ಬಿಎಸ್‌ವೈ ನಿವಾಸಕ್ಕೆ ಮಾಜಿ ಸಚಿವ ಎ.ಮಂಜು ಭೇಟಿ: ಹಾಸನ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧೆ?

Update: 2019-03-15 16:22 GMT

ಬೆಂಗಳೂರು, ಮಾ.15: ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಹಾಸನದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬಯಸಿದ್ದ ಮಾಜಿ ಸಚಿವ ಎ.ಮಂಜು, ಇದೀಗ ಕಮಲ ಪಾಳಯಕ್ಕೆ ಜಿಗಿಯಲು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಶುಕ್ರವಾರ ನಗರದ ಡಾಲರ್ಸ್‌ ಕಾಲನಿಯಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದ ಎ.ಮಂಜು, ಅರ್ಧ ಗಂಟೆಗೂ ಹೆಚ್ಚು ಕಾಲ ರಾಜಕೀಯ ವಿಚಾರಗಳ ಕುರಿತು ಚರ್ಚೆ ನಡೆಸಿದರು.

ನಾನು ಕಾರ್ಯಕರ್ತರ ಸಭೆ ಕರೆದಿದ್ದೇನೆ. ಅವರು ಯಾವ ನಿರ್ಣಯ ತೆಗೆದುಕೊಳ್ಳುತ್ತಾರೆ ಎಂಬುದನ್ನು ನೋಡಿ, ನಾನು ಮುಂದಿನ ತೀರ್ಮಾನ ಪ್ರಕಟಿಸುತ್ತೇನೆ ಎಂದ ಎ.ಮಂಜು, ಬಿಜೆಪಿ ಸೇರುವ ಬಗ್ಗೆ ಕೇಳಿದ ಪ್ರಶ್ನೆಗೆ ಯಡಿಯೂರಪ್ಪ ಜೊತೆ ಮಾತನಾಡಿದ್ದೇನೆ ಎಂದಷ್ಟೇ ಹೇಳಿದರು.

ರಾಜಕೀಯವಾಗಿ ಈವರೆಗೆ ನಮ್ಮನ್ನು ಸಾಕಿರುವುದು ನಮ್ಮ ಕಾರ್ಯಕರ್ತರೆ, ಹಾಗಾಗಿ ಅವರ ಅಭಿಪ್ರಾಯದಂತೆ ಮುನ್ನಡೆಯುತ್ತೇನೆ. ಇಲ್ಲಿಯವರೆಗೆ ನನ್ನನ್ನು ಸಾಕಿರೋದು ನಮ್ಮ ಕಾರ್ಯಕರ್ತರೇ. ಅವರು ಕೈಗೊಳ್ಳುವ ತೀರ್ಮಾನವೇ ನನ್ನ ಪಾಲಿಗೆ ಅಂತಿಮವಾದದ್ದು ಎಂದು ಅವರು ಹೇಳಿದರು.

ಹಾಸನದ ಬಿಜೆಪಿ ಶಾಸಕ ಪ್ರೀತಂಗೌಡ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಹಾಸನದಿಂದ ಪ್ರಬಲ ಅಭ್ಯರ್ಥಿಯನ್ನೆ ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಮಾಜಿ ಸಚಿವ ಎ.ಮಂಜು ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದ್ದು, ನಾನು ಹಾಗೂ ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಸ್ವಾಗತಿಸಿದ್ದೇವೆ ಎಂದರು.

ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತದೆಯೋ, ನಾವು ಅವರ ಗೆಲುವಿಗೆ ಶ್ರಮಿಸುತ್ತೇವೆ. ಮಂಜು ಅವರಿಗೆ ಟಿಕೆಟ್ ನೀಡುವ ವಿಚಾರವನ್ನು ಬಿಜೆಪಿ ಕೋರ್ ಕಮಿಟಿ ನಿರ್ಧರಿಸುತ್ತದೆ. ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬೆಳ್ಳಿ ಪ್ರಕಾಶ್ ಹಾಗೂ ನಾನು ಬಿಜೆಪಿ ಪಕ್ಷದ ಶಾಸಕರಿದ್ದೇವೆ ಎಂದು ಅವರು ಹೇಳಿದರು. ಈ ವೇಳೆ ಕಡೂರು ಶಾಸಕ ಬೆಳ್ಳಿ ಪ್ರಕಾಶ್, ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News