ಮಾ.22 ರಿಂದ ಬಾಬಾಬುಡಾನ್‌ ಗಿರಿ ಉರೂಸ್: ಸಕಲ ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ

Update: 2019-03-15 18:11 GMT

ಚಿಕ್ಕಮಗಳೂರು, ಮಾ.15: ಬಾಬಾಬುಡನ್‌ಗಿರಿಯಲ್ಲಿ ಮಾ.22 ರಿಂದ ಮಾರ್ಚ್ 24 ರವರೆಗೆ 3 ದಿನಗಳ ಕಾಲ ನಡೆಯುವ ಉರೂಸ್‌ಗೆ ಮೂಲಭೂತ ಸೌಕರ್ಯಗಳ ಜೊತೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಉರೂಸ್ ಆಚರಣೆ ಸಂಬಂಧ ಕೈಗೊಂಡಿರುವ ಸಿದ್ಧತೆಗಳ ಕುರಿತು ಕರೆಯಲಾಗಿದ್ದ ಅಧಿಕಾರಿಗಳು ಹಾಗೂ ಮುಸ್ಲಿಂ ಮುಖಂಡರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದವಾಗದಂತೆ ಪೊಲೀಸ್ ಬಂದೋಬಸ್ತ್ ಕಲ್ಪಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ತಾಕೀತು ಮಾಡಿದರು. ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಮೆಸ್ಕಾಂ ಅಧಿಕಾರಿಗಳಿಗೆ, ರಸ್ತೆಗಳನ್ನು ದುರಸ್ತಿ ಪಡಿಸುವಂತೆ ಲೋಕೋಪಯೋಗಿ ಇಲಾಖೆ, ಮಾಣಿಕ್ಯದಾರ ಹಾಗೂ ಗಾಳಿಕೆರೆಗೆ ತೆರಳುವ ರಸ್ತೆ ದುರಸ್ತಿ ಪಡಿಸುವಂತೆ ಪಂಚಾಯತ್ ರಾಜ್ ಇಂಜಿನಿಯರ್‌ಗಳಿಗೆ ಸೂಚನೆ ನೀಡಿದರು.

ಭಕ್ತಾಧಿಗಳ ಅಗತ್ಯಕ್ಕೆ ತಕ್ಕಂತೆ ಹೆಚ್ಚುವರಿ ಬಸ್ ಸೌಕರ್ಯ ಕಲ್ಪಿಸಲಾಗುವುದು, ತಾತ್ಕಾಲಿಕ ಆಸ್ಪತ್ರೆ ತೆರೆಯಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ ಅವರು, ಉರೂಸ್‌ಗೆ ಬರುವ ಭಕ್ತಾಧಿಗಳಿಗೆ ಪ್ರಸಾದದ ವ್ಯವಸ್ಥೆ ಹಾಗೂ 15 ದಿನಗಳ ಕಾಲ ಭಕ್ತರಿಗೆ ಗಂಜಿ ವಿತರಿಸುವಂತೆ ಮುಜರಾಯಿ ಇಲಾಖೆ ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚಿಸಿದರು.

ದರ್ಗಾದ ಸುತ್ತಮುತ್ತ ಸ್ವಚ್ಚತೆ ಕಾಪಾಡಬೇಕು. ಭಕ್ತಾಧಿಗಳ ವಾಸ್ತವ್ಯಕ್ಕೆ ಮೂರು ದಿನಗಳ ಕಾಲ ತಾತ್ಕಾಲಿಕ ಶೇಡ್ ನಿರ್ಮಿಸಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ತಾಕೀತು ಮಾಡಿದರು. ಸಭೆಯಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹರೀಶ್‌ ಪಾಂಡೆ, ಅಪರ ಡಿಸಿ ಡಾ.ಕುಮಾರ್, ಚಿಕ್ಕಮಗಳೂರು ಉಪವಿಭಾಗಾಧಿಕಾರಿ ಶಿವಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೃತಿ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಮುಸ್ಲಿಂ ಮುಖಂಡರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News