ಹನೂರು: ಕಾಡಂಚಿನ ಗ್ರಾಮಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಒತ್ತಾಯಿಸಿ ಧರಣಿ

Update: 2019-03-14 18:11 GMT

ಹನೂರು,ಮಾ.14: ಮಲೆ ಮಹದೇಶ್ವರ ಬೆಟ್ಟದ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕಾಡಂಚಿನ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದ ವತಿಯಿಂದ ಮುತ್ತಿಗೆ ಹಾಕಿ ಧರಣಿ ನಡೆಸಲಾಯಿತು.

ಈ ವೇಳೆ ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ಮಹದೇಶ್ವರ ಬೆಟ್ಟದ ವ್ಯಾಪ್ತಿಯ ಕಾಡಂಚಿನ ಗ್ರಾಮಗಳು ಕನಿಷ್ಠ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು, ಈ ಬಗ್ಗೆ ಹಲವಾರು ಬಾರಿ ಹೋರಾಟ ಮಾಡಲಾಗಿದೆ ಹಾಗೂ ಮುಖ್ಯ ಮಂತ್ರಿಗಳು ಉಸ್ತುವಾರಿ ಸಚಿವರು ಹಲವಾರು ಬಾರಿ ಸಭೆಗಳನ್ನು ಮಾಡಿದ್ದಾರೆ. ಆದರೆ ಕೆಳ ಮಟ್ಟದ ಅಧಿಕಾರಿಗಳ ಬೇಜವಬ್ದಾರಿ ಕೆಲಸದಿಂದ ಜನರು ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ ಇನ್ನಾದರು ಆದಷ್ಟು ಬೇಗ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮಹದೇಶ್ವರ ಬೆಟ್ಟದ ಸುತ್ತಲಿನ ಕಾಡಂಚಿನ ಗ್ರಾಮಗಳಿಗೆ ರಸ್ತೆ ಸೌಲಭ್ಯ, ವೃದ್ಧಾಪ್ಯ ವೇತನವನ್ನು ಅಯಾ ಗ್ರಾಮಗಳಿಗೆ ತಲುಪುವ ವ್ಯವಸ್ಥೆ, ಇಂಡಿಗನತ್ತ, ತುಳಸಿಕೆರೆ, ದೊಡ್ಡಾಣೆ, ಮೆದಗಾಣೆ, ಗ್ರಾಮಗಳಿಗೆ ಹಾಕಿರುವ ಸೋಲಾರ್ ಹಾಳಾಗಿದ್ದು ಕೂಡಲೇ ದುರಸ್ತಿ ಪಡಿಸಬೇಕು. ನರೇಗಾ ಯೋಜನೆಯು ರೈತರಿಗೆ ನೇರವಾಗುವಂತೆ ಕಾರ್ಯ ರೂಪಿಸಬೇಕು. ಮಹದೇಶ್ವರ ಬೆಟ್ಟದ ಎಲ್ಲಾ ಕಡೆ ಬೋರ್ ವೆಲ್ ಕೊರೆಸಿ ನೀರು ಬರದಿದ್ದರೂ ತೊಂಬೆಗಳ್ನು ಕೂರಿಸಿ ಬಿಲ್ ಮಾಡಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ, ಇದರ ಬಗ್ಗೆ ಸರಿಯಾದ ತನಿಖೆ ನಡೆಸಬೇಕು ಮತ್ತು ಗ್ರಾಮ ಪಂಚಾಯತ್ ಅನುದಾನ ಬಿಡುಗಡೆ ಹಾಗೂ ಬಳಕೆ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆ ಸ್ಥಳಕ್ಕೆ ಪಿಡಿಒ ರಾಜೇಶ್, ಹಾಗೂ ಸರ್ಕಲ್ ಇನ್ಸ್‌ಪೆಕ್ಟರ್ ಗೋಪಾಲ್ ಕೃಷ್ಣ ರವರು ಆಗಮಿಸಿ ಚುನಾವಣೆ ನೀತಿ ಸಂಹಿತಿ ಜಾರಿಯಾಗಿರುವುದರಿಂದ ಪ್ರತಿಭಟನೆ ಮಾಡಬಾರದು, ನಿಮ್ಮ ಬೇಡಿಕೆಯ ಬಗ್ಗೆ ಸಂಬಂಧಪಟ್ಟ ಮೆಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಗಳನ್ನು ಬಗೆಹರಿಸಲು ಕೈಗೊಳ್ಳಲಾಗುವುದು ಹಾಗೂ ಮುಂದಿನ ದಿನಗಳಲ್ಲಿ ಸಭೆ ಕರೆಯಲಾಗುತ್ತದೆ ಎಂದು ಭರವಸೆ ನೀಡಿದರು. ನಂತರ ಪ್ರತಿಭಟನೆ ಕೈ ಬಿಡಲಾಯಿತು.

ಈ ಸಂದರ್ಭದಲ್ಲಿ ಚಂಗಡಿ ಕರಿಯಪ್ಪ, ಶಾಂತಕುಮಾರ್, ಮಾದಯ್ಯ, ನಾಗ ಹಾಗೂ ಮಹದೇಶ್ವರ ಬೆಟ್ಟ ವ್ಯಾಪ್ತಿಯ ರೈತರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News