ಮಧ್ಯಪ್ರದೇಶ ಸಚಿವನ ದೇವಾಲಯ ಸುತ್ತಾಟ: ಏಕೆ ಗೊತ್ತೇ?

Update: 2019-03-16 04:12 GMT

ಭೋಪಾಲ್, ಮಾ.16: ಮೃದು ಹಿಂದುತ್ವಕ್ಕೆ ಕಾಂಗ್ರೆಸ್ ಪಕ್ಷ ಮಣೆ ಹಾಕಿದೆ ಎಂಬ ಆರೋಪಗಳ ಬೆನ್ನಲ್ಲೇ, ರಾಜ್ಯದ ಎಲ್ಲ 29 ಲೋಕಸಭಾ ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲಬೇಕು ಎಂದು ದೇವರ ಮೊರೆ ಹೋಗುವ ಹಾಗೂ ಮತದಾರರನ್ನು ಓಲೈಸುವ ಪ್ರಯತ್ನ ಮಧ್ಯಪ್ರದೇಶದಲ್ಲಿ ನಡೆಯುತ್ತಿದೆ. ಇದಕ್ಕೆ ಹೊಸ ಸೇರ್ಪಡೆಯೆಂದರೆ, ರಾಹುಲ್‌ ಗಾಂಧಿ ದೇಶದ ಪ್ರಧಾನಿಯಾಗಬೇಕು ಎಂದು ಪ್ರಾರ್ಥಿಸುವ ಸಲುವಾಗಿ ಧಾರ್ಮಿಕ ಟ್ರಸ್ಟ್ ಮತ್ತು ದತ್ತಿ ಖಾತೆ ಸಚಿವ ಪಿ.ಸಿ.ಶರ್ಮಾ ದೇವಾಲಯಗಳು ಮತ್ತು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲು ಆರಂಭಿಸಿರುವುದು.

"ಈಗಾಗಲೇ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿದ್ದು, ಇಂದು ಮಂಡಸಾರ್ ಪಶುಪತಿನಾಥ ದೇವಾಲಯಕ್ಕೆ ಬಂದಿದ್ದೇನೆ. ಮಧ್ಯಪ್ರದೇಶದಲ್ಲಿ ನಮ್ಮ ಪಕ್ಷ ದೊಡ್ಡ ಜಯ ಸಾಧಿಸಬೇಕು ಹಾಗೂ ರಾಹುಲ್‌ ಗಾಂಧಿ ಭಾರತದ ಮುಂದಿನ ಪ್ರಧಾನಿಯಾಗಬೇಕು ಎಂದು ಪ್ರಾರ್ಥಿಸಿದ್ದೇನೆ. ಇಂದು ಅಜ್ಮೀರ್ ದರ್ಗಾಕ್ಕೂ ಭೇಟಿ ನೀಡಿದ್ದೇನೆ" ಎಂದು ಅಜ್ಮೀರ್‌ನಿಂದ ದೂರವಾಣಿ ಮೂಲಕ ಮಾತನಾಡಿದ ಪಿ.ಸಿ.ಶರ್ಮಾ ತಿಳಿಸಿದ್ದಾರೆ.

ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರ ಕಟ್ಟಾ ಬೆಂಬಲಿಗರಾಗಿರುವ ಶರ್ಮಾ, ಈ ಮೊದಲು ಓರ್ಚಾದ ರಾಮರಾಜ ದೇವಾಲಯ, ಇಂದೋರ್‌ನ ಖಜ್ರಾನಾ ಗಣೇಶ ದೇವಾಲಯ, ನಳಖೇಡಾದ ಬಗುಳಮುಖಿ ದೇವಸ್ಥಾನ, ಉಜ್ಜಯಿನಿಯ ಅಗರ್ ಮಾಳವ ಮತ್ತು ಮಹಾಕಾಳಿ ದೇವಾಲಯಗಳಿಗೆ ಭೇಟಿ ನೀಡಿ ಕಾಂಗ್ರೆಸ್ ಜಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಅಜ್ಮೀರ್ ದರ್ಗಾಗೆ ತೆರಳುವ ಮುನ್ನ ಮುಖ್ಯಮಂತ್ರಿ ಕಮಲ್‌ನಾಥ್ ಅವರ ಪರವಾಗಿ ಪವಿತ್ರ ಚಾದರ ಕೂಡಾ ಒಯ್ದಿದ್ದಾರೆ. "ಪವಿತ್ರ ಮಸೀದಿಯಲ್ಲಿ ಚಾದರ ಸೇವೆ ಸಲ್ಲಿಸಿ ಪಕ್ಷದ ಗೆಲುವಿಗೆ ಪ್ರಾರ್ಥಿಸಿದ್ದೇನೆ. ನನ್ನ ಆಸೆ ಈಡೇರುತ್ತದೆ ಎನ್ನುವುದು ನನ್ನ ನಂಬಿಕೆ" ಎಂದು ಶರ್ಮಾ ಹೇಳಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ 29 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಕೇವಲ 3 ಸ್ಥಾನಗಳನ್ನಷ್ಟೇ ಇಲ್ಲಿ ಗೆದ್ದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News