ಚಿಕ್ಕಮಗಳೂರು: ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಬಲಿ

Update: 2019-03-16 16:59 GMT

ಚಿಕ್ಕಮಗಳೂರು, ಮಾ.25: ಕಾಡಾನೆ ದಾಳಿಯಿಂದಾಗಿ ಕೂಲಿ ಕಾರ್ಮಿಕನೊರ್ವ ಮೃತಪಟ್ಟಿರುವ ಘಟನೆ ತಾಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ ವರದಿಯಾಗಿದೆ.

ಮಲ್ಲೇನಹಳ್ಳಿ ಗ್ರಾಮದ ತೇಜ್‍ಪಾಲ್ ಎಂಬವರ ಕಾಫಿ ತೋಟಕ್ಕೆ ಕೂಲಿ ಕೆಲಸಕ್ಕೆ ಆಗಮಿಸಿದ್ದ ಮೂಡಿಗೆರೆ ತಾಲೂಕಿನ ಭಾರತಿಬೈಲ್ ಗ್ರಾಮದ ನಿವಾಸಿ ಪ್ರೇಮನಾಥ ರಾಜು(50)ಮೃತ ವ್ಯಕ್ತಿ ಎಂದು ತಿಳಿದು ಬಂದಿದೆ. ಕಾಡನೆ ದಾಳಿಯಿಂದಾಗಿ ಮಲ್ಲೇನಹಳ್ಳಿ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕದಲ್ಲಿದ್ದಾರೆ.

ತಾಲೂಕಿನ ಮಲ್ಲೇನಹಳ್ಳಿಯಲ್ಲಿರುವ ಬಿಂಡಿಗ ಎಸ್ಟೇಟ್ ಮಾತಲ ತೇಜ್‍ಪಾಲ್ ಎಂಬವರ ಕಾಫಿ ತೋಟದಲ್ಲಿ ಕಳೆದ ಹಲವು ವರ್ಷಗಳಿಂದ ಕೂಲಿ ಕಾರ್ಮಿಕನಾಗಿದ್ದ ಪ್ರೇಮನಾಥ ರಾಜು ಎಂದಿನಂತೆ ಶನಿವಾರ ಎಸ್ಟೇಟ್‍ನಲ್ಲಿ ಕೂಲಿ ಕೆಲಸ ಮುಗಿಸಿ ಸಂಜೆ ತೋಟದಲೈನ್ ಮನೆಗೆ ಆಗಮಿಸಿದ್ದರು. ನಂತರ ಸೌದೆ ತರಲೆಂದು ಕಾಫಿ ತೋಟಕ್ಕೆ ಒಬ್ಬರಢ ಹೋಗಿದ್ದಾರೆಂದು ತಿಳಿದು ಬಂದಿದ್ದು, ಈ ವೇಳೆ ತೋಟಕ್ಕೆ ದಾಳಿ ಮಾಡಿದ್ದ ಕಾಡಾನೆ ಏಕಾಏಕಿ ಕಾರ್ಮಿಕನ ಮೇಲೆ ಎರಗಿ ತುಳಿದು ಸಾಯಿಸಿದೆ ಎಂದು ತಿಳಿದು ಬಂದಿದೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಗ್ರಾಮಾಂತರ ಠಾಣೆಯ ಪೊಲೀಸರು ಹಾಗೂ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಮಲ್ಲೇನಹಳ್ಳಿ ಭಾಗದಲ್ಲಿ ಭದ್ರಾ ಅಭಯಾರಣ್ಯದಿಂದ ಕಾಡಾನೆಗಳು ಆಗಾಗ್ಗೆ ದಾಳಿ ಮಾಡುತ್ತಿದ್ದು, ಇತ್ತೀಚೆಗಷ್ಟೆ ಶುಂಠಿ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವನ ಮೇಲೆ ಕಾಡಾನೆ ದಾಳಿ ಮಾಡಿ ಕೊಂದು ಹಾಕಿದ ಘಟನೆ ಬೆನ್ನಲ್ಲೆ ಶನಿವಾರ ಮತ್ತೊಂದು ಘಟನೆ ನಡೆದಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಕಾಡಾನೆ ಬೀತಿಯಿಂದಾಗಿ ಆತಂಕಕ್ಕೊಳಗಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News