ಅಪಘಾತಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಶಿವಮೊಗ್ಗ ಜಿಲ್ಲಾಡಳಿತದ ನಿರ್ಧಾರ

Update: 2019-03-14 18:43 GMT

ಶಿವಮೊಗ್ಗ, ಮಾ. 14 : ಜಿಲ್ಲೆಯ ಕೆಲವು ಮುಖ್ಯ ರಸ್ತೆಗಳಲ್ಲಿ ಆಗುತ್ತಿರುವ ಅಪಘಾತಗಳ ನಿಯಂತ್ರಣಕ್ಕೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

ಗುರುವಾರ ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೇಖರ್ ಹೆಚ್.ತೆಕ್ಕಣ್ಣನವರ್ ಅಧ್ಯಕ್ಷತೆಯಲ್ಲಿ ರಸ್ತೆ ಸುರಕ್ಷತೆಯ ಮಟ್ಟವನ್ನು ಹೆಚ್ಚಿಸಲು ಹಾಗೂ ಅಪಘಾತಗಳ ನಿಯಂತ್ರಣಕ್ಕಾಗಿ ತಯಾರಿಸಿದ ಕ್ರಿಯಾಯೋಜನೆಯ ಚರ್ಚಾ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. 

ಶಿವಮೊಗ್ಗ ಮತ್ತು ಸಾಗರ ರಸ್ತೆ ಮಾರ್ಗದ ಆಯ್ದ ಸ್ಥಳಗಳಲ್ಲಿ ತೀವ್ರಗತಿಯ ಆಕಸ್ಮಿಕ ಅಪಘಾತಗಳು ಆಗಾಗ್ಗೆ ಸಂಭವಿಸುತ್ತಿದ್ದು, ಸಾವು-ನೋವು ಸಂಭವಿಸುತ್ತಲೇ ಇದೆ. ಅದನ್ನು ನಿಯಂತ್ರಿಸುವ ಸಲುವಾಗಿ ಕೈಗೊಳ್ಳಬಹುದಾದ ಪರ್ಯಾಯ ಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಸದರಿ ಮಾರ್ಗವು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಗೊಳಪಡುವುದರಿಂದ ನಿಯಮಾನುಸಾರ ವೇಗನಿಯಂತ್ರಕ ಉಬ್ಬುಗಳನ್ನು ನಿರ್ಮಿಸುವುದು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಅಲ್ಲಲ್ಲಿ ಬ್ಯಾರಿಕೇಡ್‍ಗಳನ್ನು ಕೊಂಡುಕೊಳ್ಳಲು ಸಾರಿಗೆ ಕ್ಷೇಮಾಭಿವೃದಿ ಮತ್ತು ರಸ್ತೆ ಸುರಕ್ಷತಾ ಯೋಜನೆಯಡಿಯಲ್ಲಿ ಜಿಲ್ಲಾಧಿಕಾರಿಗಳು ತಕ್ಷಣದ ಕ್ರಮವಾಗಿ 3 ಲಕ್ಷ ರೂ.ಗಳನ್ನು ಬಿಡುಗಡೆಗೊಳಿಸಿರುವುದಾಗಿ ತಿಳಿಸಿದರು. 

ಸುರಕ್ಷತೆ, ಹೆಲ್ಮೆಟ್, ಸೀಟ್‍ ಬೆಲ್ಟ್ ಮುಂತಾದವುಗಳ ಕುರಿತು ಮಾಹಿತಿ ನೀಡುವುದರ ಜೊತೆಗೆ ಸುರಕ್ಷಿತ ವಾಹನ ಚಾಲನೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಇಂದಿನ ತುರ್ತು ಕೆಲಸವಾಗಬೇಕಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯು ಸದಾ ಸಾರ್ವಜನಿಕರೊಂದಿಗೆ ಇರಲಿದೆ ಎಂದವರು ನುಡಿದರು.

ಅಪಘಾತಗಳ ನಿಯಂತ್ರಣ ಕ್ರಮವಾಗಿ ಸಾರಿಗೆ ಇಲಾಖೆಯೊಂದಿಗೆ ಸಂಬಂಧಿತ ಇಲಾಖಾ ಅಧಿಕಾರಿಗಳು ಸಮನ್ವಯತೆ ಸಾಧಿಸಿಕೊಂಡು ಕಾರ್ಯಕ್ಕೆ ಮುಂದಾಗಬೇಕು. ನೆರೆಯ ರಾಜ್ಯ ತಮಿಳುನಾಡಿನಲ್ಲಿ ರಸ್ತೆ ಸುರಕ್ಷತಾ ಕ್ರಮಗಳ ಕುರಿತು ಜನರಲ್ಲಿ ನಿರಂತರ ಅರಿವು ಮೂಡಿಸುವ ಕಾರ್ಯಕ್ರಮಗಳ ಪರಿಣಾಮವಾಗಿ ಅಪಘಾತಗಳ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ. ಇದನ್ನು ರಾಜ್ಯದಲ್ಲಿಯೂ ಅನುಸರಿಸುವಂತಾಗಬೇಕು. ಸಾರಿಗೆ ನಿಯಮ ಉಲ್ಲಂಘಿಸುವ ಸುಮಾರು 70,000 ವಾಹನ ಚಾಲಕರಿಗೆ ನೋಟೀಸ್ ಜಾರಿಗೊಳಿಸಲಾಗಿದೆ. ಈಗಾಗಲೇ 20,000 ವಾಹನ ಸವಾರರು ದಂಡವನ್ನು ಕಟ್ಟಿದ್ದಾರೆ ಎಂದವರು ನುಡಿದರು.

ನಗರದ ಲಕ್ಷ್ಮೀ ಚಿತ್ರಮಂದಿರ, ಶಿವಪ್ಪನಾಯಕ ಮಾರುಕಟ್ಟೆ, ತರಕಾರಿ ಮಾರುಕಟ್ಟೆ, ಖಾಸಗಿ ಬಸ್ಟ್ಯಾಂಡ್, ಅಮೀರ್ ಅಹ್ಮದ್ ವರ್ತುಲ, ಮಹಾವೀರ ಮುಂತಾದ ಕಡೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿರುವುದರಿಂದ ಸಾರ್ವಜನಿಕರು ಹಾಗೂ ಪಾದಚಾರಿಗಳು ಸುಗಮವಾಗಿ ಸಂಚರಿಸುವುದು ಕಷ್ಟಕರವಾಗಿದೆ. ಅಲ್ಲದೇ ಈ ಭಾಗದಲ್ಲಿ ವಾಹನಗಳ ನಿಲುಗಡೆಗೂ ಪರ್ಯಾಯ ಕ್ರಮದ ಅಗತ್ಯವಿದೆ ಎಂದ ಅವರು ಈ ಕುರಿತು ವಿಸ್ತೃತವಾಗಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಾಗರ ರಸ್ತೆಯಲ್ಲಿ ಸೆನ್ಸಾರ್ ಗಳನ್ನು ಅಳವಡಿಸಿ ವೇಗನಿಯಂತ್ರಣ ಕ್ರಮಕೈಗೊಳ್ಳಲು ನಗರದ ಖಾಸಗಿ ಸಂಸ್ಥೆ ಮುಂದೆ ಬಂದಿದ್ದು, 18 ಲಕ್ಷ ರೂ.ಗಳ ಪ್ರಸ್ತಾವನೆಯನ್ನು ಸಲ್ಲಿಸಿದೆ. ಈ ಕ್ರಿಯಾಯೋಜನೆಯ ಅಂಗೀಕಾರಕ್ಕಾಗಿ ಸಾರಿಗೆ ಇಲಾಖೆಯ ಕೇಂದ್ರಕಚೇರಿಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಕರಡು ಅನುಮೋದನೆಯ ನಂತರ ಕ್ರಮ ಕೈಗೊಳ್ಳಲಾಗುವುದು ಎಂದವರು ನುಡಿದರು.

ನಗರದಲ್ಲಿ ಸುಗಮ ಸಂಚಾರ ವ್ಯವಸ್ಥೆ ಕುರಿತು ಅಗತ್ಯ ಕ್ರಮ ಕೈಗೊಳ್ಳಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸೂಕ್ತ ಸಲಹೆ-ಮಾರ್ಗದರ್ಶನ ನೀಡಲು ಸೂಚಿಸಿದ ಅವರು, ತಮ್ಮ ಸಲಹೆಗಳ ಆಧಾರದ ಮೇಲೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು. 

ಸಭೆಯಲ್ಲಿ ಪ್ರಾದೇಶಿಕ ಸಾರಿಗೆ ಆಯುಕ್ತ ಶಿವರಾಜ್ ಬಿ.ಪಾಟೀಲ್, ನಗರ ಸಾರಿಗೆ ಬಸ್‍ಮಾಲೀಕರ ಸಂಘದ ಗೌರವಾಧ್ಯಕ್ಷ ಪಿ.ರುದ್ರೇಶ್, ಕೈಗಾರಿಕೋದ್ಯಮಿ ವಾಸುದೇವ, ಎಸ್.ಆರ್.ಗೋಪಾಲ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News