ಅಂಡರ್-17 ಮಹಿಳಾ ವಿಶ್ವಕಪ್‌ ಫುಟ್ಬಾಲ್ ಆತಿಥ್ಯ ಭಾರತಕ್ಕೆ

Update: 2019-03-16 18:21 GMT

ಹೊಸದಿಲ್ಲಿ, ಮಾ.16: 2020ರಲ್ಲಿ ನಡೆಯುವ ಅಂಡರ್-17 ಮಹಿಳಾ ವಿಶ್ವಕಪ್‌ನ ಆತಿಥ್ಯವನ್ನು ಭಾರತ ವಹಿಸಲಿದೆ ಎಂದು ಅಂತರ್‌ರಾಷ್ಟ್ರೀಯ ಫುಟ್ಬಾಲ್ ಸಂಸ್ಥೆಯ(ಫಿಫಾ) ಅಧ್ಯಕ್ಷ ಗಿಯಾನ್ನಿ ಇನ್ಫಾಂಟಿನೊ ಶುಕ್ರವಾರ ಪ್ರಕಟಿಸಿದ್ದಾರೆ.

ಅಮೆರಿಕದ ಮಿಯಾಮಿಯಲ್ಲಿ ನಡೆದ ಫಿಫಾ ಕೌನ್ಸಿಲ್ ಸಭೆಯಲ್ಲಿ ಮಾತನಾಡಿದ ಅವರು ‘‘2020ರ ಫಿಫಾ ಅಂಡರ್-17 ಮಹಿಳಾ ವಿಶ್ವಕಪ್ ಆತಿಥ್ಯವನ್ನು ವಹಿಸಿಕೊಳ್ಳುವುದನ್ನು ಭಾರತ ದೃಢಪಡಿಸಿದ್ದು ಸಂತೋಷ ತಂದಿದೆ’’ ಎಂದು ತಿಳಿಸಿದ್ದಾರೆ.

2017ರಲ್ಲಿ ಅಂಡರ್-17 ಪುರುಷರ ವಿಶ್ವಕಪ್ ಆಯೋಜಿಸಿದ್ದ ಭಾರತ ಈಗ ಎರಡನೇ ಬಾರಿ ಫಿಫಾ ಟೂರ್ನಿಯನ್ನು ಆಯೋಜಿಸಲು ಸಿದ್ಧಗೊಳ್ಳಲಿದೆ.

ಟೂರ್ನಿಯ ಆತಿಥ್ಯವನ್ನು ದೃಢಪಡಿಸಿರುವ ಅಖಿಲ ಭಾರತ ಫುಟ್ಬಾಲ್ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕುಶಾಲ್ ದಾಸ್ ಪಿಟಿಐಗೆ ಪ್ರತಿಕ್ರಿಯಿಸಿ ‘‘ಟೂರ್ನಿಯ ಆತಿಥ್ಯದ ಅಧಿಕಾರವನ್ನು ನೀಡಿದ ಫಿಫಾಗೆ ಧನ್ಯವಾದ. ಇದು ದೇಶದಲ್ಲಿ ಮಹಿಳಾ ಫುಟ್ಬಾಲ್‌ನ ಬೆಳವಣಿಗೆಗೆ ಅನುಕೂಲವಾಗಲಿದೆ’’ ಎಂದಿದ್ದಾರೆ. ಈ ಮಹಾ ಟೂರ್ನಿಯನ್ನು ಆಯೋಜಿಸುವುದಕ್ಕೆ ಸ್ಥಳ ನಿರ್ಧಾರವನ್ನು ಶೀಘ್ರವೇ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

 16 ತಂಡಗಳು ಭಾಗವಹಿಸುವ ಟೂರ್ನಿಗೆ ಆತಿಥೇಯ ದೇಶವಾಗಿರುವ ಭಾರತ ಸ್ವಯಂ ಅರ್ಹತೆ ಪಡೆದಿದೆ. ಮಹಿಳಾ ಅಂಡರ್-17 ವಿಶ್ವಕಪ್ ಹೊರತುಪಡಿಸಿ ಅಂಡರ್-20 ವನಿತಾ ಫುಟ್ಬಾಲ್ ವಿಶ್ವಕಪ್ ಆಯೋಜಿಸಲು ಭಾರತ ತನ್ನ ಆಸಕ್ತಿ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News