​ಕೌಟುಂಬಿಕ ವ್ಯಾಜ್ಯಗಳ ಕುರಿತು ಸುದ್ದಿ ಪ್ರಸಾರ ಮಾಡುವುದು ನಿಷಿದ್ಧ: ಹೈಕೋರ್ಟ್

Update: 2019-03-17 17:38 GMT

ಬೆಂಗಳೂರು, ಮಾ.17: ನ್ಯಾಯಾಲಯಗಳಲ್ಲಿರುವ ಕೌಟುಂಬಿಕ ವ್ಯಾಜ್ಯಗಳ ಕುರಿತು ಸುದ್ದಿ ಪ್ರಕಟಿಸುವುದು ಅಥವಾ ಮಾಹಿತಿ ನೀಡುವುದು ಕಾನೂನು ಪ್ರಕಾರ ನಿಷಿದ್ಧ ಎಂದು ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.

 ಕೌಟುಂಬಿಕ ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿಯಿದ್ದ ತಮ್ಮ ವಿವಾಹ ವಿಚ್ಛೇದನ ಪ್ರಕರಣದ ಕುರಿತು 2010ರಲ್ಲಿ ಖಾಸಗಿ ವಾಹಿನಿಯೊಂದು ವರದಿ ಮಾಡಿದ್ದನ್ನು ನಿರ್ಬಂಧಿಸುವಂತೆ ಕೋರಿ ಮಹಿಳಾ ಸಾಫ್ಟ್‌ವೇರ್ ಎಂಜಿನಿಯರೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ, ಮಾಧ್ಯಮಗಳು ಹೇಗೆ ವರದಿ ಮಾಡಬೇಕು ಎಂಬುದರ ಕುರಿತು ಆದೇಶದಲ್ಲಿ ವಿವರವಾಗಿ ತಿಳಿಸಿದೆ.

ಭ್ರಷ್ಟಾಚಾರ, ಸ್ವಜನಪಕ್ಷಪಾತ, ಆರೋಗ್ಯ, ವಿಜ್ಞಾನ-ತಂತ್ರಜ್ಞಾನ, ಕಾನೂನು ಉಲ್ಲಂಘನೆ, ಕಾನೂನು ಮತ್ತು ಸುವ್ಯವಸ್ಥೆ ಏಕಪಕ್ಷೀಯ ನಿರ್ಧಾರಗಳು ಮತ್ತು ಆರ್ಥಿಕ ವ್ಯವಸ್ಥೆಗಳಂತಹ ಸಾರ್ವಜನಿಕ ವಿಚಾರಗಳ ಬಗ್ಗೆ ಮಾಧ್ಯಮಗಳು ಜನರಿಗೆ ಮಾಹಿತಿ ನೀಡಿ ಸುದ್ದಿ ಪ್ರಸಾರ ಮಾಡುವುದು ಸರಿ. ಆದರೆ, ವ್ಯಕ್ತಿಗಳ ಖಾಸಗಿತನಕ್ಕೆ ಧಕ್ಕೆಯಾಗುವಂತಹ ಸುದ್ದಿ ಪ್ರಸಾರ ಮಾಡಬಾರದು. ಅದರಲ್ಲೂ ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕೆ ಬಾಕಿಯಿರುವ ಕೌಟುಂಬಿಕ ವ್ಯಾಜ್ಯಗಳ ಕುರಿತು ಯಾವುದೇ ಬಗೆಯ ಸುದ್ದಿ ಅಥವಾ ಮಾಹಿತಿ ಪ್ರಸಾರ ಮಾಡುವುದು ಕಾನೂನು ಪ್ರಕಾರ ನಿಷಿದ್ಧ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಅಲ್ಲದೆ, ಭಾರತೀಯ ದಂಡ ಸಂಹಿತೆ, ಹಿಂದೂ ವಿವಾಹ ಕಾಯ್ದೆ, ಮಕ್ಕಳ ಹಕ್ಕುಗಳ ರಕ್ಷಣಾ ಕಾಯ್ದೆ, ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಸೇರಿದಂತೆ ಇತರೆ ಕೌಟುಂಬಿಕ ವಿಚಾರಗಳ ಕುರಿತ ಮಾಧ್ಯಮಗಳಲ್ಲಿ ಪ್ರಸಾರ ಮಾಡುವುದರ ಬಗೆಗಿನ ನಿರ್ಬಂಧಗಳು ಶಾಸನಗಳಲ್ಲಿವೆ. ಮಾಧ್ಯಮಗಳು ಅವುಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News