ನ್ಯಾಯಾಂಗ ನಿಂದನೆ ಪ್ರಕರಣ: ಪತ್ರಿಕಾ ಸಂಪಾದಕಿ, ಪ್ರಕಾಶಕಿ ವಿರುದ್ಧದ ಹೈಕೋರ್ಟ್ ತೀರ್ಪಿಗೆ ಸುಪ್ರೀಂ ತಡೆ

Update: 2019-03-15 13:38 GMT

ಹೊಸದಿಲ್ಲಿ,ಮಾ.15: ನ್ಯಾಯಾಂಗ ನಿಂದನೆ ಪ್ರಕರಣವೊಂದರಲ್ಲಿ ದಿ ಶಿಲ್ಲಾಂಗ್ ಟೈಮ್ಸ್‌ನ ಸಂಪಾದಕಿ ಪ್ಯಾಟ್ರಿಷಿಯಾ ಮುಖಿಮ್ ಮತ್ತು ಪ್ರಕಾಶಕಿ ಶೋಭಾ ಚೌಧುರಿ ಅವರನ್ನು ದೋಷಿಗಳೆಂದು ಘೋಷಿಸಿರುವ ಮೇಘಾಲಯ ಉಚ್ಚ ನ್ಯಾಯಾಲಯದ ತೀರ್ಪಿಗೆ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ತಡೆಯಾಜ್ಞೆಯನ್ನು ನೀಡಿದೆ.

ಮುಖಿಮ್ ಮತ್ತು ಚೌಧುರಿ ಅವರಿಗೆ ತಲಾ ಎರಡು ಲ.ರೂ.ಗಳ ದಂಡವನ್ನೂ ವಿಧಿಸಿದ್ದ ಉಚ್ಚ ನ್ಯಾಯಾಲಯವು, ದಂಡವನ್ನು ಪಾವತಿಸಲು ವಿಫಲಗೊಂಡರೆ ಆರು ತಿಂಗಳ ಸಾದಾ ಜೈಲುಶಿಕ್ಷೆಯನ್ನು ಅನುಭವಿಸಬೇಕು ಮತ್ತು ಪತ್ರಿಕೆಯನ್ನು ನಿಷೇಧಿಸಲಾಗುವುದು ಎಂದು ಆದೇಶಿಸಿತ್ತು.

ಪ್ರಕರಣವು ನಿವೃತ್ತ ನ್ಯಾಯಾಧೀಶರು ಮತ್ತು ಅವರ ಕುಟುಂಬಗಳಿಗೆ ಒದಗಿಸಲಾಗುತ್ತಿರುವ ಸೌಲಭ್ಯಗಳ ಕುರಿತು ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದ ಲೇಖನವೊಂದಕ್ಕೆ ಸಂಬಂಧಿಸಿದೆ.

ಮುಖಿಮ್ ಮತ್ತು ಚೌಧುರಿ ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿದಂತೆ ಮು.ನ್ಯಾ.ರಂಜನ ಗೊಗೊಯಿ ಅವರ ಪೀಠವು ಉಚ್ಚ ನ್ಯಾಯಾಲಯದ ರಿಜಿಸ್ಟ್ರಾರ್‌ಗೆ ನೋಟಿಸನ್ನೂ ಹೊರಡಿಸಿತು.

ಉಚ್ಚ ನ್ಯಾಯಾಲಯವು ಮಾ.8ರಂದು ನ್ಯಾಯಾಂಗ ನಿಂದನೆ ಪ್ರಕರಣದ ತೀರ್ಪನ್ನು ಪ್ರಕಟಿಸಿದ ಸಂದರ್ಭ ಕಲಾಪಗಳು ಮುಗಿಯುವವರೆಗೆ ನ್ಯಾಯಾಲಯ ಕೊಠಡಿಯ ಮೂಲೆಯಲ್ಲಿ ಕುಳಿತುಕೊಂಡು ಶಿಕ್ಷೆಯನ್ನು ಅನುಭವಿಸುವಂತೆ ಮುಖಿಮ್ ಮತ್ತು ಚೌಧುರಿ ಅವರಿಗೆ ಸೂಚಿಸಿತ್ತು.

ಉಚ್ಚ ನ್ಯಾಯಾಲಯದ ತೀರ್ಪಿಗೆ ಸರ್ವೋಚ್ಚ ನ್ಯಾಯಾಲಯವು ತಡೆಯಾಜ್ಞೆಯನ್ನು ವಿಧಿಸಿದ ಬಳಿಕ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಮುಖಿಮ್,ನ್ಯಾಯಾಂಗವು ಪತ್ರಿಕಾ ಸ್ವಾತಂತ್ರವನ್ನು ರಕ್ಷಿಸುತ್ತದೆ ಎಂಬ ಪೂರ್ಣ ವಿಶ್ವಾಸ ತನಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News