ದಲಿತರ ಆಸ್ತಿ ಕಬಳಿಸಿದ ಸಂಸದ ಮುನಿಯಪ್ಪರಿಂದ ಅಂಬೇಡ್ಕರ್ ಗೆ ಅಪಮಾನ: ಸಿ.ಎಂ ಮುನಿಯಪ್ಪ ಆರೋಪ

Update: 2019-03-16 19:08 GMT

ಕೋಲಾರ,ಮಾ.16: ಕೆ.ಹೆಚ್.ಮುನಿಯಪ್ಪ ತಮ್ಮದೇ ಸಮುದಾಯದ ಜನರ ಭೂಮಿಯನ್ನು ಕಬಳಿಸಿ, ಅಂಬೇಡ್ಕರ್ ಆಶಯಗಳಿಗೆ ಹಾಗೂ ಅಂಬೇಡ್ಕರ್ ಗೆ ಅಪಮಾನವೆಸಗಿದ್ದಾರೆ ಎಂದು ದಲಿತ ಸಂಘಟನೆಗಳ ಒಕ್ಕೂಟದ ಹಿರಿಯ ನಾಯಕ ಸಿ.ಎಂ.ಮುನಿಯಪ್ಪ ಆರೋಪಿಸಿದ್ದಾರೆ. 

ಇಂದು ನಗರದ ಪತ್ರಕರ್ತರ ಭವನದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೀಸಲಾತಿ ಅಡಿಯಲ್ಲಿ ಅಧಿಕಾರಕ್ಕೆ ಬಂದ ಮುನಿಯಪ್ಪ, ಅಧಿಕಾರ ದುರುಪಯೋಗ ಮಾಡಿಕೊಂಡು ಜಿಲ್ಲೆಯ ದಲಿತರ ಆಶೋತ್ತರಗಳಿಗೆ ಸ್ಪಂದಿಸದೆ, ತಮ್ಮ ಕುಟುಂಬದ ಸದಸ್ಯರ ಹೆಸರಿನಲ್ಲಿ ಸರ್ಕಾರಿ ಭೂಮಿಯನ್ನು ಕಬಳಿಸಿದ್ದಾರೆ ಎಂದು ದೂರಿದರು. ಮಾದಿಗರ ಶ್ರೇಯೋಭಿವೃದ್ಧಿಗಾಗಿ ಸದಾಶಿವ ಆಯೋಗ ವರದಿಯನ್ನು ಅನುಷ್ಠಾನಕ್ಕೆ ಒತ್ತಾಯಿಸುವ ಸಂಸದರು, ಬೆಂಗಳೂರಿನ ಯಲಹಂಕದ ಬಳಿಯ ಮಂಚೇನಹಳ್ಳಿಯ ತಮ್ಮದೇ ಮಾದಿಗ ಸಮುದಾಯ ಸುಮಾರು 50ಕ್ಕೂ ಹೆಚ್ಚು ಕುಟುಂಬಗಳ ಆಸ್ತಿಗಳನ್ನು ಗೂಂಡಾಗಳನ್ನು ಬಿಟ್ಟು ತಮ್ಮ ಚಿಕ್ಕ ಅಳಿಯ ಹಾಗೂ ಮುಳಬಾಗಿಲಿನ ತಮ್ಮ ಆಪ್ತ ಕೆ.ವಿ.ರಾಮಪ್ರಸಾದ್ ಅವರ ಹೆಸರಿಗೆ ಕ್ರಮ ಮಾಡಿಸಿಕೊಂಡಿದ್ದಾರೆ ಎಂದು ದೂರಿದರು. 

ಸ್ವಾರ್ಥಕ್ಕಾಗಿ ಅಧಿಕಾರಕ್ಕಾಗಿ ಹವಣಿಸುವ ಮುನಿಯಪ್ಪನವರನ್ನು 2019ರ ಲೋಕಸಭಾ ಚುನಾವಣೆಯಲ್ಲಿ ಸೋಲಿಸಲು ಮನೆ ಮನೆಗೆ ತೆರಳಿ ಅವರ ಅಕ್ರಮಗಳನ್ನು ಜನರಿಗೆ ತಿಳಿಸಲಾಗುವುದು ಎಂದ ಅವರು, ಕೋಲಾರ ಜಿಲ್ಲಾಧಿಕಾರಿಗಳು ದೂರು ಕೊಟ್ಟರೆ ಮಾತ್ರ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಆದರೆ, ಸರ್ಕಾರಿ ಆಸ್ತಿ ಉಳಿಸುವುದು ಜಿಲ್ಲಾಧಿಕಾರಿಗಳ ಜವಾಬ್ದಾರಿಯಾಗಿದೆ. ಅವರು ಕೂಡಲೇ ಈ ಕುರಿತು ಗಮನ ಹರಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. 

ಹಿರಿಯ ದಲಿತ ಮುಖಂಡ ಶ್ರೀಕೃಷ್ಣ ಮಾತನಾಡಿ, ಸದಾಶಿವ ಆಯೋಗ ರಚನೆಗೆ ಮುಖ್ಯ ಕಾರಣಕರ್ತರಾದ ಕೆ.ಹೆಚ್.ಮುನಿಯಪ್ಪ ಪರಿಶಿಷ್ಠ ಜಾತಿಗಳ ಮದ್ಯೆ ಹುಳಿ ಇಂಡುವ ಮೂಲಕ ಆಂತರಿಕವಾಗಿ ಜಾತಿಜಾತಿಗಳಿಗೆ ಜಗಳವಿಟ್ಟು ತಮ್ಮ ಸ್ವಾರ್ಥ ಸಾಧಿಸಿಕೊಂಡಿದ್ದಾರೆ ಎಂದು ಕಿಡಿಕಾರಿದರು.

ಕೆ.ಹೆಚ್.ಮುನಿಯಪ್ಪ ವಿರೋಧಿ ಆಂದೋಲನದ ಮುಖಂಡರ ಜೊತೆ ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಇದ್ದಾರಲ್ಲಾ ಎಂಬ ಸುದ್ಧಿಗಾರರ ಪ್ರಶ್ನೆಗೆ ಉತ್ತರಿಸಿದ ದಲಿತ ಮುಖಂಡ ಮು.ತಿಮ್ಮಯ್ಯ, ಜಾತಿ ಪ್ರಮಾಣ ಪತ್ರ ದುರುಪಯೋಗ ಮಾಡಿಕೊಂಡ ಕೊತ್ತೂರು ಮಂಜುನಾಥ್ ವಿರುದ್ಧ ಹೋರಾಟ ಮಾಡಿದ್ದೇವೆ. ಅದಕ್ಕೆ ನ್ಯಾಯಾಲಯದಲ್ಲಿ ಜಯ ಸಿಕ್ಕಿದೆ. ಕೊತ್ತೂರು ಮಂಜುನಾಥ್ ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದರೆ ನಮ್ಮದೇನು ವಿರೋಧವಿಲ್ಲ. ಒಂದು ವೇಳೆ ಅವರು ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ನಮ್ಮ ಹೋರಾಟ ಮುಂದುವರೆಸಲಾಗುತ್ತದೆ ಎಂದು ತಿಳಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಹಿರಿಯ ದಲಿತ ಮುಖಂಡ ಟಿ.ವಿಜಯಕುಮಾರ್, ಬಂಡೂರು ನಾರಾಯಣಸ್ವಾಮಿ, ವಾಲ್ಮೀಕಿ ಅಂಬರೀಶ್, ವಕ್ಕಲೇರಿ ರಾಜಪ್ಪ, ವರದೇನಹಳ್ಳಿ ವೆಂಕಟೇಶ್, ಮಾರ್ಜೇನಹಳ್ಳಿ ಬಾಬು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News