ಕೊಡಗಿನ ವೀರ ಯೋಧ ಮಹೇಶ್‌ಗೆ ಶೌರ್ಯ ಚಕ್ರದ ಗೌರವ

Update: 2019-03-16 17:05 GMT

ಮಡಿಕೇರಿ, ಮಾ.16: ಜಮ್ಮು ಕಾಶ್ಮೀರದ ಗಡಿಯಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಕಡಿವಾಣ ಹಾಕುವಲ್ಲಿ ಶ್ರಮಿಸಿದ್ದ ಕೊಡಗಿನ ವೀರಯೋಧ ಎಚ್.ಎನ್.ಮಹೇಶ್‌ಗೆ ಪ್ರತಿಷ್ಠಿತ ಶೌರ್ಯ ಚಕ್ರವನ್ನು ಪ್ರದಾನಿಸಿ ಗೌರವಿಸಲಾಯಿತು.

ಭಾರತೀಯ ಸೇನಾ ಪಡೆಯಿಂದ ನೀಡಲಾಗುವ ಪ್ರತಿಷ್ಠಿತ ಶೌರ್ಯ ಚಕ್ರ ಪ್ರಶಸ್ತಿಯನ್ನು ಹೊಸದಿಲ್ಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಗಳು ಗುರುವಾರ ಮಹೇಶ್ ಅವರಿಗೆ ಪ್ರದಾನ ಮಾಡಿದರು.

ಗೋಣಿಕೊಪ್ಪದ ಗುತ್ತಿಗೆದಾರ ನಾಗರಾಜ್ ಮತ್ತು ಲಕ್ಷ್ಮೀ ದಂಪತಿಯ ಪುತ್ರ ಎಚ್.ಎನ್.ಮಹೇಶ್ 7 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸಿಪಾಯಿ ಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ವರ್ಷ ಜಮ್ಮು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕರ ದಿಢೀರ್ ದಾಳಿಯ ಸಂದರ್ಭ ಉಗ್ರರನ್ನು ಹಿಮ್ಮೆಟ್ಟಿಸುವ ಕಾರ್ಯಾಚರಣೆಗಿಳಿದರು. ಭಯೋತ್ಪಾದಕರ ಗುಂಡಿನ ದಾಳಿಯನ್ನೂ ಲೆಕ್ಕಿಸದೆ ಮುನ್ನುಗ್ಗಿದ್ದ ಅವರು, ಭಯೋತ್ಪಾದಕರ ಮೇಲೆ ಸತತ ಗುಂಡಿನ ಮಳೆಗೆರೆಯುತ್ತಾ ಓರ್ವ ಭಯೋತ್ಪಾದಕನನ್ನು ಬಲಿ ಪಡೆದಿದ್ದರು. ಅಲ್ಲದೆ, ಮತ್ತೋರ್ವ ಭಯೋತ್ಪಾದಕ ಗಂಭೀರವಾಗಿ ಗಾಯಗೊಂಡು ಪಲಾಯನಗೈದಿದ್ದ.
ಮಹೇಶ್ ಹಾಗೂ ಅವರ ಜೊತೆಯಲ್ಲಿದ್ದ ಸೇನಾತಂಡ ಗುಂಡಿನಮಳೆಗರೆಯುತ್ತಿದ್ದಾಗ ಭಯೋತ್ಪಾ ದಕರು ಭಯಗೊಂಡು ಅಡಗುತಾಣವೊಂದರಲ್ಲಿ ಆಶ್ರಯ ಪಡೆದು, ಅಲ್ಲಿಂದ ಹೊರಬರಲಾಗದೆ ಪರದಾಡತೊಡಗಿದರು. ಮರುದಿನವೂ ಅಡ ಗುತಾಣದ ಮೇಲೆ ದಾಳಿ ನಡೆಸಿ ಉಗ್ರರನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದ್ದರು. ಅವರ ಈ ಶೌರ್ಯವನ್ನು ಗುರುತಿಸಿದ್ದ ಸೇನಾಪಡೆ ಶೌರ್ಯಚಕ್ರ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ರಾಷ್ಟ್ರಪತಿಗಳಿಂದ ಮಹೇಶ್ ಅವರು ಪ್ರಶಸ್ತಿ ಸ್ವೀಕರಿಸುವ ಸಂದರ್ಭ ತಂದೆ ನಾಗರಾಜ್ ಹಾಗೂ ತಾಯಿ ಲಕ್ಷ್ಮೀ ಹಾಜರಿದ್ದು, ಪುತ್ರನ ಸಾಧನೆಗೆ ಆನಂದ ಬಾಷ್ಪದ ಮೂಲಕ ಹರ್ಷ ವ್ಯಕ್ತಪಡಿಸಿದರು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News