ಮಾ.31ಕ್ಕೆ 'ಪ್ರಜಾಪ್ರಭುತ್ವದ ಬಿಕ್ಕಟ್ಟು-ನಾಗರಿಕರ ಜವಾಬ್ದಾರಿ' ಸಂಕಲ್ಪ ಸಭೆ

Update: 2019-03-16 15:48 GMT

ಹುಬ್ಬಳ್ಳಿ, ಮಾ.16: ಜನಾಂದೋಲನ ಮಹಾ ಮೈತ್ರಿ ಹಾಗೂ ಸಿಟಿಜನ್ಸ್ ಆಫ್ ಡೆಮಾಕ್ರಸಿ ಹಾಗೂ ಇತರೆ ಸಂಘಟನೆಗಳ ಜೊತೆಗೂಡಿ ಮಾ.31ರಂದು ಧಾರವಾಡದಲ್ಲಿ ‘ಪ್ರಜಾಪ್ರಭುತ್ವದ ಬಿಕ್ಕಟ್ಟು ನಾಗರಿಕ ಸಮಾಜದ ಜವಾಬ್ದಾರಿ’ ಕುರಿತ ಸಂಕಲ್ಪ ಸಭೆ ನಡೆಯಲಿದೆ ಎಂದು ಸಿಎಫ್‌ಡಿ ರಾಷ್ಟ್ರೀಯ ಅಧ್ಯಕ್ಷ ಎಸ್.ಆರ್.ಹಿರೇಮಠ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ದೇಶವು ಸಂವಿಧಾನದ ಆಶಯಕ್ಕೆ ವಿರೋಧವಾಗಿ ನಡೆಯುತ್ತಿದೆ ಎಂಬ ಆತಂಕ ಸಂವಿಧಾನವನ್ನು ಗೌರವಿಸುವ, ಪ್ರೀತಿಸುವ ಹಾಗೂ ಅದರ ಅಡಿಯಲ್ಲಿ ನಡೆಯುತ್ತಿರುವ ಪ್ರತಿಯೊಬ್ಬ ನಾಗರಿಕನ ಆತಂಕವಾಗಿದೆ. ಹೀಗಾಗಿ ಸಂವಿಧಾನದ ಆಶಯವನ್ನು ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಗಂಭೀರವಾದ ಚಿಂತನ ಮಂತನ ಆಗಬೇಕಿದೆ ಎಂದರು.

ಬಿಜೆಪಿ, ಆರೆಸ್ಸೆಸ್ ಸೇರಿದಂತೆ ಸಂಘಪರಿವಾರದ ಸಂಘಟನೆಗಳು ಸಾಂವಿಧಾನಿಕ ಸಂಸ್ಥೆಗಳಾದ ನ್ಯಾಯಾಂಗ, ಕಾರ್ಯಾಂಗ ಹಾಗೂ ಶಾಸಕಾಂಗವನ್ನು ದುರ್ಬಲಗೊಳಿಸುವ ನಿಟ್ಟಿನಲ್ಲಿ ಷಡ್ಯಂತ್ರಗಳನ್ನು ರೂಪಿಸುತ್ತಿವೆ. ಹಾಗೂ ಜನಪರವಾದ ಕಾನೂನುಗಳನ್ನು ಒಂದೊಂದಾಗಿ ಇಲ್ಲವಾಗಿಸುವ ಪ್ರಕ್ರಿಯೆಯಲ್ಲಿ ತೊಡಗಿವೆ. ಇಂತಹ ಸಂದರ್ಭದಲ್ಲಿ ಜನಪರವಾಗಿ ಚಿಂತಿಸುವ ಸಮಾನ ಮನಸ್ಕರು ಒಟ್ಟಾಗಿ ಸಂವಿಧಾನವನ್ನು ಉಳಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಅವರು ಹೇಳಿದರು.

ಸಿಎಫ್‌ಡಿ ಮುಖಂಡ ಕೆ.ಎಲ್.ಅಶೋಕ್ ಮಾತನಾಡಿ, ‘ಪ್ರಜಾಪ್ರಭುತ್ವದ ಬಿಕ್ಕಟ್ಟು ನಾಗರಿಕ ಸಮಾಜದ ಜವಾಬ್ದಾರಿ’ ಕುರಿತ ಸಂಕಲ್ಪ ಸಭೆಯಲ್ಲಿ ಹಿರಿಯ ವಕೀಲ ಪ್ರಶಾಂತ ಭೂಷಣ್, ಚಿಂತಕ ಯೋಗೇಂದ್ರ ಯಾದವ್, ಸಾಹಿತಿ ದೇವನೂರ ಮಹಾದೇವ, ಪತ್ರಕರ್ತ ಸುಗತ ಶ್ರೀನಿವಾಸರಾಜು ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News