ಬಿಜೆಪಿ, ಸುಮಲತಾ ವಿರುದ್ಧ ಶಾಸಕ ಸುರೇಶ್‍ ಗೌಡ ವಾಗ್ದಾಳಿ: ಮುಂದುವರೆದ ನಿಖಿಲ್ ಟೆಂಪಲ್ ರನ್

Update: 2019-03-16 18:32 GMT

ಮಂಡ್ಯ, ಮಾ.16: ಬಿಜೆಪಿಗೆ ಕ್ಷೇತ್ರದಲ್ಲಿ ಅಭ್ಯರ್ಥಿ ಸಿಗದ ಕಾರಣ ಬೇರೆ ಯಾರನ್ನೋ ಪಕ್ಷಕ್ಕೆ ಕರೆತರಲು ಮುಂದಾಗಿದ್ದಾರೆ ಎಂದು ಬಿಜೆಪಿ ನಾಯಕರು ಮತ್ತು ಸುಮಲತಾ ಅಂಬರೀಶ್ ವಿರುದ್ಧ ನಾಗಮಂಗಲ ಶಾಸಕ ಕೆ.ಸುರೇಶ್‍ಗೌಡ ವಾಗ್ದಾಳಿ ನಡೆಸಿದ್ದಾರೆ. 

ಕಾಂಗ್ರೆಸ್-ಜೆಡಿಎಸ್ ಮೈತ್ರಿ ನಿಯೋಜಿತ ಅಭ್ಯರ್ಥಿ ನಿಖಿಲ್ ಜತೆ ಕೊಪ್ಪ, ಆಬಲವಾಡಿಯಲ್ಲಿ ಶನಿವಾರ ಮತಪ್ರಚಾರ ನಡೆಸಿದ ಅವರು, ನಮ್ಮ ಮಿತ್ರ ಪಕ್ಷದ ಬಗ್ಗೆ ನಮಗೆ ಯಾವುದೇ ಬೇಸರವಿಲ್ಲ. ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಸ್ಪರ್ಧೆ ಮಾಡಲಿದ್ದಾರೆ ಎಂದರು.

ಸೈನಿಕರ ಹೋರಾಟವನ್ನು ಬಿಜೆಪಿ ಚುನಾವಣೆಗೆ ಬಳಸಿಕೊಳ್ಳುತ್ತಿದೆ. ಪ್ರಧಾನಿ ಮೋದಿ ಅವರಿ ಯಾವುದೇ ಕೆಲಸ ಮಾಡಿಲ್ಲ. ಅವರೊಬ್ಬ ಬರೀ ಭಾಷಣಕಾರ ಅಷ್ಟೇ. ರಾಜ್ಯದ ಬಜೆಟ್ ಮಂಡ್ಯ ಬಜೆಟ್ ಅನ್ನೋ ಇವರು ಈಗ ಮಂಡ್ಯ ಕ್ಷೇತ್ರದ ಮೇಲೆ ಪ್ರೀತಿ ಇಟ್ಟಿದ್ದಾರೆ ಎಂದು ಟೀಕಿಸಿದರು.

ರಮ್ಯಾ ಚುನಾವಣೆಗೆ ನಿಂತಾಗ ಅವರ ಸೋಲಿಗೆ ಕಾರಣವಾದವರ ಮನೆಯವರು ನಿಖಿಲ್ ಕುಮಾರಸ್ವಾಮಿ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ನಾವು ಅವರನ್ನು ಆಂಧ್ರಪ್ರದೇಶ, ತಮಿಳುನಾಡಿನಿಂದ ಕರೆದು ತಂದಿಲ್ಲ. ಪಕ್ಕದ ಹಾಸನದಿಂದ ಕರೆ ತಂದಿದ್ದೇವೆ ಎಂದು ಅವರು ಪರೋಕ್ಷವಾಗಿ ಸುಮಲತಾ ಅವರಿಗೆ ಟಾಂಗ್ ನೀಡಿದರು.

ಸಂಸದ ಎಲ್.ಆರ್.ಶಿವರಾಮೇಗೌಡ ಮಾತನಾಡಿ, ನಿಖಿಲ್ ಅಭ್ಯರ್ಥಿಯಾಗಿರುವುದು ದೇವೇಗೌಡ, ಕುಮಾರಸ್ವಾಮಿ ತೀರ್ಮಾನದಿಂದ ಅಲ್ಲ. ನಮ್ಮ ಪಕ್ಷದಲ್ಲಾದ ತೀರ್ಮಾನದ ಪ್ರಕಾರ ನಿಖಿಲ್ ಅವರನ್ನು ಅಭ್ಯರ್ಥಿ ಮಾಡಿದ್ದೇವೆ ಎಂದರು.

ನಮ್ಮ ಜಿಲ್ಲೆಯಿಂದ ಸಿಎಂ ಆಗಿದ್ದ ಎಸ್.ಎಂ.ಕೃಷ್ಣ, ಯಡಿಯೂರಪ್ಪ ಅವರವರ ಹಂತಕ್ಕೆ ಅವರವರ ಯೋಗ್ಯತೆಗೆ ತಕ್ಕಂತೆ ಕೆಲಸ ಮಾಡಿದ್ದಾರೆ. ಆದರೆ, ಮಂಡ್ಯ ಜಿಲ್ಲೆಯಲ್ಲಿ 250ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಾಗ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದು ಕುಮಾರಸ್ವಾಮಿ. ಇವತ್ತು ಬಣ್ಣ ಬಣ್ಣದ ಸೋಗು ಹಾಕಿಕೊಂಡು ಬಂದವರಲ್ಲ ಎಂದು ಸುಮಲತಾ ಅವರನ್ನು ಟೀಕಿಸಿದರು.

ಸಚಿವ ಡಿ.ಸಿ.ತಮ್ಮಣ್ಣ ಮಾತನಾಡುತ್ತಾ, ಶಿವರಾಮೇಗೌಡರು ದೊಡ್ಡ ಮನಸ್ಸಿನಿಂದ ನಿಖಿಲ್‍ರನ್ನು ಕ್ಷೇತ್ರಕ್ಕೆ ಬರಮಾಡಿಕೊಂಡಿದ್ದಾರೆ. ನಾನು ಯಾವ ಪಕ್ಷಕ್ಕೆ ಹೋದರೂ ನನ್ನನ್ನು ಬೆಂಬಲಿಸಿದ್ದೀರ. ಮಹಿಳೆಯರು ಮಹಿಳೆಯ ಕಣ್ಣೀರಿಗೆ ಮರುಳಾಗದೆ ನಿಖಿಲ್ ಬೆಂಬಲಿಸುವಂತೆ ಮನವಿ ಮಾಡಿದರು.

ನಿಖಿಲ್ ಮಾತನಾಡಿ, ಶಾಸಕರ ಒತ್ತಾಯದ ಮೇರೆಗೆ ಪಕ್ಷ ನನಗೆ ಟಿಕೆಟ್ ನೀಡಿದೆ. ನಿಮ್ಮ ಸೇವೆ ಮಾಡೋ ಅವಕಾಶ ಕೊಡುವಿರೆಂದು ಇಲ್ಲಿಗೆ ಬಂದಿದ್ದೇನೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ರಾಮನ ಪಾತ್ರ ಕೊಟ್ಟರೂ ಮಾಡುತ್ತೇನೆ, ನಕುಲನ ಪಾತ್ರ ಕೊಟ್ಟರೂ ಮಾಡುತ್ತೇನೆ. ಕೊನೆಯುಸಿರು ಇರೋವರೆಗೋ ನಿಮ್ಮ ಜೊತೆ ಇರುತ್ತೇನೆ ಎಂದರು.

ಪ್ರಚಾರದ ವೇಳೆ ತನ್ನ ಟೆಂಪಲ್ ರನ್ ಮುಂದುವರಿಸಿದ ನಿಖಿಲ್ ಕೊಪ್ಪ ಗ್ರಾಮದ ಪಟ್ಟಲದಮ್ಮ ಹಾಗೂ ಆಬಲವಾಡಿಯ ತೋಪಿನ ತಿಮ್ಮಪ್ಪ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸಿದರು.

ಶಾಸಕರಾದ ಕೆ.ಟಿ.ಶ್ರೀಕಂಠೇಗೌಡ, ಅಪ್ಪಾಜಿಗೌಡ, ಜಿಲ್ಲಾ ಪಂಚಾಯತ್ ಸದಸ್ಯರಾದ ರೇಣುಕಾಮ್ಮ, ಮರಿಹೆಗಡೆ, ಬೋರಯ್ಯ, ತಾಲೂಕು ಪಂಚಾಯತ್ ಅಧ್ಯಕ್ಷೆ ಜಯಲಕ್ಷ್ಮಿ ಜಯರಾಮು, ಮೈಸೂರು ಜೆಡಿಎಸ್ ವೀಕ್ಷಕ ಸಾದೊಳಲು ಸ್ವಾಮಿ, ಮುಖಂಡರಾದ ಡಿ.ಟಿ. ಸಂತೋಷ್ ನೆಲ್ಲಿಗೆರೆ ಬಾಲು, ಚಿಕ್ಕಂಕನಹಳ್ಳಿ ಮನು ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News