ಬಜರಂಗದಳಕ್ಕೆ ಬಿಸಿ ಮುಟ್ಟಿಸಿದ ಚಿಕ್ಕಮಗಳೂರು ಎಸ್ಪಿ ಹರೀಶ್ ಪಾಂಡೆ

Update: 2019-03-16 14:12 GMT

ಚಿಕ್ಕಮಗಳೂರು, ಮಾ.16: ಚಿತ್ರದುರ್ಗದಿಂದ ಪ್ರವಾಸಕ್ಕೆ ಬಂದಿದ್ದವರ ಪೈಕಿ ಯುವಕನೋರ್ವ ದೇಶದ್ರೋಹಿ ಘೋಷಣೆ ಕೂಗಿದ್ದಾನೆಂದು ಆರೋಪಿಸಿ ಸಂಘಪರಿವಾರದ ಕಾರ್ಯಕರ್ತರು ಹಲ್ಲೆ ನಡೆಸಿ ಪೊಲೀಸರಿಗೊಪ್ಪಿಸಿದ್ದ ಘಟನೆ ಸಂಬಂಧ ಇಲ್ಲಿನ ನ್ಯಾಯಾಲಯ ಯುವಕನಿಗೆ ಶನಿವಾರ ಜಾಮೀನು ನೀಡಿದೆ. ಯುವಕನಿಗೆ ಜಾಮೀನು ನೀಡಿದ್ದನ್ನು ಅರಿತ ಬಜರಂಗದಳದ ಕಾರ್ಯಕರ್ತರು ಯುವಕನ ವಿರುದ್ಧ ಗಂಭೀರ ಪ್ರಕರಣ ದಾಖಲಿಸುವಂತೆ ಪೊಲೀಸರನ್ನು ಒತ್ತಾಯಿಸಲು ಹೋದ ವೇಳೆ ಮುಖಭಂಗಕ್ಕೊಳಗಾದ ಘಟನೆ ವರದಿಯಾಗಿದೆ.

ಮಾ.14ರಂದು ಚಿತ್ರದುರ್ಗದಿಂದ ಬಸ್ಸಿನಲ್ಲಿ ಬಂದ ಪ್ರವಾಸಿಗರ ಪೈಕಿ ಓರ್ವ ನಗರ ಸಮೀಪದ ಕೈಮರದಲ್ಲಿ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಭಾವಚಿತ್ರವನ್ನು ನೋಡಿ ಪಾಕಿಸ್ತಾನ ಪರ ಘೋಷಣೆಯನ್ನು ಕೂಗಿದ್ದನೆಂದು ಆರೋಪಿಸಿ ಸಂಘಪರಿವಾರದ ಸದಸ್ಯರು ಹಲ್ಲೆ ಮಾಡಿ ಪೊಲೀಸರಿಗೆ ದೂರು ನೀಡಿದ್ದರು. ದೂರಿನನ್ವಯ ಪೊಲೀಸರು ಯುವಕ ಯೂನುಸ್ ಎಂಬಾತನನ್ನು ಬಾಬಾಬುಡನ್‍ಗಿರಿಯಲ್ಲಿ ವಶಕ್ಕೆ ಪಡೆದು 153ಎ, 504, 506 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಯುವಕನಿಗೆ ಶನಿವಾರ ಜಾಮೀನು ಮಂಜೂರು ಮಾಡಿದೆ. ಈ ವಿಷಯ ತಿಳಿದ ಬಜರಂಗದಳ ಹಾಗೂ ವಿಎಚ್‍ಪಿ ಮುಖಂಡರು ನಗರದ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ಯುವಕನ ವಿರುದ್ಧ 124ಎ ಸೆಕ್ಷನ್ ದಾಖಲಿಸದಿರುವ ಬಗ್ಗೆ ಠಾಣಾಧಿಕಾರಿ ಹಾಗೂ ಎಸ್ಪಿ ಅವರನ್ನು ಪ್ರಶ್ನಿಸಿದ್ದಾರೆಂದು ತಿಳಿದು ಬಂದಿದೆ. ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ಅವರು, ಪೊಲೀಸರು ಅವರ ಕರ್ತವ್ಯವನ್ನು ಸರಿಯಾಗಿಯೇ ಮಾಡಿದ್ದಾರೆಂದು ಎಚ್ಚರಿಸಿದ್ದಲ್ಲದೇ ಘಟನೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆಂದು ಹೇಳಲಾಗಿದೆ.

ಎಸ್ಪಿಗೆ ಸವಾಲು..!

ದೇಶದ್ರೋಹಿ ಘೋಷಣೆ ಕೂಗಿದವನ ವಿರುದ್ಧ ಪೊಲೀಸರು 124 ಸೆಕ್ಷನ್ ದಾಖಲಿಸಿಲ್ಲ. ಗ್ರಾಮಾಂತರ ಪೊಲಿಸ್ ಠಾಣೆಯಲ್ಲಿ ದೇಶದ್ರೋಹದ ಸೆಕ್ಷನ್‍ ಹಾಕದೇ ಇರುವುದನ್ನು ಪ್ರಶ್ನಿಸಿದ್ದಕ್ಕೆ ವರಿಷ್ಠಾಧಿಕಾರಿಗಳು ಬಾಯಿಗೆ ಬಂದಂತೆ ಬೈದು ದತ್ತಜಯಂತಿಯೇ ನಡೆಯದಂತೆ ಮಾಡುತ್ತೇನೆಂದು ಹೇಳಿರುವುದನ್ನು ಬಜರಂಗದಳ ತೀವ್ರವಾಗಿ ಖಂಡಿಸುತ್ತದೆ. ದತ್ತಜಯಂತಿ ಸರಕಾರಿ ಕಾರ್ಯಕ್ರಮವೇ ಹೊರತು ಒಂದು ಸಂಘಟನೆಯ ಕಾರ್ಯಕ್ರಮವಲ್ಲ. ದತ್ತಜಯಂತಿಯನ್ನು ನಿಲ್ಲಿಸುತ್ತೇವೆ ಎಂದು ಹೇಳಿದ ಅಧಿಕಾರಿಗಳನ್ನು ಕೂಡ ವಿಶ್ವಹಿಂದು ಪರಿಷತ್, ಬಜರಂಗದಳ ಕಂಡಿದೆ. ಅಂತವರ ವಿರುದ್ಧ ಬಹಳಷ್ಟು ಹೋರಾಟಗಳನ್ನು ಮಾಡಿಕೊಂಡು ಬಂದಿದೆ. ನಮ್ಮ ಕಾರ್ಯಕರ್ತರನ್ನು ಹೆಸರಿಸಿ ಬೆದರಿಸಿ ಹೋರಾಟದ ಮನಸ್ಥಿತಿಯನ್ನು ಕುಗ್ಗಿಸುವಂತಹ ಕೆಲಸವನ್ನು ಎಸ್ಪಿ ಕೈಬಿಡಬೇಕು. ಇದಕ್ಕೆ ಯಾವುದೇ ರೀತಿಯಲ್ಲೂ ಸಂಘಟನೆ ಜಗ್ಗುವುದಿಲ್ಲ ಎಂಬುದನ್ನು ಈ ಮೂಲಕ ತಿಳಿಸುತ್ತೇನೆ.
- ತುಡುಕೂರು ಮಂಜು, ಬಜರಂಗದಳ, ವಿಎಚ್‍ಪಿ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News