ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರಲು ಮಾಯಾವತಿ ನಿರ್ಧಾರ?

Update: 2019-03-16 07:25 GMT

ಲಕ್ನೋ, ಮಾ.16: ಬಹುಜನ ಸಮಾಜವಾದಿ ಪಕ್ಷ(ಬಿಎಸ್ಪಿ)ಅಧಿನಾಯಕಿ ಮಾಯಾವತಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರುವ ಬಗ್ಗೆ ಪಕ್ಷದ ನಾಯಕರಿಗೆ ಸುಳಿವು ನೀಡಿದ್ದಾರೆ. ಸ್ಪರ್ಧೆಯ ಬದಲಿಗೆ ಇಡೀ ದೇಶದಲ್ಲಿ ಪಕ್ಷದ ಪ್ರಚಾರದತ್ತ ಗಮನ ನೀಡಲು ನಿರ್ಧರಿಸಿದ್ದಾರೆ ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ.

ಎ.2 ರಂದು ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿ ಮಾಯಾವತಿ ಪಕ್ಷದ ಪರ ರಾಷ್ಟ್ರಮಟ್ಟದಲ್ಲಿ ಪ್ರಚಾರ ಆರಂಭಿಸಲಿದ್ದಾರೆ ಎಂದು ಪಕ್ಷದ ನಾಯಕ ತಿಳಿಸಿದ್ದಾರೆ.

2014ರಲ್ಲಿ ಬಿಎಸ್ಪಿ 503 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ದೇಶಾದ್ಯಂತ ಶೇ.5ರಷ್ಟು ಮತ ಹಂಚಿಕೆ ಪಡೆಯಲಷ್ಟೇ ಶಕ್ತವಾಗಿದ್ದು ಒಂದೂ ಸೀಟು ಗೆದ್ದಿರಲಿಲ್ಲ. ಮಾಯಾವತಿ ಈ ಬಾರಿ ಉತ್ತರಪ್ರದೇಶದಲ್ಲಿ ತನ್ನ ಮೈತ್ರಿಪಾಲುದಾರ ಸಮಾಜವಾದಿ ಪಕ್ಷ ಹಾಗೂ ರಾಷ್ಟ್ರೀಯ ಲೋಕದಳದೊಂದಿಗೆ ಎ.7 ರಿಂದ ಜಂಟಿ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ.

ಮೈನ್‌ಪುರಿ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಸಮಾಜವಾದಿ ಪಕ್ಷದ ವರಿಷ್ಠ ನಾಯಕ ಮುಲಾಯಂ ಸಿಂಗ್ ಯಾದವ್ ಸಹಿತ ಆ ಪಕ್ಷದ ಎಲ್ಲ ಅಭ್ಯರ್ಥಿಗಳ ಪರ ಮಾಯಾವತಿ ಪ್ರಚಾರ ನಡೆಸಲಿದ್ದಾರೆ. ಡಿಂಪಲ್ ಯಾದವ್, ಅಕ್ಷಯ್ ಯಾದವ್ ಹಾಗೂ ಧರ್ಮೇಂದ್ರ ಯಾದವ್ ಸ್ಪರ್ಧಿಸುತ್ತಿರುವ ಕನೌಜ್, ಫಿರೋಝಾಬಾದ್ ಹಾಗೂ ಬದೌನ್‌ನಲ್ಲಿ ನಡೆಯುವ ರ್ಯಾಲಿಗಳಲ್ಲಿ ಭಾಗವಹಿಸಲಿದ್ದಾರೆ.

ಬುಧವಾರ ನಡೆದ ಪಕ್ಷದ ಸಭೆಯಲ್ಲಿ ಪಕ್ಷದ ನಾಯಕರು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ತನ್ನನ್ನು ಒತ್ತಾಯಿಸಿದ್ದರು. ತಾನು ಪಕ್ಷದ ಏಕೈಕ ತಾರಾ ಪ್ರಚಾರಕಿಯಾಗಿದ್ದು, ಕೇವಲ ಒಂದು ಕ್ಷೇತ್ರದತ್ತ ಗಮನ ನೀಡಲು ಸಾಧ್ಯವಿಲ್ಲ ಎಂದು ಪಕ್ಷದ ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದ್ದಾಗಿ ಮಾಯಾವತಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News