ಪ್ರಧಾನಿ ಮೋದಿ ವಿರುದ್ದ ಹೆಚ್.ಡಿ.ದೇವೇಗೌಡ ವಾಗ್ದಾಳಿ

Update: 2019-03-17 16:12 GMT

ಶಿವಮೊಗ್ಗ, ಮಾ. 17: ಪ್ರಧಾನಮಂತ್ರಿ ನರೇಂದ್ರ ವಿರುದ್ದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ. ಪೂರ್ಣ ಬಹುಮತವಿದ್ದ ಹೊರತಾಗಿಯೂ ಸಮರ್ಥ ಆಡಳಿತ ನೀಡುವಲ್ಲಿ ವಿಫಲರಾದರು ಎಂದು ಟೀಕಿಸಿದ್ದಾರೆ. 

ರವಿವಾರ ನಗರದ ಲಗನ ಕಲ್ಯಾಣ ಮಂದಿರದಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿದ ನಂತರ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, 'ರೈತರಿಗೆ 2000 ರೂ ನೀಡುವ ಯೋಜನೆ ಚುನಾವಣೆ ಗಿಮಿಕ್ ಆಗಿದೆ. ಚುನಾವಣೆ ಹತ್ತಿರ ಬಂದಾಗ ಮೋದಿಯವರಿಗೆ ರೈತರ ನೆನಪಾಗಿದೆ' ಎಂದು ವಾಗ್ದಾಳಿ ನಡೆಸಿದರು. 

ಕಳೆದ ಲೋಕಸಭೆ ಚುನಾವಣೆಯಲ್ಲಿ 282 ಸ್ಥಾನ ಪಡೆದಿದ್ದ ಬಿಜೆಪಿ ಪಕ್ಷ, ಪ್ರಸ್ತುತ ವಿವಿಧ ರಾಜ್ಯಗಳಲ್ಲಿನ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಹಾತೊರೆಯುತ್ತಿದೆ. ಇದು ಕಳೆದ 5 ವರ್ಷದ ಅವಧಿಯಲ್ಲಿ ಕೇಂದ್ರ ಸರ್ಕಾರದ ಆಡಳಿತ ವೈಖರಿಗೆ ಸಾಕ್ಷಿಯಾಗಿದೆ ಎಂದು ಕುಟುಕಿದರು. 
ತಾವು 10 ತಿಂಗಳ ಕಾಲ ಪ್ರಧಾನಿಯಾಗಿದ್ದಾಗ, ಕಾಶ್ಮೀರದಲ್ಲಿ ಯಾವ ಘಟನೆಯೂ ನಡೆಯಲಿಲ್ಲ. ಯಾವ ವಿಮಾನವೂ ಹೈಜಾಕ್ ಆಗಲಿಲ್ಲ. ಒಂದೇ ಪಕ್ಷಕ್ಕೆ ಸಂಪೂರ್ಣ ಬೆಂಬಲ ದೊರೆತಾಗ ಮಾತ್ರ ಸುಭದ್ರ ಸರ್ಕಾರ ನಡೆಸಲು ಸಾಧ್ಯ ಎಂದು ಹೇಳುವ ಮೋದಿಯವರು, ಪೂರ್ಣ ಬಹುಮತವಿದ್ದ ಹೊರತಾಗಿಯೂ ಉತ್ತಮ ಆಡಳಿತ ನೀಡಲು ಸಾಧ್ಯವಾಗಲಿಲ್ಲ ಏಕೆ ಎಂದು ಪ್ರಶ್ನಿಸಿದರು. 

ಮೋದಿಯವರು ವಿಶ್ವದಾದ್ಯಂತ ಪ್ರವಾಸ ನಡೆಸಿದರು. ಚೀನಾ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿದಾಗ, ತೂಗೂಯ್ಯಾಲೆಯಲ್ಲಿ ಕುಳಿತು ಅವರೊಂದಿಗೆ ಮಾತನಾಡಿದ್ದರು. ಆದರೆ ಚೀನಾ ಸಹಾಯಹಸ್ತ ನೀಡಿದ್ದು ಪಾಕಿಸ್ತಾನಕ್ಕೆ. ಇದೇನಾ ನಿಮ್ಮ ಪ್ರವಾಸದ ಫಲಿತಾಂಶ ಎಂದು ಟೀಕಿಸಿದರು. 

ಲೋಕಸಭೆಯಲ್ಲಿ ನಮ್ಮ ಪಕ್ಷದ ಸಂಖ್ಯಾ ಬಲ ಕಡಿಮೆಯಿರುವುದರಿಂದ ನಮಗೆ ಮಾತನಾಡುವ ಅವಕಾಶ ಕಡಿಮೆ. ಹಾಗಾಗಿ ಸ್ಪೀಕರ್ ಜೊತೆ ಚರ್ಚಿಸಿ, ನಾನು ಮುಂದೆ ಚುನಾವಣೆ ಸ್ಪರ್ಧಿಸುತ್ತೇನೋ ಇಲ್ಲವೋ ಗೊತ್ತಿಲ್ಲ. ನನಗೆ ಮಾತನಾಡಲು ಅರ್ಧ ಗಂಟೆ ಅವಕಾಶ ಕೊಡಿ ಎಂದು ಮನವಿ ಮಾಡಿದ್ದೆ. ಮಾತನಾಡಲು ಅವಕಾಶ ಕೂಡ ನೀಡಿದ್ದರು. ಆದರೆ ತಾವು ಎತ್ತಿದ್ದ ಪ್ರಶ್ನೆಗೆ ಮೋದಿಯವರು ಯಾವುದೇ ಉತ್ತರ ನೀಡಲಿಲ್ಲ ಎಂದು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News