ಪ್ರಾಚೀನ ಸಾಹಿತ್ಯದಲ್ಲಿ ಧರ್ಮ ಸಮನ್ವಯ

Update: 2019-03-14 18:35 GMT

ಧರ್ಮ ಸಮನ್ವಯ ವರ್ತಮಾನದ ಅಗತ್ಯವಾಗಿದೆ. ಸಾಹಿತ್ಯ ಈ ನಿಟ್ಟಿನಲ್ಲಿ ಸಮಾಜಕ್ಕೆ ತನ್ನದೇ ಕೊಡುಗೆಯನ್ನು ನೀಡುತ್ತಾ ಬಂದಿದೆ. ಕನ್ನಡ ಸಾಹಿತ್ಯ ಪರಂಪರೆಗೆ ಧರ್ಮ ಸಮನ್ವಯದ ಸುದೀರ್ಘ ಇತಿಹಾಸವಿದೆ. ಸೌಹಾರ್ದ ಕನ್ನಡ ಸಾಹಿತ್ಯದ ವೌಲ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರೊ. ಜಿ. ಅಬ್ದುಲ್ ಬಶೀರ್ ಅವರ ‘ಧರ್ಮ ಸಮನ್ವಯ ಸಾಹಿತ್ಯ ವಿಮರ್ಶೆ’ ಒಂದು ಆಸಕ್ತಿದಾಯಕವಾದ ಅಧ್ಯಯನವಾಗಿದೆ. ಈ ಕೃತಿ ವಿಮರ್ಶಾ ಲೇಖನಗಳ ಸಂಕಲನ. ಇಲ್ಲಿ ಲೇಖಕರು ಆಧುನಿಕ ಸಾಹಿತ್ಯದ ಕುರಿತಂತೆ ಚರ್ಚಿಸುತ್ತಿಲ್ಲ. ಬದಲಿಗೆ ಪ್ರಾಚೀನ ಸಾಹಿತ್ಯಗಳು ಹೇಗೆ ಧರ್ಮ ಸಮನ್ವಯವನ್ನು ಎತ್ತಿ ಹಿಡಿಯುತ್ತಿತ್ತು ಎನ್ನುವುದನ್ನು ದಾಖಲಿಸುವ ಪ್ರಯತ್ನ ಮಾಡಿದ್ದ್ಜಾರೆ.
  ಸಹಜವಾಗಿಯೇ ಇಲ್ಲಿ ವಿವಿಧ ವಚನಕಾರರು ಆದ್ಯತೆಯನ್ನು ಪಡೆದಿದ್ದಾರೆ. ವಚನ ವಾಙ್ಮಯದ ಮುಂಗೋಳಿ ಕೊಂಡಗುಳಿ ಕೇಶೀರಾಜ, ವಿಶ್ವಮಾನವ ಬಂಧು ಬಸವಣ್ಣ, ಮೋಳಿಗೆ ಮಹಾದೇವಿ, ಜೇಡರ ದಾಸಿಮಯ್ಯ, ಘಟ್ಟಿವಾಳಯ್ಯ, ದಸರಯ್ಯ, ಚಂದಿಮರಸ, ಕೊಟ್ಟಣದ ಸೋಮಮ್ಮ, ಅಕ್ಕಮ್ಮ ಹೀಗೆ ಹಲವು ವಚನಕಾರರ ಸಾಹಿತ್ಯವನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಇವರಲ್ಲದೆ, ಬಾಲ ಲೀಲಾ ಮಹಾಂತ ಶಿವಯೋಗಿಗಳು, ಸೂಫಿಗಳು, ಶಿವಶರಣರು, ಹರಿದಾಸ ಬಡೇಸಾಹೇಬರು ಸಹಿತ ಇತಿಹಾಸದಲ್ಲಿ ಬರುವ ಹಲವು ಮಹನೀಯರು ಹೇಗೆ ಧರ್ಮಸಮನ್ವಯಕ್ಕೆ ತಮ್ಮ ಕೊಡುಗೆಗಳನ್ನು ನೀಡಿದ್ದಾರೆ ಎನ್ನುವುದನ್ನು ಈ ಕೃತಿ ಹೇಳುತ್ತದೆ. ಪ್ರವಾದಿ ಮುಹಮ್ಮದರ ಸಂದೇಶಗಳ ಕುರಿತಂತೆಯೂ ಲೇಖನವಿದೆ. ಇಸ್ಲಾಮ್ ಹೇಗೆ ವಿಶ್ವ ಬಂಧುತ್ವವನ್ನು ಸಾರುತ್ತದೆ ಎನ್ನುವುದನ್ನು ಲೇಖಕರು ವಿಶ್ಲೇಷಿಸುತ್ತಾರೆ. ಇಸ್ಲಾಮ್ ಧರ್ಮದಲ್ಲಿ ಅಹಿಂಸೆಯ ಪಾತ್ರವನ್ನು ಅವರು ವಿವರಿಸುತ್ತಾರೆ. ಹೀಗೆ ಮನಸುಗಳನ್ನು ಬೆಸೆಯುವ ಒಟ್ಟು 25 ಲೇಖನಗಳು ಈ ಕೃತಿಯಲ್ಲಿವೆ. ಕಟ್ಟ ಕಡೆಯ ಲೇಖನ ಸರ್ವಜ್ಞನ ಕುರಿತಂತಿದೆ. ಸರ್ವಜ್ಞನ ಬಗ್ಗೆ ಬರೆಯುತ್ತಾ ವರ್ತಮಾನದ ಕೆಲವು ಜ್ವಲಂತ ಸಮಸ್ಯೆಗಳನ್ನೂ ಲೇಖಕರು ಚರ್ಚಿಸುತ್ತಾರೆ.
ಇಲ್ಲಿರುವ ಲೇಖನಗಳು ಬರೇ ಧರ್ಮ ಸಮನ್ವಯಕ್ಕಷ್ಟೇ ಅಲ್ಲದೆ, ಸಾಹಿತ್ಯದ ಬೇರೆ ನೆಲೆಗಳನ್ನೂ ಚರ್ಚಿಸುತ್ತವೆ. ವಚನ ಸಾಲುಗಳ ವಿಶ್ಲೇಷಣೆಗಳನ್ನು ಮಾಡುತ್ತವೆ. ವರ್ತಮಾನಕ್ಕೆ ಅದು ಹೇಗೆ ಅನ್ವಯವಾಗುತ್ತದೆ ಎನ್ನುವುದನ್ನೂ ಹೇಳುತ್ತದೆ. 280 ಪುಟಗಳ ಈ ಕೃತಿಯ ಮುಖಬೆಲೆ 190. ಕನ್ನಡ ಸಾಹಿತ್ಯ ಪರಿಷತ್ ಈ ಕೃತಿಯನ್ನು ಹೊರತಂದಿದೆ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News