ಮನೆಗೆ ನುಗ್ಗಿ ದರೋಡೆ ಪ್ರಕರಣ: ಇಬ್ಬರಿಗೆ 7 ವರ್ಷ ಕಾರಾಗೃಹ ಶಿಕ್ಷೆ

Update: 2019-03-14 18:34 GMT

ಶಿವಮೊಗ್ಗ, ಮಾ. 14: ಮನೆಗೆ ನುಗ್ಗಿ ದರೋಡೆ ನಡೆಸಿದ ಪ್ರಕರಣದಲ್ಲಿ ಇಬ್ಬರಿಗೆ ಶಿವಮೊಗ್ಗದ 3 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 7 ವರ್ಷ ಕಾರಾಗೃಹ ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿ ಗುರುವಾರ ತೀರ್ಪು ನೀಡಿದೆ.

ಶರಾವತಿ ನಗರದ ನಿವಾಸಿಗಳಾದ ನಸ್ರುಲ್ಲಾ ಯಾನೆ ನಸ್ರು (28) ಹಾಗೂ ಸೈಯದ್ ಶಫಿ ಯಾನೆ ಶಫಿ (26) ಶಿಕ್ಷೆಗೊಳಗಾದ ವ್ಯಕ್ತಿಗಳೆಂದು ಗುರುತಿಸಲಾಗಿದೆ. ನ್ಯಾಯಾಧೀಶರರಾದ ಎಂ. ಹರೀಶ್‍ರವರು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಜೆ. ಶಾಂತರಾಜುರವರು ವಾದ ಮಂಡಿಸಿದ್ದರು. 

ಘಟನೆ ಹಿನ್ನೆಲೆ: ಕಳೆದ ಕೆಲ ವರ್ಷಗಳ ಹಿಂದೆ ಜೆ.ಹೆಚ್.ಪಟೇಲ್ ಬಡಾವಣೆಯ ನಿವಾಸಿ ಸುಧಾ ಎಂಬವರು ಮನೆಯಲ್ಲಿ ಒಂಟಿಯಾಗಿರುವುದನ್ನು ಗಮನಿಸಿದ ನಸ್ರು ಹಾಗೂ ಶಫಿಯು, ತೆಂಗಿನಕಾಯಿ ಮಾರಾಟ ಮಾಡುವ ನೆಪದಲ್ಲಿ ಆಗಮಿಸಿದ್ದರು. ನಂತರ ಮನೆಯೊಳಗೆ ಪ್ರವೇಶಿಸಿ ಸುಧಾರವರಿಗೆ ಚಾಕುವಿನಿಂದ ಬೆದರಿಕೆ ಹಾಕಿದ್ದರು. ಮಾಂಗಲ್ಯ ಸರ, ಕಿವಿಯೊಲೆ, ನಗದು, ಮೊಬೈಲ್ ಅಪಹರಿಸಿ ಪರಾರಿಯಾಗಿದ್ದರು. ಈ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಒಟ್ಟಾರೆ ನಾಲ್ವರ ವಿರುದ್ದ ಪ್ರಕರಣ ದಾಖಲಾಗಿತ್ತು. 

ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದರು. ವಿಚಾರಣೆ ವೇಳೆ ನಸ್ರು ಹಾಗೂ ಶಫಿಯವರ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಕಾರಾಗೃಹ ವಾಸ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News