ಸಂಸದ ಧ್ರುವನಾರಾಯಣ್ ಜೊತೆ ಅಭಿವೃದ್ದಿ ವಿಚಾರದಲ್ಲಿ ಬಿಜೆಪಿ ಚರ್ಚೆಗೆ ಬರಲಿ: ಸಿದ್ದರಾಮಯ್ಯ ಸವಾಲು

Update: 2019-03-15 18:07 GMT

ಮೈಸೂರು,ಮಾ.15: ಮೈಸೂರು ಅಭಿವೃದ್ದಿಗೆ ಸಂಸದ ಪ್ರತಾಪ್ ಸಿಂಹ ಅವರ ಕೊಡುಗೆ ಶೂನ್ಯ. ನಾವು ಮಾಡಿರುವ ಕೆಲಸವನ್ನು ತಾನು ಮಾಡಿದ್ದು ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಮೈಸೂರಿನ ತಮ್ಮ ನಿವಾಸದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು, ಮಹದೇವಪ್ಪ ಬೆಂಗಳೂರು ಮೈಸೂರು ರಸ್ತೆ ಅಭಿವೃದ್ದಿ ಪಡಿಸುವಾಗ ಪ್ರತಾಪ್ ಸಿಂಹ ಎಲ್ಲಿದ್ದರು. ಅವರ ಕೊಡುಗೆ ಮೈಸೂರಿಗೆ ಏನು ಎಂದು ತಿಳಿಸಲಿ. ನಾವು ಮಾಡಿರುವ ಕೆಲಸವನ್ನು ತಾನೇ ಮಾಡಿದ್ದು ಎಂದು ಹೇಳಿಕೊಂಡು ತಿರುಗುತಿದ್ದಾರೆ. ಪ್ರತಾಪ್ ಸಿಂಹ ಮಾತ್ರವಲ್ಲ, ಬಿಜೆಪಿ ಯಾವ ಸಂಸದರೂ ಯಾವ ಕೆಲಸವನ್ನು ಮಾಡಿಲ್ಲ. ನಮ್ಮ ಧ್ರುವನಾರಾಯಣ್ ಜೊತೆಗೆ ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿಯವರು ಚರ್ಚೆಗೆ ಬರುತ್ತಾರಾ ಎಂದು ಸವಾಲು ಹಾಕಿದ ಅವರು, ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲ್, ಅನಂತ್ ಕುಮಾರ್ ಹೆಗಡೆ ಚರ್ಚೆಗೆ ಬರುತ್ತಾರಾ? ಏನೂ ಮಾಡದೆ ಸುಮ್ಮನೆ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು  ಆಕ್ರೋಶ ವ್ಯಕ್ತಪಡಿಸಿದರು.

ತುಮಕೂರಿನ ಟಿಕೆಟ್ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ವೇಣುಗೋಪಾಲ್ ಜೊತೆಯಲ್ಲಿ ಮಾತನಾಡುತ್ತೇನೆ. ನಾನು ಇಲ್ಲಿಯವರ ಜೊತೆ ಮಾತನಾಡುವುದಿಲ್ಲ. ಅದರ ಅಗತ್ಯವಿಲ್ಲ. ಸ್ಥಳೀಯರು ಮಾತನಾಡಿಕೊಳ್ಳಲಿ. ನಾನು 28 ಕ್ಷೇತ್ರದಲ್ಲೂ ಪ್ರಚಾರಕ್ಕೆ ಹೋಗುತ್ತೇನೆ. ಇದರಲ್ಲಿ ಮಂಡ್ಯ ಹಾಸನ ಎಂಬುದನ್ನು ಪ್ರತ್ಯೇಕಿಸಬೇಡಿ. ನಾವು ಕಾಂಗ್ರೆಸ್ ನ 20 ಸ್ಥಾನಗಳನ್ನು ಗೆಲ್ಲುತ್ತೇವೆ. ನಮ್ಮಲ್ಲಿ ಯಾವುದೇ ಬಿರುಕಿಲ್ಲ. ಎ.ಮಂಜು ಪಕ್ಷ ಬಿಡುವುದಿಲ್ಲ. ನಾನು ಅವರ ಜೊತೆ ಮಾತನಾಡಿದ್ದೇನೆ. ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ನಮ್ಮ ಜೊತೆಯಲ್ಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 12-13  ಸರ್ಜಿಕಲ್ ಸ್ಟೈಕ್ ನಡೆದಿತ್ತು. ನಾವು ಯಾವುದನ್ನಾದರೂ ಪ್ರಚಾರಕ್ಕೆ ಬಳಸಿಕೊಂಡಿದ್ದೇವಾ? ಇಂದಿರಾ ಗಾಂಧಿ ಸರ್ಕಾರದ ಅವಧಿಯಲ್ಲಿ ಬಾಂಗ್ಲಾ ಯುದ್ಧದಲ್ಲಿ ಪಾಕಿಸ್ತಾನ ಶರಣಾಗಿದ್ದು ಗೊತ್ತಿಲ್ಲವೇ? ಅದಕ್ಕಿಂತಲು ದೊಡ್ಡದೇ ಈ ಸರ್ಜಿಕಲ್ ಸ್ಟೈಕ್ ? ದೇಶದ ರಕ್ಷಣೆ ವಿಚಾರವನ್ನು ಕಾಂಗ್ರೆಸ್ ಯಾವತ್ತೂ ರಾಜಕಾರಣಕ್ಕೆ ಬಳಸಿಕೊಂಡಿಲ್ಲ. ಬಿಜೆಪಿಯವರು ಯಾವತ್ತೂ ಅಭಿವೃದ್ಧಿ ವಿಚಾರದಲ್ಲಿ, ರೈತರ ವಿಚಾರದಲ್ಲಿ ಮತ ಕೇಳಿದ್ದಾರಾ ? ಭಾವನಾತ್ಮಕ ವಿಚಾರ ಇಟ್ಟುಕೊಂಡು ಅವರು ರಾಜಕಾರಣ ಮಾಡುತ್ತಾರೆ. ಗೋಹತ್ಯೆ, ರಾಮಮಂದಿರ ಇತ್ಯಾದಿಗಳ ಬಗ್ಗೆ ಚರ್ಚೆ ಮಾಡುತ್ತಾರೆ. ಬಡವರ ಬಗ್ಗೆ, ರೈತರ ಆತ್ಮಹತ್ಯೆ ಬಗ್ಗೆ ಮಾತನಾಡಲಿ. ಈ ಬಾರಿ ಅವರು ಯಾವ ಅಭಿವೃದ್ಧಿಯನ್ನೂ ಮಾಡಿಲ್ಲ. ಹೀಗಾಗಿ ಈ ವಿಚಾರ ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಸರ್ಜಿಕಲ್ ಸ್ಟ್ರೈಕ್ ನಿಂದ ತಮಗೆ ಲಾಭವಾಗಿದೆ ಎಂದು ಬಿಜೆಪಿ ಬಿಂಬಿಸಿಕೊಳ್ಳುತ್ತಿದೆ ಎಂದು ಹರಿಹಾಯ್ದರು.

ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಚಾಮರಾಜನಗರದಿಂದ ಸ್ಪರ್ಧೆ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾರು ಎಲ್ಲಿ ಬೇಕಾದರೂ ನಿಂತುಕೊಳ್ಳಲಿ. ಯಾರು ಬೇಕಾದರೂ ಅಭ್ಯರ್ಥಿಯಾಗಲು ಸ್ವತಂತ್ರರು. ಚುನಾವಣೆಗೆ ನಿಲ್ಲುವುದು ಅವರವರ ವೈಯುಕ್ತಿಕ ವಿಚಾರ. ಆ ಬಗ್ಗೆ ನಾನು ಏನನ್ನು ಹೇಳೋದಿಲ್ಲ ಎಂದು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News