ಚುನವಾವಣೆಗೆ ಸ್ಪರ್ಧಿಸುವುದು ಖಚಿತ: ಸುಮಲತಾ ಅಂಬರೀಷ್

Update: 2019-03-17 15:35 GMT

ಮಂಡ್ಯ, ಮಾ.17:ಚುನವಾವಣೆಗೆ ಸ್ಪರ್ಧಿಸುವುದು ಖಚಿತವೆಂದು ಪುನರುಚ್ಚರಿಸಿರುವ ಸುಮಲತಾ ಅಂಬರೀಷ್, ಈ ಹಿಂದೆಯೇ ಘೋಷಿಸಿರುವಂತೆ ನಾಳೆ(ಮಾ.18) ಬೆಂಗಳೂರಿನಲ್ಲಿ ರಾಜಕೀಯ ಬೆಳವಣಿಗೆಗಳ ಬಗ್ಗೆ ತನ್ನ ನಿಲುವು ಏನೆಂಬುದನ್ನು ಬಹಿರಂಗಪಡಿಸುವುದಾಗಿ ತಿಳಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಜಿಲ್ಲಾದ್ಯಂತ ಪ್ರವಾಸ ಕೈಗೊಂಡು ಜನಾಭಿಪ್ರಾಯ ಸಂಗ್ರಹಿಸುತ್ತಿರುವ ಅವರು, ರವಿವಾರ ಮಂಡ್ಯ ನಗರದ ಲಕ್ಷ್ಮೀ ಜನಾರ್ಧನಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಕಾಂಗ್ರೆಸ್ ಮುಖಂಡರ ಭೇಟಿ ಕಾರ್ಯಕ್ರಮವನ್ನು ಮುಂದುವರಿಸಿದರು.

ಅಂಬರೀಷ್ ಅಭಿಮಾನಿಗಳು, ಕಾರ್ಯಕರ್ತರೊಂದಿಗೆ ಪ್ರವಾಸ ಕೈಗೊಂಡಿರುವ ಅವರು, ಸುಪ್ರಸಿದ್ಧ ಮೇಲುಕೋಟೆ ವೈರಮುಡಿ ಮಹೋತ್ಸವಕ್ಕೆ ನಗರದಿಂದ ತೆಗೆದುಕೊಂಡು ಹೋಗುತ್ತಿದ್ದ ವೈರಮುಡಿ ಕಿರೀಟಕ್ಕೂ ವಿಶೇಷ ಪೂಜೆ ಸಲ್ಲಿಸಿದರು.

18ರಂದು ರಾಜಕೀಯ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸುವುದಾಗಿ ಈಗಾಗಲೇ ಘೋಷಿಸಿದ್ದೇನೆ. ಸ್ಪರ್ಧಿಸುವುದು ಖಚಿತವಿದ್ದರೂ ಆ ನಿಟ್ಟಿನಲ್ಲಿ ಜನರು ನೀಡಿರುವ ಅಭಿಪ್ರಾಯದ ಬಗ್ಗೆಯೂ ನಡೆಸಿದ ಪರಾಮರ್ಶೆಯ ಫಲಶೃತಿಯನ್ನೂ ಹಂಚಿಕೊಳ್ಳುವ ಇಚ್ಚೆ ಹೊಂದಿದ್ದೇನೆ ಎಂದರು.

ಚುನಾವಣಾ ಸ್ಪರ್ಧೆ ಹಾಗೂ ಸ್ನೇಹಕ್ಕೂ ಸಂಬಂಧವಿಲ್ಲ. ಪುತ್ರ ಅಭಿಷೇಕ್ ಹಾಗೂ ನಿಖಿಲ್ ಸ್ನೇಹಿತರು. ಚುನಾವಣೆಯಾಚೆಗೂ ಅವರ ಸ್ನೇಹ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.

ರೈತರ ಸಮಸ್ಯೆ ಬಗ್ಗೆ ರೈತರೆ ಮಾಹಿತಿ ನೀಡಿದ್ದನ್ನು ನಾನು ಪೋಸ್ಟ್ ಮಾಡಿದ್ದೆ. ಯಾರನ್ನೂ ಟಾರ್ಗೆಟ್ ಮಾಡಿ ಪೋಸ್ಟ್ ಮಾಡಿಲ್ಲ. ನಾವು ಹಿರಿಯರಿಗೆ ಗೌರವ ಕೊಡುತ್ತೇವೆ. ಯಾರಿಗೂ ನೋವು ತರುವ ಉದ್ದೇಶ ಇದರಲ್ಲಿಲ್ಲ ಎಂದರು.

ನಾನು ಒಂಟಿಯಾಗಿಲ್ಲ. ನಮ್ಮ ಜೊತೆ ಅಭಿಮಾನಿಗಳು ಇದ್ದಾರೆ. ಬಿಜೆಪಿ ಬೆಂಬಲ ಕೊಡುವ ಬಗ್ಗೆ ಅಧಿಕೃತವಾಗಿ ಹೇಳಿಲ್ಲ. ಮಾಜಿ ಸಂಸದ ಜಿ.ಮಾದೇಗೌಡರು ಬೆಂಬಲ ನೀಡುವ ವಿಶ್ವಾಸ ಇದೆ ಎಂದು ಅವರು ಹೇಳಿದರು.

ಮಂಡ್ಯದಲ್ಲಿ ಕಾಂಗ್ರೆಸ್ ತೀರ್ಮಾನದ ಪರಿಣಾಮ ಮೈಸೂರಿನಲ್ಲಿ ಎದುರಿಸಬೇಕಾಗುತ್ತದೆಂಬ ಸಚಿವ ಸಾ.ರಾ.ಮಹೇಶ್ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಚಲುವರಾಯಸ್ವಾಮಿ ಬೆಂಬಲಕ್ಕಿದ್ದಾರೆಂದು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಪ್ರಕಟಗೊಂಡಿರುವುದಕ್ಕೂ ತಮಗೂ ಸಂಬಂಧವಿಲ್ಲವೆಂದೂ ಸ್ಪಷ್ಟಪಡಿಸಿದರು.

ಸುಮಲತಾ ಪ್ರವಾಸಕ್ಕೆ ಚಿತ್ರ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ಸ್ಥಳೀಯ ಕಾಂಗ್ರೆಸ್ ಮುಖಂಡರು, ಬೆಂಬಲಿಗರು ಹಾಗೂ ಅಭಿಮಾನಿಗಳು ಸಾಥ್ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News