ಕಾಡಿಗೆ ಬೆಂಕಿ: ಯುವಕರಿಬ್ಬರ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

Update: 2019-03-16 18:59 GMT

ಮೂಡಿಗೆರೆ, ಮಾ.15: ಅಪರಿಚಿತ ಕಿಡಿಗೇಡಿಗಳು ಗುಡ್ಡವೊಂದರ ಕಾಡಿಗೆ ಹಚ್ಚಿದ್ದ ಬೆಂಕಿಯನ್ನು ಸ್ಥಳೀಯ ಯುವಕರಿಬ್ಬರು ಸೊಪ್ಪು ಬಳಸಿ ನಂದಿಸಿದ್ದಲ್ಲದೇ ಗುಡ್ಡದ ಇಳಿಜಾರಿನಲ್ಲಿದ್ದ ಸ್ಥಳೀಯರ ನೂರಾರು ಎಕರೆ ಕಾಫಿ ತೋಟಕ್ಕೆ ಬೆಂಕಿ ಬೀಳುವುದನ್ನು ತಪ್ಪಿಸಿರುವ ಘಟನೆ ಶನಿವಾರ ನಡೆದಿದೆ.

ತಾಲೂಕಿನ ಕಿರುಗುಂದ ಗ್ರಾಪಂ ವ್ಯಾಪ್ತಿಯಲ್ಲಿರುವ ಪ್ರವಾಸಿ ತಾಣ ಗವಿಗುಡ್ಡ ಎಂಬಲ್ಲಿ ಶನಿವಾರ ಅಪರಿಚಿತ ಕಿಡಿಗೇಡಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದರೆನ್ನಲಾಗಿದ್ದು, ಬೆಂಕಿಯ ಕೆನ್ನಾಲಿಗೆಗೆ ಸಿಕ್ಕ ಗವಿಗುಡ್ಡದ ಕುರುಚಲು ಕಾಡು ಕ್ಷಣದಲ್ಲೇ ಹೊತ್ತಿ ಉರಿದಿದೆ. ಈ ವೇಳೆ ಸಮೀಪದ ನಿವಾಸಿಗಳಾದ ಮನು, ಆಕಾಶ್ ಎಂಬ ಯುವಕರು ಗವಿಗುಡ್ಡದಲ್ಲಿ ಧಟ್ಟ ಹೊಗೆಯೊಂದಿಗೆ ಉರಿಯುತ್ತಿದ್ದ ಬೆಂಕಿಯನ್ನು ಕಂಡು ಸ್ಥಳಕ್ಕೆ ದೌಡಾಯಿಸಿದ್ದಾರೆ. ಕೂಡಲೆ ಸೊಪ್ಪಿನ ಸಹಾಯದಿಂದ ಬೆಂಕಿಯನ್ನು ನಂದಿಸಿದ್ದಾರೆಂದು ತಿಳಿದು ಬಂದಿದೆ.

ಗವಿಗುಡ್ಡದ ಅಕ್ಕಪಕ್ಕದಲ್ಲಿ ಸ್ಥಳೀಯರ ಕಾಫಿ ತೋಟಗಳಿದ್ದು ಬೆಂಕಿ ನಂದಿಸದಿದ್ದಲ್ಲಿ ಬೆಂಕಿಯ ಕೆನ್ನಾಲಿಗೆ ಕಾಫಿತೋಟಗಳಿಗೂ ಹರಡಿ ಕೋಟ್ಯಾಂತರ ಮೌಲ್ಯದ ಕಾಫಿತೋಟಗಳು ಬೆಂಕಿಗೆ ಆಹುತಿಯಾಗುತ್ತಿತ್ತು. ಅಪಾರ ಪ್ರಮಾಣದಲ್ಲಿ ಅರಣ್ಯವೂ ನಾಶವಾಗುತ್ತಿತ್ತು. ಅಗ್ನಿಶಾಮಕ ದಳದವರಿಗೆ ಹೇಳಿದ್ದರೂ ಗುಡ್ಡಕ್ಕೆ ಹೋಗಲು ರಸ್ತೆಗಳಿಲ್ಲವಾದ್ದರಿಂದ ಪ್ರಯೋಜನವಾಗುತ್ತಿರಲಿಲ್ಲ. ಅರಣ್ಯ ಇಲಾಖೆಗೆ ಹೇಳಿದ್ದರೂ ಅವರು ಬರುವಷ್ಟರಲ್ಲಿ ಕಾಫಿ ತೋಟಕ್ಕೆ ಬೆಂಕಿ ಹರಡುತ್ತಿತ್ತು. ಸ್ಥಳೀಯರಾದ ಆಕಾಶ್ ಹಾಗೂ ಮನು ಅವರ ಸಮಯ ಪ್ರಜ್ಞೆಯಿಂದ ಕಾಫಿ ತೋಟ ಹಾಗೂ ಗವಿಗುಡ್ಡದ ಕಾಡು ಬೆಂಕಿಗೆ ಆಹುತಿಯಾಗುವುದು ತಪ್ಪಿದೆ ಎಂದು ಕಿರುಗುಂದ ನಿವಾಸಿ ನಝೀರ್ ಪತ್ರಿಕೆಗೆ ತಿಳಿಸಿದ್ದಾರೆ.

ಕಿರುಗುಂದ ಗ್ರಾಮದಲ್ಲಿರುವ ಗವಿಗುಡ್ಡ ಪ್ರವಾಸಿ ತಾಣವಾಗಿದ್ದು, ಇಲ್ಲಿ ಪುರಾತನ ಕಾಲದ ರಾಮೇಶ್ವರ ದೇವಾಲಯವಿದೆ. ಗುಡ್ಡದಲ್ಲಿ ಗುಹೆಯೊಂದಿದ್ದು, ಇದು ಬಾಬಾ ಬುಡನ್‍ಗಿರಿ ವರೆಗೆ ವ್ಯಾಪಿಸಿದೆ ಎಂಬ ಪ್ರತೀತಿ ಇದೆ. ಈ ಕಾರಣಕ್ಕೆ ಇಲ್ಲಿಗೆ ನೂರಾರು ಮಂದಿ ಪ್ರವಾಸಕ್ಕೆ ಬರುತ್ತಾರೆ. ಶವಿವಾರ ಪ್ರವಾಸಕ್ಕೆ ಬಂದ ಕಿಡಿಗೇಡಿಗಳು ಗುಡ್ಡಕ್ಕೆ ಬೆಂಕಿ ಹಚ್ಚಿರಬಹುದೆಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದು, ಬೆಂಕಿ ನಂದಿಸಿದ ಇಬ್ಬರು ಯುವಕರ ಸಮಯ ಪ್ರಜ್ಷೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News