ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ಬಿಎಸ್ಪಿ ಸ್ಪರ್ಧೆ: ಪಕ್ಷದ ಹಿರಿಯ ಮುಖಂಡ ಸುಧಾಕರ ಕನಮಡಿ

Update: 2019-03-15 18:35 GMT

ವಿಜಯಪುರ,ಮಾ.15: ಬಹುಜನ ಸಮಾಜ ಪಕ್ಷ ಈ ಬಾರಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳದೇ ಸ್ವತಂತ್ರವಾಗಿ ವಿಜಯಪುರ ಸೇರಿದಂತೆ ರಾಜ್ಯದ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು, ಗೆಲ್ಲುವಂತಹ ಅಭ್ಯರ್ಥಿಗಳ ಹುಡುಕಾಟದಲ್ಲಿ ತೊಡಗಿದೆ ಎಂದು ಬಹುಜನ ಸಮಾಜ ಪಕ್ಷದ ಹಿರಿಯ ಮುಖಂಡ ಸುಧಾಕರ ಕನಮಡಿ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹುಜನ ಸಮಾಜದ ಪಕ್ಷಕ್ಕೆ ದೇಶದಾದ್ಯಂತ ವ್ಯಾಪಕವಾದ ಬೆಂಬಲ ವ್ಯಕ್ತವಾಗುತ್ತಿದೆ. ಈ ಬಾರಿ ಬಿಎಸ್‍ಪಿ ಅಧಿನಾಯಕಿ ಮಾಯಾವತಿ ಅವರು ದೇಶದ ಪ್ರಧಾನಿಯಾಗಬೇಕಿದೆ. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಪಕ್ಷ ಸಂಘಟನೆಯ ಕಾರ್ಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದು, ರಾಜ್ಯದಲ್ಲಿ ಎರಡು ಅಥವಾ ಮೂರು ಕ್ಷೇತ್ರಗಳಲ್ಲಿ ಬಿಎಸ್‍ಪಿ ಅಭ್ಯರ್ಥಿ ಗೆಲುವು ಸಾಧಿಸುವುದು ನಿಶ್ಚಿತ. ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರಕ್ಕೂ ಸಹ ಅಭ್ಯರ್ಥಿ ಕಣಕ್ಕಿಳಿಸಲಾಗುತ್ತಿದ್ದು, ಶೀಘ್ರವೇ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಲಾಗುವುದು ಎಂದು ಪ್ರಕಟಿಸಿದರು. 

ದೇಶದಲ್ಲಿ ಅನೇಕ ರಾಷ್ಟ್ರೀಯ ಹಾಗೂ ಸ್ಥಳೀಯ ಪಕ್ಷಗಳು ಅಧಿಕಾರಕ್ಕೆ ಬಂದರೂ ಯಾವುದೇ ಒಬ್ಬ ದಲಿತ ರಾಜಕಾರಣಿ ಮುಖ್ಯಮಂತ್ರಿ, ಪ್ರಧಾನ ಮಂತ್ರಿಯಾಗಿಲ್ಲ. ಕೇವಲ ಗುಲಾಮರಂತೆ, ತಮ್ಮ ಸೇವಕರಂತೆ ನಡೆಸಿಕೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ ನಾಲ್ಕು ಬಾರಿ ಅಧಿಕಾರ ಹಿಡಿದು ಡಾ.ಬಾಬಾಸಾಹೇಬ ಅಂಬೇಡ್ಕರ ಅವರ ಕನಸು, ಆಶಯವನ್ನು ಈಡೇರಿಸುವ ಸಂಕಲ್ಪ ಮಾಡಿರುವ ಮಾಯಾವತಿ ಅವರ ಕೈ ಬಲಪಡಿಸಬೇಕಿದೆ. ಉತ್ತರ ಪ್ರದೇಶದಲ್ಲಿ ಬಿಎಸ್ಪಿ ಮತ್ತು ಎಸ್ಪಿ ಮೈತ್ರಿ ಮಾಡಿಕೊಂಡಿದ್ದು, 80 ಕ್ಷೇತ್ರದಿಂದ 60 ಕ್ಷೇತ್ರ ಗೆದ್ದು ಮಾಯಾವತಿ ಪ್ರಧಾನಿ ಆಗಲಿದ್ದಾರೆ ಎಂದು ಭವಿಷ್ಯ ನುಡಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‍ಪಿ ಟಿಕೇಟ್ ಮಾರಾಟವಾಗಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿಯೇ ನಾವು ಸಾಮೂಹಿಕವಾಗಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದೇವು. ಆದರೆ ಪಕ್ಷದ ಹಿರಿಯ ಮುಖಂಡರು ನಮ್ಮ ಮನವೊಲಿಸಿದ್ದರಿಂದ ಈಗ ಮರಳಿ ಮಾತೃ ಪಕ್ಷಕ್ಕೆ ಬಂದಿದ್ದೇವೆ. ನಮ್ಮೆಲ್ಲರನ್ನು ವಿಶ್ವಾಸಕ್ಕೆ ಪಡೆದು ಗೆಲ್ಲುವಂತಹ ಅಭ್ಯರ್ಥಿಯನ್ನು ಬಿಎಸ್‍ಪಿ ಕಣಕ್ಕಿಳಿಸಲಿದೆ ಎಂದರು. 

ಯಶವಂತ ಪೂಜಾರಿ, ರಾಜು ಗುಬ್ಬೇವಾಡ, ಯಲ್ಲಪ್ಪ ಬಿದರಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News