ಐಪಿಎಲ್ 2019: 200 ಸಿಕ್ಸರ್‌ಗಳ ಸ್ಪರ್ಧೆಯಲ್ಲಿ ರೋಹಿತ್, ಧೋನಿ, ರೈನಾ

Update: 2019-03-16 18:14 GMT

ಹೊಸದಿಲ್ಲಿ, ಮಾ.16: ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಮೂವರು ದಾಂಡಿಗರಾದ ರೋಹಿತ್ ಶರ್ಮಾ, ಸುರೇಶ್ ರೈನಾ ಹಾಗೂ ಮಹೇಂದ್ರಸಿಂಗ್ ಧೋನಿ 200 ಸಿಕ್ಸರ್‌ಗಳನ್ನು ತಲುಪುವ ಹಾದಿಯಲ್ಲಿದ್ದಾರೆ.

ಭಾರತ ತಂಡದ ಮಾಜಿ ನಾಯಕ ಧೋನಿ ತಮ್ಮ ಬಳಿ ಸದ್ಯ 186 ಸಿಕ್ಸರ್‌ಗಳನ್ನು ಹೊಂದಿದ್ದು, ಐಪಿಎಲ್‌ನಲ್ಲಿ ಗರಿಷ್ಠ ಸಿಕ್ಸರ್ ಬಾರಿಸಿದವರ ಒಟ್ಟಾರೆ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಐಪಿಎಲ್‌ನಲ್ಲಿ ಗರಿಷ್ಠ ರನ್ ಸ್ಕೋರರ್ ಆಗಿರುವ ಸುರೇಶ್ ರೈನಾ ಸಿಕ್ಸರ್‌ಗಳ(185)ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇನ್ನು ‘ಹಿಟ್‌ಮ್ಯಾನ್’ ಎಂದೇ ಹೆಸರಾದ ಭಾರತ ತಂಡದ ಉಪನಾಯಕ ರೋಹಿತ್ ಶರ್ಮಾ ಗರಿಷ್ಠ ಸಿಕ್ಸರ್‌ಗಳ(184) ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. ಮುಂಬರುವ ಲೀಗ್‌ನಲ್ಲಿ ಈ ಮೂವರು ಆಟಗಾರರು ಐಪಿಎಲ್‌ನಲ್ಲಿ 200 ಸಿಕ್ಸರ್ ಬಾರಿಸಿದ ಮೊದಲ ಭಾರತೀಯ ಎನಿಸಿಕೊಳ್ಳುವ ರೇಸ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಆದಾಗ್ಯೂ ‘‘ಸಿಕ್ಸರ್‌ಗಳ ಕಿಂಗ್’’ ಎಂದೇ ಹೆಸರಾದ ವಿಂಡೀಸ್‌ನ ದೈತ್ಯ ಕ್ರಿಕೆಟಿಗ ಕ್ರಿಸ್ ಗೇಲ್ 292 ಸಿಕ್ಸರ್ ಬಾರಿಸಿ ಐಪಿಎಲ್‌ನಲ್ಲಿ ಗರಿಷ್ಠ ಸಿಕ್ಸರ್ ಬಾರಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿದ್ದಾರೆ. ದ.ಆಫ್ರಿಕದ ವಿಕೆಟ್ ಕೀಪರ್ ದಾಂಡಿಗ ಎಬಿ ಡಿವಿಲಿಯರ್ಸ್ 186 ಸಿಕ್ಸರ್‌ಗಳೊಂದಿಗೆ ಗೇಲ್ ನಂತರದ ಸ್ಥಾನ ಅಲಂಕರಿಸಿದ್ದಾರೆ. ಧೋನಿ ಹಾಗೂ ವಿಲಿಯರ್ಸ್ ಸಮಾನ ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಬಹುನಿರೀಕ್ಷಿತ ಐಪಿಎಲ್ ಮಾ.23ರಿಂದ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಬೆಂಗಳೂರು ರಾಯಲ್ ಚಾಲೆಂಜರ್ಸ್‌ನ್ನು ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News