ನ್ಯೂಝಿಲೆಂಡ್‌ನ ಎರಡು ಮಸೀದಿ ಮೇಲೆ ತೀವ್ರ ಗುಂಡಿನ ದಾಳಿ: ಸಾವಿನ ಸಂಖ್ಯೆ 49ಕ್ಕೇರಿಕೆ

Update: 2019-03-15 12:11 GMT

ಕ್ರೈಸ್ಟ್‌ಚರ್ಚ್, ಮಾ.15: ನ್ಯೂಝಿಲೆಂಡ್‌ನಲ್ಲಿ ಶುಕ್ರವಾರ ಮಧಾಹ್ನ ಎರಡು ಮಸೀದಿಯಲ್ಲಿ ಪ್ರಾರ್ಥನಾ ನಿರತರ ಮೇಲೆ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ 49 ಮಂದಿ ಸಾವನ್ನಪ್ಪಿದ್ದು, ಮಕ್ಕಳೂ ಸಹಿತ 40ಕ್ಕೂ ಅಧಿಕ ಜನರಿಗೆ ಗಂಭೀರ ಹಾಗೂ ಸಣ್ಣಪುಟ್ಟ ಗಾಯವಾಗಿದೆ.

‘‘ಈ ದಿನ ದೇಶದ ಪಾಲಿಗೆ ಅತ್ಯಂತ ಕರಾಳ ದಿನ. ಒಂದಂತು ಸ್ಪಷ್ಟ. ಇದೊಂದು ಭಯೋತ್ಪಾದಕ ದಾಳಿಯಾಗಿದೆ ಎಂದು ಹೇಳಬಹುದು. ನಮಗೆ ತಿಳಿದಿರುವ ಪ್ರಕಾರ ಇದೊಂದು ಪೂರ್ವ ನಿಯೋಜಿತ ಕೃತ್ಯವಾಗಿ ಗೋಚರಿಸುತ್ತಿದೆ’’ ಎಂದು ನ್ಯೂಝಿಲೆಂಡ್ ಪ್ರಧಾನಮಂತ್ರಿ ಜಸಿಂಡಾ ಆರ್ಡರ್ನ್ ಹೇಳಿದ್ದಾರೆ.

 ಸೆಂಟ್ರಲ್ ಕ್ರೈಸ್ಟ್‌ಚರ್ಚ್ ನ ಪ್ರಮುಖ ನೂರ್ ಮಸೀದಿಯಲ್ಲಿ ನಡೆದ ಶೂಟೌಟ್‌ನಲ್ಲಿ 41 ಮಂದಿ, ಉಪ ನಗರ ಲಿನ್‌ವುಡ್ ಮಸೀದಿಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ. ಇನ್ನೊಬ್ಬರು ಎಲ್ಲಿ ಮೃತಪಟ್ಟಿದ್ದಾರೆಂದು ಸ್ಪಷ್ಟವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

‘‘ನ್ಯೂಝಿಲೆಂಡ್‌ನ ಎರಡು ಮಸೀದಿಗಳ ಮೇಲೆ ಗುಂಡಿನ ದಾಳಿ ನಡೆಸಿ ಹಲವು ಜನರನ್ನು ಬಲಿ ಪಡೆದ ದಾಳಿಕೋರರ ಪೈಕಿ ಓರ್ವ ಆಸ್ಟ್ರೇಲಿಯದ ಪೌರತ್ವ ಹೊಂದಿದ್ದಾನೆ. ನ್ಯೂಝಿಲೆಂಡ್ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದು ತೀವ್ರ ತನಿಖೆ ನಡೆಸುತ್ತಿದ್ದಾರೆ’’ ಎಂದು ಆಸ್ಟ್ರೇಲಿಯದ ಪ್ರಧಾನಮಂತ್ರಿ ಸ್ಕಾಟ್ ಮೊರಿಸನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News