ಸಹೋದ್ಯೋಗಿ ಮೇಲೆ ಅತ್ಯಾಚಾರ: ಸೇನೆಯ ಮೇಜರ್ ವಿರುದ್ಧ ಪ್ರಕರಣ

Update: 2019-03-15 04:01 GMT

ಬೆಂಗಳೂರು, ಮಾ. 15: "ಸಹೋದ್ಯೋಗಿ ಮೇಜರ್ ಅಮಿತ್ ಚೌಧರಿ ನನ್ನನ್ನು ಕಾರಿನಲ್ಲಿ ಕರೆದೊಯ್ದು ಅತ್ಯಾಚಾರ ನಡೆಸಿದ್ದಾರೆ" ಎಂದು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವ ಮಹಿಳಾ ಸಿಬ್ಬಂದಿಯೊಬ್ಬರು ನೀಡಿದ ದೂರಿನ ಹಿನ್ನೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪೂರ್ವ ಬೆಂಗಳೂರಿನ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಕಾರು ನಿಲ್ಲಿಸಿ ಕಾರಿನಲ್ಲೇ ಈ ಕೃತ್ಯ ಎಸಗಿರುವುದಾಗಿ ಆಪಾದಿಸಿದ್ದಾರೆ.

ಮಹಿಳೆ ಫೆ. 4ರಂದು ಹಿರಿಯ ಸಹೋದ್ಯೋಗಿಯೊಬ್ಬರು ಏರ್ಪಡಿಸಿದ್ದ ಔತಣಕೂಟದಲ್ಲಿ ಭಾಗವಹಿಸಿ ಹಿಂದಿರುಗುವ ಸಂದರ್ಭ, ಆರೋಪಿ ದೂರವಾಣಿ ಕರೆ ಮಾಡಿ, ಕಾರಿನಲ್ಲಿ ಸುತ್ತಾಡಿಕೊಂಡು ಬರಲು ಆಹ್ವಾನಿಸಿದ್ದು, ಇದಕ್ಕೆ ಒಪ್ಪಿ ಕಾರಿನಲ್ಲಿ ಹೋಗಿದ್ದೆ. ಸ್ವಲ್ಪ ದೂರ ಪ್ರಯಾಣಿಸಿ ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿ ಇಬ್ಬರೂ ಮದ್ಯ ಸೇವನೆ ಮಾಡಿದೆವು. ಬಳಿಕ ಮೇಜರ್ ಚೌಧರಿ ಅಸಭ್ಯವಾಗಿ ವರ್ತಿಸಲು ಆರಂಭಿಸಿ, ಅಸಹ್ಯವಾಗಿ ಸ್ಪರ್ಶಿಸಿದ. ಆತನನ್ನು ತಳ್ಳಿದಾಗ ಜೋರಾಗಿ ಹೊಡೆದ. ಬಳಿಕ ಮನೆಗೆ ಬಿಡುವಂತೆ ಆತನನ್ನು ಕೋರಿದೆ. ಕಾರನ್ನು ಸ್ವಲ್ಪ ದೂರ ಚಲಾಯಿಸಿಕೊಂಡು ಹೋಗಿ ಕಾರು ನಿಲ್ಲಿಸಿ, ನನ್ನನ್ನು ಹಿಂದಿನ ಸೀಟಿಗೆ ತಳ್ಳಿ, ಅತ್ಯಾಚಾರ ಎಸಗಿದ. ಬಳಿಕ ಮನೆ ಬಳಿ ಬಿಟ್ಟು ಹೋಗಿದ್ದಾನೆ" ಎಂದು ಮಹಿಳೆ ಆಪಾದಿಸಿದ್ದಾರೆ.

ಈ ಆಘಾತದಿಂದ ಚೇತರಿಸಿಕೊಳ್ಳಲು ಎರಡು ದಿನ ಬೇಕಾಯಿತು. ಬಳಿಕ ಪೋಷಕರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾಗಿ ಮಹಿಳೆ ಹೇಳಿದ್ದಾರೆ. ಮಹಿಳೆಯ ಪೋಷಕರು ಫೆ. 8ರಂದು ಬೆಂಗಳೂರಿಗೆ ಧಾವಿಸಿದರು. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಲು ನಿರ್ಧರಿಸಿದರು. ಪೋಷಕರ ಜತೆ ಮೇಲಧಿಕಾರಿಗಳನ್ನು ಭೇಟಿ ಮಾಡಿ ಮೌಖಿಕ ದೂರು ಸಲ್ಲಿಸಿದರು. ಬಳಿಕ ಕಮಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದರು. ವಿಚಾರ ತಿಳಿದ ನಗರ ಪೊಲೀಸರು ಆಸ್ಪತ್ರೆಯಲ್ಲಿ ಮಹಿಳೆಯ ಹೇಳಿಕೆ ಪಡೆಯಲು ಮುಂದಾದರು. ಆದರೆ ತನ್ನ ಮೇಲಧಿಕಾರಿಗಳಿಗೆ ದೂರು ನೀಡುವುದಾಗಿ ಹೇಳಿದ ಮಹಿಳೆ ಹೇಳಿಕೆ ನೀಡಲು ನಿರಾಕರಿಸಿದರು.

ಬಳಿಕ ಫೆ.15ರಂದು ವಿವೇಕನಗರ ಠಾಣೆಗೆ ತೆರಳಿ ಎಫ್‌ಐಆರ್ ದಾಖಲಿಸಿದರು. ಚೌಧರಿಯನ್ನು ಪೊಲೀಸರು ಬಂಧಿಸಿದ್ದು, ಮಾ. 8ರಿಂದ 21ರವರೆಗೆ ಆರೋಪಿ ಮಧ್ಯಂತರ ಜಾಮೀನು ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News