ರಾಹುಲ್ ಗಾಂಧಿ ರಾಜ್ಯದಿಂದಲೇ ಸ್ಪರ್ಧೆ ಮಾಡಲಿ: ದಿನೇಶ್ ಗುಂಡೂರಾವ್

Update: 2019-03-15 13:01 GMT

ಚಾಮರಾಜನಗರ,ಮಾ.15: ದಕ್ಷಿಣ ಭಾರತದಲ್ಲಿ ರಾಹುಲ್ ಗಾಂಧಿ ಸ್ಪರ್ಧೆ ಮಾಡಲು ಇಚ್ಚಿಸಿದರೆ ಅವರನ್ನು ಕರ್ನಾಟಕದಲ್ಲೇ ಸ್ಪರ್ಧೆ ಮಾಡುವಂತೆ ಆಹ್ವಾನಿಸುತ್ತೇವೆ. ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಸ್ಪರ್ಧೆ ಮಾಡಿದ್ದ ಕರ್ನಾಟಕದಿಂದ ರಾಹುಲ್ ಗಾಂಧಿ ಸ್ಪರ್ಧೆ ಮಾಡಲಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.

ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ಕಾಂಗ್ರೆಸ್ ಪರಿವರ್ತನಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶ್ರೀಮತಿ ಇಂದಿರಾ ಗಾಂಧಿಯರವರು ಕರ್ನಾಟಕದಿಂದ ಸ್ಪರ್ಧೆ ಮಾಡಿ ದೇಶದ ಮೊದಲ ಮಹಿಳಾ ಪ್ರಧಾನಿಯಾದರು. ಇಲ್ಲಿಂದಲೇ ಸೋನಿಯಾ ಗಾಂಧಿ ಸ್ಪರ್ಧೆ ಮಾಡಿದ್ದರು. ಈಗ ರಾಹುಲ್ ಗಾಂಧಿಯವರು ಸಹ ದಕ್ಷಿಣ ಭಾರತದಿಂದ ಸ್ಪರ್ಧೆ ಮಾಡುವುದಾದರೆ ಕರ್ನಾಟಕದಿಂದಲೇ ಸ್ಪರ್ಧೆ ಮಾಡಲು ಆಹ್ವಾನಿಸುತ್ತೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ದೇಶದಲ್ಲಿ ರಕ್ಷಣೆಯ ಹೊಣೆ ಹೊತ್ತಿರುವುದು ಬಿಜೆಪಿಯವರು ಮಾತ್ರವೇ? ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಬಾಂಗ್ಲಾದೇಶದ ದಾಳಿಯನ್ನು ತಪ್ಪಿಸಿದ್ದು ನರೇಂದ್ರ ಮೋದಿಗೆ ತಿಳಿದಿಲ್ಲವೇ ಎಂದು ಪ್ರಶ್ನಿಸಿದರು. ದೇಶದ ಭದ್ರತೆ ಹಾಗೂ ರಕ್ಷಣೆಯ ವಿಚಾರವಾಗಿ ಯಾರೂ ರಾಜಕಾರಣ ಮಾಡಬಾರದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಈಶ್ವರ್ ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ, ಮಾಜಿ ಸಚಿವ ಡಾ. ಹೆಚ್.ಸಿ ಮಹದೇವಪ್ಪ, ಜಿಲ್ಲೆಯ ಶಾಸಕರು, ಚುನಾಯಿತ ಜನಪ್ರತಿನಿಧಿಗಳು ಸೇರಿದಂತೆ ಹಲವಾರು ಗಣ್ಯರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News