದು ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿಯನ್ನು ತರಾಟೆಗೆ ತೆಗೆದುಕೊಂಡರು. ಮೋದಿ ನೇತೃತ್ವದ ಬಿಜೆಪಿ ದೇಶಕ್ಕೆ ಒಳ್ಳೆಯ ಕೆಲಸ ಮಾಡಿದ್ದರೆ ಉಪಚುನಾವಣೆಗಳಲ್ಲಿ ಅದು ಹೀನಾಯವಾಗಿ ಸೋತಿದ್ದಾದರೂ ಏಕೆ ಎಂದು ಪ್ರಶ್ನಿಸಿದ ಅವರು, ಈ ನಿಟ್ಟಿನಲ್ಲಿ ಪ್ರತಿಪಕ್ಷಗಳೆಲ್ಲ ಒಗ್ಗೂಡಿ ಚುನಾವಣೆ ಎದುರಿಸಲು ಸಿದ್ಧವಾಗಿರುವುದು ಐತಿಹಾಸಿಕ ಬೆಳವಣಿಗೆ ಎಂದು ಪ್ರತಿಪಾದಿಸಿದರು.

ಪ್ರಧಾನಿಯಾಗಿ ದೇಶಕ್ಕೆ ಸಾಕಷ್ಟು ಒಳ್ಳೆಯ ಕೆಲಸ ಮಾಡಿದೆ. ದಲಿತರು, ಅಲ್ಪಸಂಖ್ಯಾತರು, ರೈತರ ಪರವಾದ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದೆ. ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತೆ ಮಾಡಿದೆ. ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಕೂಡ ಸಾಲಮನ್ನಾದಂತಹ ಅತ್ಯುತ್ತಮ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಬಡವರ ಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಆದರೆ ಅದೆಲ್ಲವನ್ನೂ ಮಾಧ್ಯಮಗಳು ಕಡೆಗಣಿಸುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ ಐದು ವರ್ಷಗಳಲ್ಲಿ ಮೋದಿ ಸಾಧನೆ ಏನೆಂದು ಪ್ರಶ್ನಿಸದೆ ನಿತ್ಯ ಅವರನ್ನು ಹಾಡಿಹೊಗಳುವ ಸುದ್ದಿಯನ್ನಷ್ಟೇ ಪ್ರಕಟಿಸಲಾಗುತ್ತಿದೆ. ಮೋದಿ ಭಾವಚಿತ್ರವಿಲ್ಲದ ಪತ್ರಿಕೆಗಳೇ ಇಲ್ಲದಂತಹ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಮಾಧ್ಯಮಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಹಾಸನದ ಮೂಡಲಹಿಪ್ಪೆ ಗ್ರಾಮಕ್ಕೆ 60 ವರ್ಷಗಳ ನಂತರ ಭೇಟಿ ನೀಡಿದ್ದೆ. ಅಲ್ಲಿನ ಜನರ ಒಡನಾಟವನ್ನು ನೆನೆದು ಭಾವುಕನಾಗಿ ಕಣ್ಣೀರು ಹಾಕಿದೆ. ಬಿಜೆಪಿಯವರೂ ಅಪಹಾಸ್ಯ ಮಾಡಿದ್ದಾರೆ. ಅದನ್ನು ಅಪಾರ್ಥ ಬರುವ ರೀತಿಯಲ್ಲಿ ಮಾಧ್ಯಮಗಳು ಬಿಂಬಿಸುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News