ಅಮೆರಿಕದೊಂದಿಗಿನ ಪರಮಾಣು ಮಾತುಕತೆ ಸ್ಥಗಿತ: ಉತ್ತರ ಕೊರಿಯ ಎಚ್ಚರಿಕೆ

Update: 2019-03-15 16:25 GMT

ಸಿಯೋಲ್, ಮಾ. 15: ಅಮೆರಿಕ ರಿಯಾಯಿತಿ ನೀಡದಿದ್ದರೆ, ಆ ದೇಶದೊಂದಿಗಿನ ಪರಮಾಣು ಮಾತುಕತೆಯನ್ನು ಸ್ಥಗಿತಗೊಳಿಸಲು ಹಾಗೂ ಕ್ಷಿಪಣಿ ಮತ್ತು ಪರಮಾಣು ಪರೀಕ್ಷೆಗಳ ಮೇಲೆ ವಿಧಿಸಲಾಗಿರುವ ನಿಷೇಧವನ್ನು ತೆರವುಗೊಳಿಸಲು ಉತ್ತರ ಕೊರಿಯ ಪರಿಶೀಲಿಸುತ್ತಿದೆ ಎಂದು ಉತ್ತರ ಕೊರಿಯದ ಮಾಧ್ಯಮಗಳು ಶುಕ್ರವಾರ ವರದಿ ಮಾಡಿವೆ.

ಕಳೆದ ತಿಂಗಳು ವಿಯೆಟ್ನಾಮ್ ರಾಜಧಾನಿ ಹನೋಯಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್ ನಡುವಿನ ಎರಡನೇ ಶೃಂಗ ಸಮ್ಮೇಳನ ಮುರಿದು ಬೀಳಲು ಅಮೆರಿಕದ ಉನ್ನತ ಅಧಿಕಾರಿಗಳು ಕಾರಣ ಎಂಬುದಾಗಿ ಉತ್ತರ ಕೊರಿಯದ ಉಪ ವಿದೇಶ ಸಚಿವ ಚೋ ಸೊನ್ ಹುಯಿ ಆರೋಪಿಸಿದ್ದಾರೆ ಎಂದು ರಶ್ಯದ ‘ಟಾಸ್’ ಸುದ್ದಿ ಸಂಸ್ಥೆ ಮತ್ತು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

‘‘ಹನೋಯಿ ಸಮ್ಮೇಳನದಲ್ಲಿ ಅಮೆರಿಕ ಮುಂದಿಟ್ಟಿರುವ ಬೇಡಿಕೆಗಳಿಗೆ ಯಾವುದೇ ರೀತಿಯಲ್ಲಿ ನಾವು ಬಗ್ಗುವುದೂ ಇಲ್ಲ, ಈ ರೀತಿಯ ಮಾತುಕತೆಗಳಲ್ಲಿ ನಾವು ತೊಡಗುವುದೂ ಇಲ್ಲ’’ ಎಂದು ಉತ್ತರ ಕೊರಿಯ ರಾಜಧಾನಿ ಪ್ಯಾಂಗ್‌ಯಾಂಗ್‌ನಲ್ಲಿ ವರದಿಗಾರರೊಂದಿಗೆ ಮಾತನಾಡಿದ ಚೋ ಹೇಳಿದರು ಎಂದು ‘ಟಾಸ್’ ವರದಿ ಮಾಡಿದೆ.

‘‘ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ವೈರತ್ವ ಮತ್ತು ಅಪನಂಬಿಕೆಯ ವಾತಾವರಣವನ್ನು ಸೃಷ್ಟಿಸಿದರು ಹಾಗೂ ಉತ್ತರ ಕೊರಿಯ ಮತ್ತು ಅಮೆರಿಕಗಳ ಪರಮೋಚ್ಛ ನಾಯಕರ ನಡುವಿನ ರಚನಾತ್ಮಕ ಸಂಧಾನ ಪ್ರಯತ್ನಗಳಿಗೆ ತಡೆಯೊಡ್ಡಿದರು’’ ಎಂದು ಚೋ ಹೇಳಿರುವುದಾಗಿ ‘ಟಾಸ್’ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News