ಇಂಡೊನೇಶ್ಯ: ದಿಢೀರ್ ಪ್ರವಾಹಕ್ಕೆ ಕನಿಷ್ಠ 50 ಬಲಿ

Update: 2019-03-17 17:19 GMT

ಜಯಪುರ (ಇಂಡೊನೇಶ್ಯ),ಮಾ.17: ಇಂಡೊನೇಶ್ಯದ ಪೂರ್ವ ಪಪುವಾ ಪ್ರಾಂತ್ಯದಲ್ಲಿ ಶನಿವಾರ ಸಂಭವಿಸಿದ ದಿಢೀರ್ ಪ್ರವಾಹಕ್ಕೆ ಕನಿಷ್ಠ 50 ಮಂದಿ ಬಲಿಯಾಗಿದ್ದಾರೆ.

ಪ್ರಾಂತೀಯ ರಾಜಧಾನಿ ಜಯಪುರ ಸಮೀಪದ ಸೆಂತಾನಿ ಎಂಬಲ್ಲಿ ಶನಿವಾರ ಧಾರಾಕಾರ ಮಳೆ ಸುರಿದಿದ್ದು, ವ್ಯಾಪಕವಾಗಿ ಭೂಕುಸಿತವಾಗಿದೆ ಎಂದು ಮೂಲಗಳು ತಿಳಿಸಿವೆ. ನೂರಾರು ಮನೆಗಳು ಪ್ರವಾಹದಿಂದಾಗಿ ಹಾನಿಗೀಡಾಗಿವೆಯೆಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಏಜೆನ್ಸಿಯ ವಕ್ತಾರ ಸುಟೊಪೊ ಪುರ್ವೊ ನುಗ್ರೊಹೊ ತಿಳಿಸಿದ್ದಾರೆ.

ಮಳೆ ಹಾಗೂ ಭೂಕುಸಿತದಿಂದಾಗಿ ಸಂಭವಿಸಿದ ದುರಂತಗಳಲ್ಲಿ ಕನಿಷ್ಠ 50 ಮಂದಿ ಮೃತಪಟ್ಟಿದ್ದು, ಇತರ 59 ಮಂದಿ ಗಾಯಗೊಂಡಿದ್ದಾರೆ ಎಂದವರು ಹೇಳಿದ್ದಾರೆ.

 ನೆರೆಪೀಡಿತ ಪ್ರದೇಶಗಳಲ್ಲಿ ರಕ್ಷಣೆ ಹಾಗೂ ಶೋಧ ತಂಡಗಳು ಜಂಟಿ ಕಾರ್ಯಾಚರಣೆ ನಡೆಸುತ್ತಿವೆ. ಆದರೆ ಕುಸಿದ ಮಣ್ಣಿನರಾಶಿ ಹಾಗೂ ಉರುಳಿಬಿದ್ದಿರುವ ಭಾರೀ ಗಾತ್ರದ ಮರಗಳು, ಬಂಡೆಗಲ್ಲುಗಳಿಂದಾಗಿ, ಹಲವಾರು ಪ್ರದೇಶಗಳನ್ನು ತಲುಪಲು ಸಾಧ್ಯವಾಗುತ್ತಿಲ್ಲವೆಂದು ನುಗ್ರೊಹೊ ಹೇಳಿದ್ದಾರೆ.

ಇಂಡೊನೇಶ್ಯದಲ್ಲಿ ದಿಢೀರ್ ಪ್ರವಾಹ ಸಾಮಾನ್ಯವಾಗಿದ್ದು, ಕಳೆದ ಜನವರಿಯಲ್ಲಿ ಸುಲಾವೆಸಿ ದ್ವೀಪದಲ್ಲಿ ಸಂಭವಿಸಿದ ದಿಢೀರ್ ಪ್ರವಾಹದಲ್ಲಿ ಕನಿಷ್ಠ 70 ಮಂದಿ ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News