ಸಕಲ ಸರಕಾರಿ ಗೌರವದೊಂದಿಗೆ ಮಾತೆ ಮಹಾದೇವಿ ಅಂತ್ಯಕ್ರಿಯೆ

Update: 2019-03-16 15:52 GMT

ಬಾಗಲಕೋಟೆ, ಮಾ. 16: ಎರಡು ದಿನಗಳ ಹಿಂದೆ ಲಿಂಗೈಕ್ಯರಾದ ಬಸವ ಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ಅವರ ಅಂತಿಮ ಕ್ರಿಯಾವಿಧಿಯನ್ನು ಸಕಲ ಸರಕಾರಿ ಗೌರವಗಳೊಂದಿಗೆ ಶನಿವಾರ ಸಂಜೆ 5ಗಂಟೆ ಸುಮಾರಿಗೆ ‘ಶರಣಲೋಕ’ದಲ್ಲಿ ನೆರವೇರಿಸಲಾಯಿತು.

ಲಿಂಗಾಯತ ‘ಜಂಗಮ’ ಸಂಪ್ರದಾಯದ ಪ್ರಕಾರ ಕೂಡಲ ಸಂಗಮ ಪೀಠದ ಮಹಾದೇಶ್ವರ ಸ್ವಾಮಿ ಅಂತಿಮ ಕ್ರಿಯಾವಿಧಿವಿಧಾನ ನಡೆಸಿಕೊಟ್ಟರು. ಇದರೊಂದಿಗೆ ಬಸವ ಪರಂಪರೆಯ ಮೊದಲ ಮಹಿಳಾ ಜಗದ್ಗುರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಮಾತಾಜಿ ಇಷ್ಟಲಿಂಗದಲ್ಲಿ ಲೀನರಾದರು.

ಪ್ರತಿಜ್ಞೆ: ‘ನೀವು ತೋರಿಸಿಕೊಟ್ಟ ದಾರಿಯಲ್ಲಿಯೇ ಲಿಂಗಾಯತ ಸ್ವತಂತ್ರ ಧರ್ಮದ ಮನ್ನಣೆಗಾಗಿ ಹೋರಾಟ ಮುಂದುವರೆಸಲಿದ್ದೇವೆ. ಅದು ನಮ್ಮ ಬದುಕಿನ ಬದ್ಧತೆ’ ಎಂದು ಮಾತಾಜಿಯವರ ಕ್ರಿಯಾವಿಧಿಗೂ ಮುನ್ನ ರಾಷ್ಟ್ರೀಯ ಬಸವದಳ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾದ ಸದಸ್ಯರು ಪ್ರತಿಜ್ಞೆ ಸ್ವೀಕಾರ ಮಾಡಿದರು.

ಇದೇ ವೇಳೆ ಪೀಠದ ಉತ್ತರಾಧಿಕಾರಿ ಮಾತೆ ಗಂಗಾಂಬಿಕಾ ಅವರಿಗೆ ಚಿತ್ರದುರ್ಗ ಮುರುಘ ಮಠದ ಶಿವಮೂರ್ತಿ ಶರಣರು ರುದ್ರಾಕ್ಷಿಯ ಕಿರೀಟ ಹಾಕಿ, ಷಟ್ಸ್ಥಲಧ್ವಜ ನೀಡಿ ಪೀಠದ ಅಧಿಕಾರ ವಹಿಸಿಕೊಟ್ಟರು. ಅನಂತರ ಗೃಹ ಸಚಿವ ಎಂ.ಬಿ.ಪಾಟೀಲ್ ನೇತೃತ್ವದಲ್ಲಿ ಸರಕಾರಿ ಗೌರವ ಸಲ್ಲಿಸಲಾಯಿತು. ಪೊಲೀಸರು ಮೂರು ಸುತ್ತು ಕುಶಾಲ ತೋಪು ಹಾರಿಸಿದರು. ಆಶ್ರಮದ ಮಹಾಮನೆಯ ಪಕ್ಕದ ಬಯಲಿನಲ್ಲಿ ವೇದಿಕೆ ನಿರ್ಮಿಸಿ, ಮಾತಾಜಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ರಾಜ್ಯದ ವಿವಿಧೆಡೆ ಹಾಗೂ ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣದಿಂದ ಬಂದಿದ್ದ ಅನುಯಾಯಿಗಳು ಬೆಳಗ್ಗೆಯಿಂದಲೇ ಸಾಲುಗಟ್ಟಿ ದರ್ಶನ ಪಡೆದರು.

ಸಮಾಧಿ ಸ್ಥಳಕ್ಕೆ ತೆರಳುವ ಜಾಗ ಇಕ್ಕಟ್ಟಾಗಿದ್ದ ಕಾರಣ ಅಂತಿಮ ಕ್ರಿಯಾವಿಧಿ ವೇಳೆ ಭಕ್ತರಿಗೆ ಪ್ರವೇಶ ನಿರಾಕರಿಸಲಾಗಿತ್ತು. ನಾಲ್ಕು ಕಡೆ ಎಲ್ಇಡಿ ಪರದೆ ಅಳವಡಿಸಿ ಕ್ರಿಯಾ ಸಮಾಧಿಯ ವಿಧಿಗಳನ್ನು ವೀಕ್ಷಿಸಲು ವ್ಯವಸ್ಥ ಕಲ್ಪಿಸಲಾಗಿತ್ತು.

ರಾಜ್ಯದ ವಿವಿಧ ಮಠಗಳ ಮಠಾಧೀಶರು, ಸಚಿವ ಶಿವಾನಂದ ಪಾಟೀಲ, ಸಂಸದರಾದ ಪಿ.ಸಿ.ಗದ್ದಿಗೌಡರ, ಭಗವಂತ ಖೂಬಾ, ಶಾಸಕರಾದ ಲಕ್ಷ್ಮೀ ಹೆಬ್ಬಾಳ್ಕರ್, ದೊಡ್ಡನಗೌಡ ಪಾಟೀಲ, ಜಾಗತಿಕ ಲಿಂಗಾಯತ ಮಹಾಸಭಾದ ಎಸ್.ಜಾಮದಾರ, ಅಂಕಣಕಾರ ರಂಜಾನ್ ದರ್ಗಾ, ಮಾಜಿ ಸಚಿವ ವಿನಯ ಕುಲಕರ್ಣಿ, ಬಿ.ಆರ್. ಪಾಟೀಲ್ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News