ನಾನು ಒಂಟಿ ಅಲ್ಲ, ನನ್ನೊಂದಿಗೆ ಜನರಿದ್ದಾರೆ: ಸುಮಲತಾ ಅಂಬರೀಶ್

Update: 2019-03-14 18:01 GMT

ಪಾಂಡವಪುರ,ಮಾ.14: ನಾನು ಒಂಟಿ ಅಲ್ಲ, ನನ್ನೊಂದಿಗೆ ಜನರಿದ್ದಾರೆ ಎಂದು ಅಂಬರೀಶ್ ಪತ್ನಿ ಸುಮಲತಾ ಅಂಬರೀಶ್ ಹೇಳಿದರು.

ತಾಲೂಕಿನ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸ ನಡೆಸಿದ ಸುಮಲತಾ ಅಂಬರೀಶ್ ಅವರು ಕಾಂಗ್ರೆಸ್ ಮುಖಂಡರು ಹಾಗೂ ಅಂಬರೀಶ್ ಅಭಿಮಾನಿಗಳನ್ನು ಭೇಟಿ ಮಾಡಿ ಚರ್ಚೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಮುಖಂಡರು ನನ್ನ ಜತೆಯಲ್ಲಿರದಿದ್ದರೂ ನನ್ನೊಂದಿಗೆ ಜನರಿದ್ದಾರೆ. ಹೀಗಾಗಿ ನಾನು ಏಕಾಂಗಿಯಲ್ಲ ಎಂದರು.

ಕಾಂಗ್ರೆಸ್ ಪಕ್ಷ ನನಗೆ ಮೋಸ ಮಾಡುತ್ತಿಲ್ಲ. ಬದಲಿಗೆ ಕಾಂಗ್ರೆಸ್ ಪಕ್ಷಕ್ಕೇ ಮೋಸವಾಗುತ್ತಿದೆ. ಜತೆಗೆ ಪಕ್ಷದ ಕಾರ್ಯಕರ್ತರಿಗೂ ಕಾಂಗ್ರೆಸ್‍ನಿಂದ ಮೋಸ ಆಗುತ್ತಿದೆ ಎಂದು ಅವರು ಹೇಳಿದರು.

ಅಂಬರೀಶ್ ಸಂಪಾದನೆ ಮಾಡಿದ ಈ ಜನರನ್ನು ನಂಬಿಕೊಂಡು ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ತಿಳಿಸಿದ ಸುಮಲತಾ ಅಂಬರೀಶ್, ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ನನಗೆ ಜೆಡಿಎಸ್ ಪಕ್ಷಕ್ಕೆ ಬರುವಂತೆ ಆಹ್ವಾನ ಕೊಟ್ಟಿಲ್ಲ ಎಂದರು. ಸಿಎಂ ಎಚ್.ಡಿ.ಕುಮಾರಸ್ವಾಮಿ ಕೂಡ ಅವರು ನಮ್ಮ ಪಕ್ಷದಲ್ಲಿ ಇರಲಿಲ್ಲ ಅಂದ ಮೇಲೆ ಅವರ ಬಳಿ ಮಾತನಾಡುವುದು ಏನು ಇದೆ. ಈಗ ನನ್ನ ಹೆಸರು ಏಕೆ ಬಳಕೆ ಮಾಡುತ್ತಿದ್ದಾರೆಂಬುದು ನನಗೆ ಗೊತ್ತಿಲ್ಲ ಎಂದರು.

ಸಹಾಯ ಮಾಡಿ: ನನಗೆ ಲೋಕಸಭಾ ಚುನಾವಣೆಯಲ್ಲಿ ರೈತನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರ ರೈತಸಂಘದ ಕಾರ್ಯಕರ್ತರು ಸಹಾಯ ಮಾಡಬೇಕು. ಸಹಾಯ ಮಾಡಿದರೆ ಚುನಾವಣೆಗೆ ನಿಲ್ಲುತ್ತೇನೆ ಎಂದರು.

ಪ್ರತ್ಯೇಕವಾಗಿ ಸ್ವಾಗತಿಸಿದ ಮುಖಂಡರು: ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸ ಕೈಗೊಳ್ಳಲು ಆಗಮಿಸಿದ ಸುಮಲತಾ ಅಂಬರೀಶ್ ಅವರನ್ನು ಕಾಂಗ್ರೆಸ್ ಮುಖಂಡರು ಪ್ರತ್ಯೇಕವಾಗಿ ಸ್ವಾಗತಿಸಿಕೊಳ್ಳುವ ಮೂಲಕ ಮತ್ತೇ ಬಣ ರಾಜಕೀಯಕ್ಕೆ ನಾಂದಿ ಹಾಡಿದರು. ತಾಲೂಕಿನ ಮೇಲುಕೋಟೆಯಲ್ಲಿ ಕಾಂಗ್ರೆಸ್ ಮುಖಂಡರು ಪ್ರತ್ಯೇಕವಾಗಿ ಸುಮಲತಾ ಅಂಬರೀಶ್ ಅವರನ್ನು ಸ್ವಾಗತಿಸಿಕೊಂಡರು. ಜತೆಗೆ ಪ್ರತ್ಯೇಕವಾಗಿ ನಿಮ್ಮ ಜತೆಗೆ ಮಾತನಾಡುವುದಿದೆ ಎಂದು ಕೂಡ ಸುಮಲತಾ ಅವರಲ್ಲಿ ಭಿನ್ನವಿಸಿಕೊಂಡರು.

ತಾಲೂಕಿನ ಮೇಲುಕೋಟೆ ಶ್ರೀ ಚಲುವನಾರಾಯಣಸ್ವಾಮಿ ದೇವಸ್ಥಾನದ ಬಳಿ ಸುಮಲತಾ ಅಂಬರೀಶ್ ಅವರನ್ನು ಕೆಪಿಸಿಸಿ ಸದಸ್ಯ ಎಲ್.ಡಿ.ರವಿ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಲ್.ಸಿ.ಮಂಜುನಾಥ್ ತಂಡ ಸ್ವಾಗತಿಸಿಕೊಂಡರೆ, ಪ್ರವಾಸಿ ಮಂದಿರ ಬಳಿ ಪಾಂಡವಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಕೃಷ್ಣೇಗೌಡ (ಹೊನಗಾನಹಳ್ಳಿ ಕಿಟ್ಟಿ), ಮೇಲುಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಿ.ಆರ್.ರಮೇಶ್, ಮನ್‍ಮುಲ್ ಉಪಾಧ್ಯಕ್ಷ ಜಿ.ಇ.ರವಿಕುಮಾರ್, ಕನಗೋನಹಳ್ಳಿ ಪರಮೇಶ್‍ಗೌಡ ಅವರ ತಂಡ ಸುಮಲತಾ ಅವರನ್ನು ಸ್ವಾಗತಿಸಿದರು.

ಸಂಚಲನ ಮೂಡಿಸಿ ಸುಮಲತಾ ಪ್ರವಾಸ: ಅಂಬರೀಶ್ ಪತ್ನಿ ಸುಮಲತಾ ಅಂಬರೀಶ್ ಅವರು ಮೇಲುಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಪ್ರವಾಸ ಕೈಗೊಂಡು ಸಂಚಲನ ಮೂಡಿಸಿದರು. ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಸುಮಲತಾ ಅಂಬರೀಶ್, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಅಂಬರೀಶ್ ಅಭಿಮಾನಿಗಳು ಹಾಗೂ ರೈತಸಂಘದ ಮುಖಂಡರ ಜತೆ ಸಮಾಲೋಚನೆ ನಡೆಸಿದರು.

ಮಧ್ಯಾಹ್ನ 12.30ಕ್ಕೆ ಮೇಲುಕೋಟೆ ಚಲುವನಾರಾಯಣಸ್ವಾಮಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಸುಮಲತಾ, ಬಳಿಕ ನಾರಾಯಣಪುರ, ಚಿಟ್ಟನಹಳ್ಳಿ, ಮಾಣಿಕ್ಯನಹಳ್ಳಿ, ಬೆಳ್ಳಾಳೆ, ಅನೂನಹಳ್ಳಿ, ಅಮೃತಿ, ಜಕ್ಕನಹಳ್ಳಿ, ಅರಕನಕೆರೆ, ಗಿಡದ ಶಂಭೂನಹಳ್ಳಿ, ಹಳೇಬೀಡು, ಸುಂಕಾತೊಣ್ಣೂರು, ಅತ್ತಿಗಾನಹಳ್ಳಿ, ಮಹದೇಶ್ವರಪುರ, ಲಕ್ಷ್ಮೀಸಾಗರ, ಕೆರೆತೊಣ್ಣೂರು, ಬೇವಿನಕುಪ್ಪೆ, ಹಿರೇಮರಳಿ, ಪಾಂಡವಪುರ ಪಟ್ಟಣ, ಹಾರೋಹಳ್ಳಿ, ದೇವೇಗೌಡನಕೊಪ್ಪಲು, ಚಿಕ್ಕಾಡೆ, ಪಟ್ಟಸೋಮನಹಳ್ಳಿ, ಚಿಕ್ಕಮರಳಿ, ಕನಗನಮರಡಿ, ಚಿಕ್ಕಬ್ಯಾಡರಹಳ್ಳಿ, ತಾಳಶಾಸನ, ದೊಡ್ಡಬ್ಯಾಡರಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಬೆಂಬಲ ಕೋರಿದರು.

ದಾರಿಯುದ್ದಕ್ಕೂ ಕಾಂಗ್ರೆಸ್ ಕಾರ್ಯಕರ್ತರು, ರೈತಸಂಘದ ಮುಖಂಡರು ಹಾಗೂ ಅಂಬರೀಶ್ ಅಭಿಮಾನಿಗಳು ಸುಮಲತಾ ಅಂಬರೀಶ್ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿ ಆತ್ಮೀಯವಾಗಿ ಬರಮಾಡಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News