ಸಾವಿರಾರು ಕೋಟಿ ಅವ್ಯವಹಾರ ಆರೋಪ: ಸಚಿವ ರೇವಣ್ಣ ರಾಜೀನಾಮೆಗೆ ಆಗ್ರಹ

Update: 2019-03-15 16:06 GMT

ಬೆಂಗಳೂರು, ಮಾ.15: ಲೋಕೋಪಯೋಗಿ ಇಲಾಖೆ ಹಾಸನ ಜಿಲ್ಲೆಯ ಅಭಿವೃದ್ಧಿಗಾಗಿ ಬಿಡುಗಡೆ ಮಾಡಿದ್ದ 4,500 ಕೋಟಿಯಲ್ಲಿ ಅವ್ಯವಹಾರ ನಡೆಸಿದ್ದು, ಅದಕ್ಕೆ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಪರೋಕ್ಷವಾಗಿ ಭಾಗಿಯಾಗಿರುವುದರಿಂದ ರಾಜೀನಾಮೆ ನೀಡಲಿ ಎಂದು ಹಾಸನ ಜಿಲ್ಲೆಯ ಮಾಜಿ ಕೆಡಿಪಿ ಸದಸ್ಯ ಜಿ.ದೇವರಾಜೇಗೌಡ ಆಗ್ರಹಿಸಿದ್ದಾರೆ.

ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನ ಜಿಲ್ಲೆಯ ಅಭಿವೃದ್ಧಿಗಾಗಿ ಲೋಕೋಪಯೋಗಿ ಇಲಾಖೆಗೆ 4,500 ಕೋಟಿ ರೂ.ಗಳನ್ನು 2017-18 ರಿಂದ 2018-19 ರವರೆಗೆ ಅನುದಾನ ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಕಳಪೆ ಕಾಮಗಾರಿ ಕೆಲವೆಡೆಯಾದರೆ, ಹಲವೆಡೆ ಕಾಮಗಾರಿಗಳನ್ನೇ ನಡೆಸದೆ 1,137 ಕೋಟಿ ರೂ.ಗಳನ್ನು ಪ್ರಭಾವಿ ಹಾಗೂ ಅವರ ಆಪ್ತವಲಯದ ಗುತ್ತಿಗೆದಾರರಿಗೆ ಬಿಲ್ ಪಾವತಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಶ್ರವಣಬೆಳಗೊಳದ ಗೊಮ್ಮಟೇಶ್ವರನ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ 650 ಕೋಟಿ ರೂ.ಗಳನ್ನು ರಸ್ತೆ ಅಭಿವದ್ಧಿಗಾಗಿ ನೀಡಲಾಗಿತ್ತು. ಆಗ ಮಾಡಿರುವ ಕಾಮಗಾರಿಗಳನ್ನೇ ಬೇರೆ ಹೆಸರು ನೀಡಿ ಗುತ್ತಿಗೆದಾರರ ಮೂಲಕ ಹಣ ಲಪಟಾಯಿಸಿದ್ದಾರೆ. ಅಲ್ಲದೆ, ಬಾಗಲಕೋಟೆ- ಬಿಳಿಗಿರಿರಂಗನ ಬೆಟ್ಟ ರಸ್ತೆ ರಾಜ್ಯ ಹೆದ್ದಾರಿ ಕಾಮಗಾರಿಯನ್ನು 2018ರಲ್ಲಿ ಪೂರ್ಣಗೊಳಿಸಿ ಪುನಃ 2019ರಲ್ಲಿ ರಾಷ್ಟ್ರೀಯ ಹೆದ್ದಾರಿ ವಿಭಾಗದಿಂದ 385 ಕೋಟಿ ರೂ. ವೆಚ್ಚದಲ್ಲಿ ಚಿಕ್ಕಮಗಳೂರು- ಬಿಳಿಕೆರೆ ರಸ್ತೆ ಅಗಲೀಕರಣ ಕಾಮಗಾರಿಯಲ್ಲಿ ಅದೇ ಕೆಲಸವನ್ನು ಪೂರ್ಣ ಮಾಡಿ ಬಿಲ್ ಮಾಡಲಾಗಿದೆ ಎಂದು ತಿಳಿಸಿದರು.

ಪರೋಕ್ಷವಾಗಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣರೇ ಬಿಲ್ ಮಾಡಿಕೊಂಡಿದ್ದು, ಕಾಮಗಾರಿಗೆ ನೀಡಿರುವ ಬಿಲ್ ಮೊತ್ತವನ್ನು ಸಿಬಿಐ ತನಿಖೆಗೆ ನೀಡಬೇಕು ಹಾಗೂ ತನಿಖೆ ಪೂರ್ಣಗೊಳ್ಳುವವರೆಗೂ ಮುಖ್ಯಮಂತ್ರಿ ಮತ್ತು ಲೋಕೋಪಯೋಗಿ ಸಚಿವ ತಮ್ಮ ಪದವಿಗೆ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಲಿ.

-ಜಿ.ದೇವರಾಜೇಗೌಡ, ಮಾಜಿ ಕೆಡಿಪಿ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News