ಎನ್‌ಎಫ್‌ಎಐನಲ್ಲಿ 31,000ಕ್ಕೂ ಅಧಿಕ ಚಲನಚಿತ್ರ ಸುರುಳಿಗಳು ನಾಪತ್ತೆ ಅಥವಾ ನಾಶ: ಸಿಎಜಿ ವರದಿ

Update: 2019-03-17 17:17 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಮಾ.17: ಪುಣೆಯಲ್ಲಿರುವ ಭಾರತೀಯ ರಾಷ್ಟ್ರೀಯ ಚಲನಚಿತ್ರ ಪತ್ರಾಗಾರ (ಎನ್‌ಎಫ್‌ಎಐ)ದಲ್ಲಿದ್ದ 31,000ಕ್ಕೂ ಅಧಿಕ ಅಮೂಲ್ಯ ಚಲನಚಿತ್ರಗಳ ಸುರುಳಿಗಳು ಅಥವಾ ಕ್ಯಾನ್‌ಗಳು ನಾಪತ್ತೆಯಾಗಿವೆ ಇಲ್ಲವೇ ನಾಶಗೊಂಡಿವೆ ಎಂದು ಸಿಎಜಿ ತನ್ನ ವರದಿಯಲ್ಲಿ ತಿಳಿಸಿದ್ದು,ಇದನ್ನು ಎನ್‌ಎಫ್‌ಎಐ ನಿರಾಕರಿಸಿದೆ.

ಸಿಎಜಿಯು 2015, ಮೇ 1ರಿಂದ 2017,ಸೆ.30ರವರೆಗೆ ಎನ್‌ಎಫ್‌ಎಐನಲ್ಲಿದ್ದ ದಾಖಲೆಗಳ ತಪಾಸಣೆಯನ್ನು ಕೈಗೊಂಡಿತ್ತು ಮತ್ತು ಸಿಎಜಿಯ ಡಿಪಿಸಿ ಕಾಯ್ದೆಯಡಿ 2017,ಅ.3ರಿಂದ 2017,ಅ.18ರವರೆಗೆ ಸ್ಥಳೀಯವಾಗಿ ತಪಾಸಣೆಯನ್ನು ನಡೆಸಲಾಗಿತ್ತು.

ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧೀನದಲ್ಲಿರುವ ಎನ್‌ಎಫ್‌ಎಐ 106 ವರ್ಷಗಳಿಗೂ ಅಧಿಕ ಇತಿಹಾಸ ಹೊಂದಿರುವ ಭಾರತೀಯ ಸಿನಿಮಾ ರಂಗಕ್ಕೆ ಸಂಬಂಧಿಸಿದಂತೆ ಚಲನಚಿತ್ರಗಳು,ವೀಡಿಯೊ ಕ್ಯಾಸೆಟ್‌ಗಳು, ಡಿವಿಡಿಗಳು,ಪುಸ್ತಕಗಳು,ಪೋಸ್ಟರ್‌ಗಳು,ಸ್ಥಿರಚಿತ್ರಗಳು,ಪತ್ರಿಕಾ ವರದಿಗಳ ತುಣುಕುಗಳು, ಸ್ಲೈಡ್‌ಗಳು,ಆಡಿಯೊ ಸಿಡಿಗಳು,ಡಿಸ್ಕ್ ರೆಕಾರ್ಡ್‌ಗಳು ಇತ್ಯಾದಿಗಳನ್ನು ಸಂಗ್ರಹಿಸಿಡುತ್ತದೆ.

ಆರ್‌ಟಿಐ ಕಾಯ್ದೆಯಡಿ ಉತ್ತರದಲ್ಲಿ ಅರ್ಜಿದಾರರು ಪಡೆದುಕೊಂಡಿರುವ ತಪಾಸಣಾ ವರದಿಯಲ್ಲಿ 2016-17ರ ಅವಧಿಯಲ್ಲಿ ವಾಚನಾಲಯದಲ್ಲಿನ ಪುಸ್ತಕಗಳ ಭೌತಿಕ ದೃಢೀಕರಣವನ್ನು ನಡೆಸಲಾಗಿತ್ತು ಮತ್ತು ಎನ್‌ಎಫ್‌ಎಐ ನಿರ್ದೇಶಕರಿಗೆ ವರದಿಯನ್ನು ಸಲ್ಲಿಸಲಾಗಿತ್ತು. ಆದರೆ ಕ್ಯಾಸೆಟ್‌ಗಳು,ಡಿಸ್ಕ ರೆಕಾರ್ಡ್‌ಗಳು ಇತ್ಯಾದಿಗಳಿಗೆ ಸಂಬಂಧಿಸಿದಂತೆ ಇಂತಹ ತಪಾಸಣೆಯನ್ನು ಎಂದಿಗೂ ನಡೆಸಿರಲಿಲ್ಲ ಎಂದು ಹೇಳಲಾಗಿದೆ.

ಎನ್‌ಎಫ್‌ಎಐನ ರಿಜಿಸ್ಟರ್‌ನಲ್ಲಿ ದಾಖಲಾಗಿದ್ದ 1,32,000 ಚಲನಚಿತ್ರ ಸುರುಳಿಗಳು ಮತ್ತು ಕ್ಯಾನ್‌ಗಳ ಪೈಕಿ ಕೇವಲ 1,00,377 ಚಲನಚಿತ್ರ ಸುರುಳಿ/ಕ್ಯಾನ್‌ಗಳಿಗೆ ಬಾರ್‌ಕೋಡ್ ಸ್ಟಿಕರ್‌ಗಳನ್ನು ಅಂಟಿಸಲಾಗಿದ್ದು,31,263 ನಾಪತ್ತೆಯಾಗಿವೆ ಇಲ್ಲವೇ ಹಾನಿಗೀಡಾಗಿವೆ ಎಂದು ಸಿಎಜಿ ಬೆಟ್ಟುಮಾಡಿದೆ.

ಆದರೆ ಇದನ್ನು ನಿರಾಕರಿಸಿರುವ ಎನ್‌ಎಫ್‌ಎಐ, ಸಿಬ್ಬಂದಿಗಳ ತಪ್ಪಿನಿಂದಾಗಿ ವ್ಯತ್ಯಾಸಗಳು ಕಂಡು ಬಂದ ಸುರುಳಿಗಳು/ಕ್ಯಾನ್‌ಗಳಿಗೆ ಗುತ್ತಿಗೆದಾರರು ಸ್ಟಿಕರ್‌ಗಳನ್ನು ಅಂಟಿಸಿಲ್ಲ. ಹೀಗಾಗಿ ಅವರು 1,00,377 ಸುರುಳಿಗಳು/ಕ್ಯಾನ್‌ಗಳಿಗೆ ಮಾತ್ರ ಸ್ಟಿಕರ್‌ಗಳನ್ನು ಅಂಟಿಸಿದ್ದಾರೆ ಮತ್ತು ಅಷ್ಟಕ್ಕೆ ಅವರಿಗೆ ಹಣವನ್ನು ಪಾವತಿಸಲಾಗಿದೆ. ಇದರ ಅರ್ಥ ಉಳಿದ ಸುರುಳಿಗಳು/ಕ್ಯಾನ್‌ಗಳು ಕಳೆದಿವೆ ಅಥವಾ ಹಾನಿಗೀಡಾಗಿವೆ ಎಂದು ಅರ್ಥವಲ್ಲ ಎಂದು ಸಮಜಾಯಿಷಿ ನೀಡಿದ್ದು,ಇದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಈ ಉತ್ತರವು ತೃಪ್ತಿಕರವಾಗಿಲ್ಲ ಎಂದು ಸಿಎಜಿ ಅಭಿಪ್ರಾಯ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News